ಬುಧವಾರ, ಸೆಪ್ಟೆಂಬರ್ 22, 2021
29 °C

ಬ್ಯಾಡ್ಮಿಂಟನ್ ದಿಗ್ಗಜ ನಂದು ನಟೇಕರ್ ಇನ್ನಿಲ್ಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪುಣೆ: ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ನೂರಕ್ಕೂ ಹೆಚ್ಚು ಪ್ರಶಸ್ತಿಗಳ ವಿಜೇತ, ಭಾರತದ ಬ್ಯಾಡ್ಮಿಂಟನ್ ದಿಗ್ಗಜ ನಂದು ನಟೇಕರ್‌ (88) ಬುಧವಾರ ನಿಧನರಾದರು. ವಯೋಸಹಜ ಕಾಯಿಲೆಗಳಿಂದ ಅವರು ಬಳಲುತ್ತಿದ್ದರು.

ನಂದು ಅವರಿಗೆ ಪುತ್ರ, ಟೆನಿಸ್ ಆಟಗಾರ ಗೌರವ್ ಹಾಗೂ ಇಬ್ಬರು ಪುತ್ರಿಯರಿದ್ದಾರೆ.

‘ತಂದೆಯವರು ಇಂದು ನಿಧನರಾಗಿದ್ದಾರೆ. ಕಳೆದ ಮೂರು ತಿಂಗಳುಗಳಿಂದ ಅವರನ್ನು ಅನಾರೋಗ್ಯ ಬಾಧಿಸುತ್ತಿತ್ತು‘ ಎಂದು ಗೌರವ್ ತಿಳಿಸಿದ್ದಾರೆ.

ಖ್ಯಾತ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದ ನಂದು, ಟೆನಿಸ್, ಬ್ಯಾಡ್ಮಿಂಟನ್ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಆಡಿದ ಹಿರಿಮೆ ಹೊಂದಿದ್ದರು.

1933ರಲ್ಲಿ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಜನಿಸಿದ್ದ ನಂದು ಅವರು ಆರಂಭದಲ್ಲಿ ಟೆನಿಸ್‌ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡಿದ್ದರು.1951–52ರ ರಾಷ್ಟ್ರೀಯ ಜೂನಿಯರ್ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ದಿಗ್ಗಜ ಆಟಗಾರ ರಾಮನಾಥನ್ ಕೃಷ್ಣನ್ ಎದುರು ಸೋತ ಬಳಿಕ ಅವರು ಬ್ಯಾಡ್ಮಿಂಟನ್‌ನತ್ತ ಮುಖ ಮಾಡಿದರು.

ಬ್ಯಾಡ್ಮಿಂಟನ್‌ನಲ್ಲಿ ಆರು ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದ ನಂದು, 1951ರಿಂದ 1963ರವರೆಗೆ ಅವರು ಥಾಮಸ್‌ ಕಪ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡದಲ್ಲಿ ಆಡಿದ್ದರು.

1961ರಲ್ಲಿ ಮೊದಲ ಅರ್ಜುನ ಪ್ರಶಸ್ತಿಗೆ ಭಾಜನರಾದ ನಂದು, ರಾಕೆಟ್‌ನೊಂದಿಗಿನ ಕಲಾತ್ಮಕತೆಗೆ ಹೆಸರುವಾಸಿಯಾಗಿದ್ದರು.  ಕೌಶಲ್ಯ ಮತ್ತು ಪರಿಪೂರ್ಣತೆಯಿಂದ ಕೂಡಿದ ಹೊಡೆತಗಳಿಂದ ಎದುರಾಳಿಗಳನ್ನು ಮಂತ್ರಮುಗ್ಧಗೊಳಿಸುತ್ತಿದ್ದರು. 1956ರಲ್ಲಿ ಕ್ವಾಲಾಲಂಪುರದಲ್ಲಿ ನಡೆದ ಸೆಲಂಗೊರ್‌ ಟ್ರೋಫಿ ಟೂರ್ನಿಯನ್ನು ಜಯಿಸುವ ಮೂಲಕ ಅಂತರರಾಷ್ಟ್ರೀಯ ಟೂರ್ನಿಯೊಂದರಲ್ಲಿ ಜಯಿಸಿದ ಭಾರತದ ಮೊದಲ ಬ್ಯಾಡ್ಮಿಂಟನ್ ಆಟಗಾರ ಎನಿಸಿಕೊಂಡರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನಕ್ಕೇರಿದ್ದ ನಂದು ಅವರು 1965ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸಿದ್ದರು. 1954ರಲ್ಲಿ ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದರು.

ಕ್ರೀಡೆಯಿಂದ ನಿವೃತ್ತರಾದ ಬಳಿಕ 1990–94ರ ಅವಧಿಯಲ್ಲಿ ಮಹಾರಾಷ್ಟ್ರ ಬ್ಯಾಡ್ಮಿಂಟನ್ ಸಂಸ್ಥೆಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

ನಂದು ನಟೇಕರ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್‌, ರಾಷ್ಟ್ರೀಯ ಬ್ಯಾಡ್ಮಿಂಟನ್ ತಂಡದ ಕೋಚ್ ಪುಲ್ಲೇಲ ಗೋಪಿಚಂದ್, ಮಾಜಿ ಆಟಗಾರ ವಿಮಲ್ ಕುಮಾರ್‌ ಮತ್ತಿತರರು ಕಂಬನಿ ಮಿಡಿದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು