ವಿಶ್ವ ರೈಲ್ವೆ ಸೈಕ್ಲಿಂಗ್‌: ಬೆಳ್ಳಿಯ ಪದಕ ಗೆದ್ದ ಭಾರತ ತಂಡ

7
ರಾಜ್ಯದ ಸಂದೇಶ, ಶ್ರೀಧರ ಮಿಂಚು

ವಿಶ್ವ ರೈಲ್ವೆ ಸೈಕ್ಲಿಂಗ್‌: ಬೆಳ್ಳಿಯ ಪದಕ ಗೆದ್ದ ಭಾರತ ತಂಡ

Published:
Updated:
Deccan Herald

ಹುಬ್ಬಳ್ಳಿ: ಕರ್ನಾಟಕದ ಇಬ್ಬರು ಸೈಕ್ಲಿಸ್ಟ್‌ಗಳನ್ನು ಒಳಗೊಂಡ ಭಾರತ ರೈಲ್ವೆ ತಂಡ ರಾಜಸ್ಥಾನದ ಬಿಕಾನೇರ್‌ನಲ್ಲಿ ನಡೆಯುತ್ತಿರುವ ವಿಶ್ವ ರೈಲ್ವೆ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಮಂಗಳವಾರ ಬೆಳ್ಳಿ ಪದಕ ಗೆದ್ದುಕೊಂಡಿದೆ.

ಪುರುಷರ ರೋಡ್‌ ಟೈಮ್‌ ಟ್ರಯಲ್ಸ್‌ನ ತಂಡ ವಿಭಾಗದ 40 ಕಿ.ಮೀ. ಗುರಿಯನ್ನು ಭಾರತ 50 ನಿಮಿಷ ಒಂಬತ್ತು ಸೆಕೆಂಡುಗಳಲ್ಲಿ ತಲುಪಿತು. ಐದು ಸೆಕೆಂಡ್‌ ಬೇಗನೆ ಗುರಿ ಮುಟ್ಟಿದ ಫ್ರಾನ್ಸ್‌ ಚಿನ್ನ ತನ್ನದಾಗಿಸಿಕೊಂಡಿತು. ಸ್ವಿಟ್ಜರ್‌ಲೆಂಡ್‌ ಕಂಚು ಪಡೆಯಿತು.

ನೈರುತ್ಯ ರೈಲ್ವೆ ಉದ್ಯೋಗಿ ಹಾವೇರಿ ಜಿಲ್ಲೆಯ ಶಿಗ್ಗಾವಿಯ ಸಂದೇಶ ಉಪ್ಪಾರ ಮತ್ತು ಕೇಂದ್ರ ರೈಲ್ವೆಯ ಉದ್ಯೋಗಿ ಜಮಖಂಡಿಯ ಶ್ರೀಧರ ಸವಣೂರ ಭಾರತ ತಂಡದಲ್ಲಿದ್ದರು. ಸಂದೇಶ ಬಾಗಲಕೋಟೆಯಲ್ಲಿ, ಶ್ರೀಧರ ಸೊಲ್ಲಾಪುರದಲ್ಲಿ ಕೆಲಸ ಮಾಡುತ್ತಿದ್ದಾರೆ. ಹರಿಯಾಣದ ಅರವಿಂದ ಪನ್ವಾರ್‌, ರಾಜಸ್ಥಾನದ ದೇವಕಿಶನ್‌ ಮತ್ತು ಮನೋಹರ ಬಿಷ್ಣೋಯಿ ಆತಿಥೇಯ ತಂಡದ ಇತರ ಸದಸ್ಯರು. ಚಾಂಪಿಯನ್‌ಷಿಪ್‌ನ ಕೊನೆಯ ದಿನವಾದ ಗುರುವಾರ ವೈಯಕ್ತಿಕ ಟೈಮ್‌ ಟ್ರಯಲ್ಸ್‌ ಸ್ಪರ್ಧೆ ಜರುಗಲಿದೆ.

ಮೂರು ದಿನಗಳ ಟೂರ್ನಿಯಲ್ಲಿ ಭಾರತ, ಡೆನ್ಮಾರ್ಕ್‌, ಫ್ರಾನ್ಸ್‌, ಜೆಕ್‌ ಗಣರಾಜ್ಯ, ಸ್ವಿಟ್ಜರ್‌ಲೆಂಡ್‌, ಬ್ರಿಟನ್‌, ನಾರ್ವೆ ಮತ್ತು ರಷ್ಯಾ ರೈಲ್ವೆಯ ಸೈಕ್ಲಿಸ್ಟ್‌ಗಳು ಭಾಗವಹಿಸಿದ್ದಾರೆ.

‘40 ಕಿ.ಮೀ. ದೂರದ ಸ್ಪರ್ಧೆಯ ಮೊದಲ 20 ಕಿ.ಮೀ. ಸಾಗುವಷ್ಟರಲ್ಲಿ ಫ್ರಾನ್ಸ್‌ ತಂಡದ ಜೊತೆ ಭಾರತ ಕಠಿಣ ಪೈಪೋಟಿ ನಡೆಸಿತ್ತು. ಮೊದಲ ಲ್ಯಾಪ್‌ ಅಂತ್ಯವಾದಾಗ ಫ್ರಾನ್ಸ್‌ ಹತ್ತು ಸೆಕೆಂಡುಗಳ ಮುನ್ನಡೆ ಮಾತ್ರ ಹೊಂದಿತ್ತು. ಎರಡನೇ ಲ್ಯಾಪ್‌ನಲ್ಲಿ ಐದು ಸೆಕೆಂಡ್‌ ಅಂತರ ಕಡಿಮೆ ಮಾಡಿಕೊಳ್ಳಲಷ್ಟೇ ನಮಗೆ ಸಾಧ್ಯವಾಯಿತು. ಕೊನೆಯಲ್ಲಿ ಆ ದೇಶದ ಸೈಕ್ಲಿಸ್ಟ್‌ಗಳು ವೇಗ ಹೆಚ್ಚಿಸಿಕೊಂಡ ಕಾರಣ ಚಿನ್ನ ನಮ್ಮ ಕೈತಪ್ಪಿತು. ಪ್ರಬಲ ಪೈಪೋಟಿಯ ನಡುವೆಯೂ ಬೆಳ್ಳಿ ಜಯಿಸಿದ್ದಕ್ಕೆ ಸಂತೋಷವಾಗಿದೆ’ ಎಂದು ಸಂದೇಶ ಉಪ್ಪಾರ ‘ಪ್ರಜಾವಾಣಿ’ ಜೊತೆ ಅನಿಸಿಕೆ ಹಂಚಿಕೊಂಡರು.

2012ರ ವಿಶ್ವ ರೈಲ್ವೆ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡ ಇದೇ ವಿಭಾಗದಲ್ಲಿ ಕಂಚಿನ ಪದಕ ಪಡೆದಿತ್ತು. ಫ್ರಾನ್ಸ್‌ ಆಗಲೂ ಚಿನ್ನ ಗೆದ್ದಿತ್ತು.

ಅಕ್ಟೋಬರ್‌ನಲ್ಲಿ ನಡೆದಿದ್ದ ಅಖಿಲ ಭಾರತ ರೈಲ್ವೆ ಚಾಂಪಿಯನ್‌ಷಿಪ್‌ನಲ್ಲಿ ಸಂದೇಶ ಎರಡು ಪದಕಗಳನ್ನು ಪಡೆದಿದ್ದರು. 70 ಕಿ.ಮೀ. ಟೈಮ್‌ ಟ್ರಯಲ್ಸ್‌ ತಂಡ ವಿಭಾಗದಲ್ಲಿ ಚಿನ್ನ ಮತ್ತು 120 ಕಿ.ಮೀ. ರೋಡ್‌ ಮಾಸ್ಡ್‌ ಸ್ಟಾರ್ಟ್‌ ವಿಭಾಗದಲ್ಲಿ ಕಂಚು ಜಯಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !