ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್ಲೈನ್ ಆಟಗಳಿಗೆ ಶುಲ್ಕ ಮಿತಿ ಹೇರಲು ಸ್ವದೇಶಿ ಜಾಗರಣ ಮಂಚ್‌ ಒತ್ತಾಯ

Last Updated 20 ಸೆಪ್ಟೆಂಬರ್ 2022, 13:56 IST
ಅಕ್ಷರ ಗಾತ್ರ

ನವದೆಹಲಿ (ರಾಯಿಟರ್ಸ್): ಆನ್‌ಲೈನ್‌ ಆಟಗಳಲ್ಲಿ ಪಾಲ್ಗೊಳ್ಳುವವರು ಪಾವತಿ ಮಾಡಬೇಕಿರುವ ಪ್ರವೇಶ ಶುಲ್ಕಕ್ಕೆ ಮಿತಿ ಹೇರಬೇಕು ಎಂದು ಸ್ವದೇಶಿ ಜಾಗರಣ ಮಂಚ್ ಆಗ್ರಹಿಸಿದೆ.

ದೇಶದಲ್ಲಿ ಹಣ ತೊಡಗಿಸಿ ಆಡುವ ಆನ್‌ಲೈನ್‌ ಆಟಗಳು ಜನಪ್ರಿಯ ಆಗುತ್ತಿವೆ. ಇಂತಹ ಆಟಗಳಿಗೆ ಕೆಲವು ಕ್ರಿಕೆಟಿಗರ ಬೆಂಬಲ ಕೂಡ ಇದೆ. ಆನ್‌ಲೈನ್‌ ಆಟಗಳಲ್ಲಿ ಹಣ ತೊಡಗಿಸಿ, ಜನ ಹಣ ಕಳೆದುಕೊಂಡಿರುವ, ಸಣ್ಣ ವಯಸ್ಸಿನವರು ಆತ್ಮಹತ್ಯೆ ಮಾಡಿಕೊಂಡಿರುವ ವರದಿಗಳು ಇವೆ.

ಹಣ ತೊಡಗಿಸಿ ಆಡುವ ಆಟಗಳು ಒಟ್ಟು ಆನ್‌ಲೈನ್‌ ಆಟಗಳ ಮಾರುಕಟ್ಟೆಯ ಶೇಕಡ 53ರಷ್ಟು ಪಾಲನ್ನು ಪಡೆಯುವ ಅಂದಾಜು ಇದೆ. 2026ರ ವೇಳೆಗೆ ಆನ್‌ಲೈನ್‌ ಆಟಗಳ ಮಾರುಕಟ್ಟೆಯು ₹ 55 ಸಾವಿರ ಕೋಟಿ ವಹಿವಾಟು ಕಾಣುವ ಅಂದಾಜು ಇದೆ.

‘ಪ್ರವೇಶ ಶುಲ್ಕವು ₹ 50ಕ್ಕಿಂತ ಹೆಚ್ಚಿರಬಾರದು’ ಎಂದು ಸ್ವದೇಶಿ ಜಾಗರಣ ಮಂಚ್‌ನ ಪದಾಧಿಕಾರಿ ಅಶ್ವನಿ ಮಹಾಜನ್ ಹೇಳಿದ್ದಾರೆ. ಈ ಸಂಬಂಧ ತಾವು ಸಂಬಂಧಪಟ್ಟ ಸಚಿವಾಲಯಗಳ ಜೊತೆ ಮಾತುಕತೆ ನಡೆಸುವುದಾಗಿ ಅವರು ಹೇಳಿದ್ದಾರೆ. ಈ ಸಂಘಟನೆಯು ಸಂಘ ಪರಿವಾರಕ್ಕೆ ಸೇರಿದೆ.

ದೇಶದ ಆನ್‌ಲೈನ್ ಆಟಗಳ ಉದ್ಯಮದಲ್ಲಿ ಟೈಗರ್ ಗ್ಲೋಬಲ್, ಸಿಕೋಯಾ ಕ್ಯಾಪಿಟಲ್‌ನಂತಹ ಸಂಸ್ಥೆಗಳು ಹಣ ಹೂಡಿಕೆ ಮಾಡಿವೆ. ಕೇಂದ್ರ ಸರ್ಕಾರ ರಚಿಸಿದ್ದ ಸಮಿತಿಯೊಂದು, ಆನ್‌ಲೈನ್‌ ಆಟಗಳಲ್ಲಿ ತೊಡಗಿಸುವ ಹಣಕ್ಕೆ ಹಾಗೂ ಅಲ್ಲಿಂದ ಹಿಂದಕ್ಕೆ ಪಡೆಯುವ ಮೊತ್ತಕ್ಕೆ ಮಿತಿ ಇರಬೇಕು ಎಂದು ಈಚೆಗೆ ಶಿಫಾರಸು ಮಾಡಿದೆ. ಆದರೆ ಪ್ರವೇಶ ಶುಲ್ಕಕ್ಕೆ ಮಿತಿ ಇರಬೇಕು ಎಂದು ಅದು ಹೇಳಿಲ್ಲ.

ಹೀಗಿದ್ದರೂ, ಸಮಿತಿಯ ಶಿಫಾರಸುಗಳು ಆನ್‌ಲೈನ್‌ ಆಟ ಉದ್ಯಮದ ವರಮಾನ ಹಾಗೂ ಬೆಳವಣಿಗೆಯ ಸಾಮರ್ಥ್ಯದ ಮೇಲೆ ಪರಿಣಾಮ ಉಂಟುಮಾಡುತ್ತವೆ ಎಂದು ಉದ್ಯಮದ ಮೂಲಗಳು ಹೇಳಿವೆ. ಈ ವಿಚಾರವನ್ನು ಕೇಂದ್ರದ ಗಮನಕ್ಕೆ ತರುವುದಾಗಿಯೂ ಮೂಲಗಳು ತಿಳಿಸಿವೆ.

ಇ–ಗೇಮಿಂಗ್ ಒಕ್ಕೂಟದ ಮುಖ್ಯ ಕಾರ್ಯನಿರ್ವಾಹಕ ಸಮೀರ್ ಬರ್ಡೆ ಅವರು, ‘ಇಂತಹ ಮಿತಿಗಳು ನ್ಯಾಯಸಮ್ಮತವಲ್ಲ. ಇಂತಹ ಮಿತಿಗಳು ಇದ್ದಾಗ ಕಂಪನಿಗಳಿಗೆ ಕೆಲಸ ಮಾಡಲು ಆಗುವುದಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT