ಆತಿಥೇಯರಿಗೆ ಹತ್ತರೊಳಗಿನ ಸ್ಥಾನದ ಮೇಲೆ ಕಣ್ಣು

7
ಬ್ರಿಡ್ಜ್‌ನಲ್ಲಿ ಭಾರತ, ಚೀನಾ ಮತ್ತು ಜಪಾನ್‌ನ ಸವಾಲು ಸ್ವೀಕರಿಸಲು ಸಜ್ಜು

ಆತಿಥೇಯರಿಗೆ ಹತ್ತರೊಳಗಿನ ಸ್ಥಾನದ ಮೇಲೆ ಕಣ್ಣು

Published:
Updated:
Deccan Herald

ಜಕಾರ್ತ (ರಾಯಿಟರ್ಸ್‌/ಪಿಟಿಐ/ಎಎಫ್‌ಪಿ): ಈ ಬಾರಿಯ ಏಷ್ಯನ್ ಕ್ರೀಡಾಕೂಟದ ಆತಿಥ್ಯ ವಹಿಸುತ್ತಿರುವ ಇಂಡೊನೇಷ್ಯಾ ಪಾಯಿಂಟ್ ಪಟ್ಟಿಯ ಅಗ್ರ 10ರಲ್ಲಿ ಸ್ಥಾನ ಗಳಿಸಲು ಶತಪ್ರಯತ್ನ ನಡೆಸಲಿದೆ. ಈ ದೇಶದ ಅಥ್ಲೀಟ್‌ಗಳು ತವರಿನಲ್ಲಿ ಮಿಂಚುವ ಭರವಸೆಯಲ್ಲಿದ್ದಾರೆ.

ಕೂಟದಲ್ಲಿ 45 ದೇಶಗಳ ಅಥ್ಲೀಟ್‌ಗಳು ಪಾಲ್ಗೊಳ್ಳಲಿದ್ದು 67 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಬ್ರಿಡ್ಜ್‌, ಜೆಟ್‌ ಸ್ಕೀಯಿಂಗ್‌, ರಾಲರ್‌ ಸ್ಕೇಟಿಂಗ್‌ ಮತ್ತು ಇಂಡೊನೇಷ್ಯಾದ ಸಮರ ಕಲೆ ಪೆಂಕಾಕ್ ಸಿಲಟ್‌ ಅನ್ನು ಈ ಬಾರಿ ಹೊಸದಾಗಿ ಸೇರಿಸಲಾಗಿದೆ. 

ಆತಿಥೇಯ ದೇಶವು 938 ಅಥ್ಲೀಟ್‌ಗಳನ್ನು ಕಣಕ್ಕೆ ಇಳಿಸಲಿದ್ದು 16 ಚಿನ್ನದ ಪದಕಗಳ ಮೇಲೆ ಗುರಿ ಇರಿಸಿದೆ. 1962ರಲ್ಲಿ ಒಟ್ಟು 21 ಪದಕ ಗೆದ್ದಿದ್ದ ಈ ದೇಶ 1990ರ ನಂತರ ಇಲ್ಲಿಯ ವರೆಗೆ ಅಗ್ರ 10ರಲ್ಲಿ ಸ್ಥಾನ ಗಳಿಸಲಿಲ್ಲ. 

‘ಒಲಿಂಪಿಕ್ಸ್ ಮೇಲೆ ಕಣ್ಣಿಟ್ಟು ಕಣಕ್ಕೆ ಇಳಿದರೆ ಏಷ್ಯನ್ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆಲ್ಲುವುದು ಕಷ್ಟವಲ್ಲ’ ಎಂದು ಇಂಡೊನೇಷ್ಯಾದ ಕ್ರೀಡಾ ಸಚಿವಾಲಯದ ಕಾರ್ಯದರ್ಶಿ ಗಟೋಟ್ ಎಸ್‌ ದೇವಬ್ರತೊ ಹೇಳಿದರು.

ಹೊಸ ಕ್ರೀಡೆಗಳ ಮೇಲೆ ನೋಟ: ಬ್ರಿಡ್ಜ್‌ ಸೇರಿದಂತೆ ಹೊಸ ಕ್ರೀಡೆಗಳತ್ತ ಇಂಡೊನೇಷ್ಯಾ ನೋಟ ಇರಿಸಿದೆ. ಬ್ರಿಡ್ಜ್‌ನಲ್ಲಿ ಒಟ್ಟು 24 ಮಂದಿ ಪಾಲ್ಗೊಳ್ಳುತ್ತಿದ್ದು ಪ್ರಮುಖ ಆಟಗಾರ ಮೈಕೆಲ್‌ ಬಂಬಾಂಗ್ ಹರ್ತಾನೊ ಮೇಲೆ ನಿರೀಕ್ಷೆಯ ಭಾರ ಇದೆ. ಎರಡು ತಿಂಗಳಿಂದ ಅವರು ಅಮೆರಿಕ ಮತ್ತು ಯುರೋಪ್‌ನಲ್ಲಿ ತರಬೇತಿ ಪಡೆದು ಬಂದಿದ್ದಾರೆ. ಬ್ರಿಡ್ಜ್‌ನಲ್ಲಿ ಒಟ್ಟು ಆರು ಚಿನ್ನದ ಪದಕಗಳ ಪೈಕಿ ಕನಿಷ್ಟ ಎರಡನ್ನು ಬಗಲಿಗೆ ಹಾಕಿಕೊಳ್ಳಲು ತಂಡ ಸಜ್ಜಾಗಿದೆ. ಭಾರತ, ಚೀನಾ ಮತ್ತು ಜಪಾನ್‌ನಿಂದ ಈ ದೇಶಕ್ಕೆ ಸವಾಲು ಎದುರಾಗುವ ಸಾಧ್ಯತೆ ಇದೆ.

ಕಳೆದ ಬಾರಿ ಇಂಡೊನೇಷ್ಯಾ ಕೇವಲ ನಾಲ್ಕು ಚಿನ್ನದ ಪದಕ ಗೆದ್ದಿತ್ತು. ಮಹಿಳೆಯರ ಲಾಂಗ್‌ಜಂಪ್‌, ಬ್ಯಾಡ್ಮಿಂಟನ್‌ನ ಪುರುಷ ಮತ್ತು ಮಹಿಳೆಯರ ಡಬಲ್ಸ್ ವಿಭಾಗ ಹಾಗೂ ವುಷುವಿನಲ್ಲಿ ಈ ಸಾಧನೆ ಮೂಡಿ ಬಂದಿತ್ತು.

ಜಕಾರ್ತ ತಲುಪಿದ ಕ್ರೀಡಾಜ್ಯೋತಿ

ಒಂದು ತಿಂಗಳ ತಿರುಗಾಟದ ನಂತರ ಕ್ರೀಡಾಕೂಟದ ಜ್ಯೋತಿ ಬುಧವಾರ ಇಂಡೊನೇಷ್ಯಾದ ರಾಜಧಾನಿ ಜಕಾರ್ತಗೆ ತಲುಪಿತು. ನೃತ್ಯದ ಸೊಬಗು ಮೇಳೈಸಿದ, ಸಾಂಪ್ರದಾಯಿಕ ವಾದ್ಯಘೋಷ ಮತ್ತು ಸಂಗೀತ ಮೊಳಗಿದ ಸಮಾರಂಭದಲ್ಲಿ ಜ್ಯೋತಿಯನ್ನು ಸ್ವಾಗತಿಸಲಾಯಿತು.

**

ಕ್ರೀಡಾಗ್ರಾಮದಲ್ಲಿ ಸ್ವಾತಂತ್ರ್ಯ ಸಂಭ್ರಮ

ಏಷ್ಯನ್‌ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಭಾರತದ ಅಥ್ಲೀಟ್‌ಗಳು ಕ್ರೀಡಾಗ್ರಾಮ ಮತ್ತು ಜಕಾರ್ತದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಿದರು.

ತಂಡದ ಉಪ ಚೆಫ್ ಡಿ ಮಿಷನ್‌ ಬಲಬೀರ್ ಸಿಂಗ್‌ ಕುಶ್ವಾಹ ಅವರು ಪಾಲೆಂಬಾಂಗ್‌ನಲ್ಲಿ ಧ್ವಜಾರೋಹಣ ಮಾಡಿದರು. ಈಗಾಗಲೇ ಇಲ್ಲಿಗೆ ತಲುಪಿರುವ 25 ಅಥ್ಲೀಟ್‌ಗಳು ಪಾಲ್ಗೊಂಡಿದ್ದರು. ಕ್ರೀಡಾಕೂಟದ ಸಂಯೋಜಕ ಯಾಸಿರ್‌ ಅರಾಫತ್ ಮುಖ್ಯ ಅತಿಥಿಯಾಗಿದ್ದರು.

ಜಕಾರ್ತದ ಕ್ರೀಡಾಗ್ರಾಮದಲ್ಲಿ ಪುರುಷ ಮತ್ತು ಮಹಿಳೆಯರ ಹ್ಯಾಂಡ್‌ಬಾಲ್ ತಂಡದವರು ಮತ್ತು ಅಧಿಕಾರಿಗಳು ಸರಳ ಸಮಾರಂಭದಲ್ಲಿ ಧ್ವಜಾರೋಹಣ ಮಾಡಿ ಸಂಭ್ರಮಿಸಿದರು.

ಪುರುಷರ ಹಾಕಿ ತಂಡ ಇಲ್ಲಿಗೆ ಬುಧವಾರ ಬಂದಿಳಿದಿದ್ದು ಬಾಕ್ಸರ್‌ಗಳು ಗುರುವಾರ ತಲುಪಲಿದ್ದಾರೆ. ಹಾಕಿ ತಂಡದ ನಾಯಕ ಪಿ.ಆರ್.ಶ್ರೀಜೇಶ್‌ ಅವರು ಟ್ವಿಟರ್ ಮೂಲಕ ಶುಭ ಕೋರಿದ್ದಾರೆ.

**

‘ಪಂಚ್‌’ಗೆ ಸಿದ್ಧ

ಏಷ್ಯಾದ ಬಾಕ್ಸಿಂಗ್‌ನ ಶಕ್ತಿ ಯಾಗಿರುವ ಕಜಕಸ್ತಾನದ ಬಾಕ್ಸರ್‌ಗಳು ಈ ಬಾರಿ ಪದಕಗಳ ಬೇಟೆಯಾಡುವ ಭರವಸೆ ಹೊಂದಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಈ ದೇಶ 28 ಚಿನ್ನ ಒಳಗೊಂಡಂತೆ 84 ಪದಕ ಗೆದ್ದು ನಾಲ್ಕನೇ ಸ್ಥಾನ ಗಳಿಸಿತ್ತು.

ಉದ್ಘಾಟನಾ ಸಮಾ ರಂಭದಲ್ಲಿ ದೇಶದ ಧ್ವಜ ಹಿಡಿಯಲಿರುವ 21 ವರ್ಷದ ಅಬಿಲ್‌ಖಾನ್‌ ಅಮನ್‌ಕುಲ್‌ ಅವರು ಕಳೆದ ವರ್ಷ ನಡೆದಿದ್ದ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !