ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್‌ ಟೂರ್ನಿ: ಮೊದಲ ಪಂದ್ಯದಲ್ಲೇ ಸೋತು ಹೊರಬಿದ್ದ ಹಾಲಿ ಚಾಂಪಿಯನ್ ಸೈನಾ

ಇಂಡೊನೇಷ್ಯಾ ಮಾಸ್ಟರ್ಸ್
Last Updated 15 ಜನವರಿ 2020, 11:43 IST
ಅಕ್ಷರ ಗಾತ್ರ

ಜಕಾರ್ತಾ: ಹಾಲಿ ಚಾಂಪಿಯನ್‌ ಸೈನಾ ನೆಹ್ವಾಲ್‌,ಇಂಡೊನೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯ ಮೊದಲ ಸುತ್ತಿನಲ್ಲೇ ಹೊರಬಿದ್ದರು. ಭಾರತದ ಆಟಗಾರ್ತಿ ಬುಧವಾರ ಮೂರು ಸೆಟ್‌ಗಳ ಸೆಣಸಾಟದಲ್ಲಿ ಜಪಾನ್‌ನ ಸಯಾಕಾ ತಕಾಹಶಿ ಅವರಿಗೆ ಮಣಿದರು.

ಸಂಕ್ರಾಂತಿಯ ದಿನ ಭಾರತದ ಆಟಗಾರರಿಗೆ ಗೆಲುವಿನ ಸವಿ ಸಿಗಲಿಲ್ಲ. ಪುರುಷರ ವಿಭಾಗದಲ್ಲಿ ವಿಶ್ವ ಚಾಂಪಿಯನ್‌ಷಿಪ್‌ನ ಕಂಚಿನ ಪದಕ ವಿಜೇತ ಬಿ.ಸಾಯಿಪ್ರಣೀತ್‌, ಕಿದಂಬಿ ಶ್ರೀಕಾಂತ್‌ ಮತ್ತು ಸೌರಭ್‌ ವರ್ಮಾ ಬೇಗನೇ ಗಂಟುಮೂಟೆ ಕಟ್ಟಿದರು.

ಕಳೆದ ವರ್ಷ ದಯನೀಯ ವೈಫಲ್ಯ ಕಾಣುವ ಮೊದಲು, ಈ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದ ಸೈನಾ, 50 ನಿಮಿಷಗಳ ಹೋರಾಟ ಕಂಡ ಪಂದ್ಯದಲ್ಲಿ 21-19,13-21, 5–21 ರಿಂದ ತಕಾಹಶಿ ಎದುರು ಹಿಮ್ಮೆಟ್ಟಿದರು.

ವಿಶ್ವ ಕ್ರಮಾಂಕಪಟ್ಟಿಯಲ್ಲಿ 12ನೇ ಸ್ಥಾನದಲ್ಲಿರುವ ಕಿದಂಬಿ ಶ್ರೀಕಾಂತ್‌, ಸ್ಥಳೀಯ ಆಟಗಾರ ಶೆಸರ್‌ ಹಿರೆನ್‌ ರುಸ್ಟಾವಿಟೊ ಅವರಿಗೆ ಮಣಿಸಿದರು.ಮೊದಲ ಗೇಮ್‌ ಸೋತರೂ ತಿರುಗಿಬಿದ್ದ ರುಸ್ಟಾವಿಟೊ 18–21, 21–12, 21–14 ರಿಂದ ಭಾರತದ ಆಟಗಾರರನ್ನು 62 ನಿಮಿಷಗಳ ಆಟದಲ್ಲಿ ಸೋಲಿಸಿದರು.

ಇದರಿಂದ ಶ್ರೀಕಾಂತ್‌ ಸತತ ಎರಡನೇ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದಂತೆ ಆಗಿದೆ. ಕಳೆದ ವಾರ ಮಲೇಷ್ಯಾ ಮಾಸ್ಟರ್ಸ್‌ ಟೂರ್ನಿಯಲ್ಲೂ ಅವರು ಎರಡನೇ ಸುತ್ತಿಗೆ ತಲುಪಲು ವಿಫಲರಾಗಿದ್ದರು.

ಸಾಯಿಪ್ರಣೀತ್‌ ಕೂಡ ಮೊದಲ ಸುತ್ತಿನಲ್ಲಿ 21–16, 18–21, 10–21ರಿಂದ ಎಂಟನೇ ಶ್ರೇಯಾಂಕದ ಶೀ‌ ಯು ಕಿ (ಚೀನಾ) ಅವರಿಗೆ ಮಣಿದರು. ಚೀನಾದ ಇನ್ನೊಬ್ಬ ಆಟಗಾರ ಲು ಗುವಾಂಗ್‌ ಝು 17–21, 21–5, 21–10 ರಿಂದ ಸೌರಭ್‌ ಅವರನ್ನು ಹಿಮ್ಮೆಟ್ಟಿಸಿದರು.

ಮಿಕ್ಸೆಡ್‌ ಡಬಲ್ಸ್‌ನಲ್ಲಿ ಪ್ರಣವ್‌ ಜೆರಿ ಚೋಪ್ರಾ– ಸಿಕ್ಕಿ ರೆಡ್ಡಿ 8–21, 14–21 ರಿಂದ ದಕ್ಷಿಣ ಕೊರಿಯಾದ ಕೊ ಸುಂಗ್‌ ಹ್ಯುನ್‌– ಯೊಮ್‌ ಹೆ ವಾನ್‌ ಅವರಿಗೆ ಮಣಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT