ಸೆಮಿಫೈನಲ್‌ಗೆ ಸೈನಾ ನೆಹ್ವಾಲ್‌

7
ಇಂಡೊನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿ: ಸಿಂಧು, ಶ್ರೀಕಾಂತ್‌ಗೆ ಆಘಾತ

ಸೆಮಿಫೈನಲ್‌ಗೆ ಸೈನಾ ನೆಹ್ವಾಲ್‌

Published:
Updated:
Prajavani

ಜಕಾರ್ತ: ಭಾರತದ ಸೈನಾ ನೆಹ್ವಾಲ್‌, ಇಂಡೊನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ ಹಂತ ಪ್ರವೇಶಿಸಿದರು. ಆದರೆ ಪಿ.ವಿ.ಸಿಂಧು ಮತ್ತು ಕಿದಂಬಿ ಶ್ರೀಕಾಂತ್ ಕ್ವಾರ್ಟರ್‌ ಫೈನಲ್ ಹಣಾಹಣಿಯಲ್ಲಿ ಸೋತು ಹೊರಬಿದ್ದರು.

ಎಂಟನೇ ಶ್ರೇಯಾಂಕದ ಸೈನಾ ನೆಹ್ವಾಲ್ ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಥಾಯ್ಲೆಂಡ್‌ನ ಪಾರ್ನ್‌ಪಾವಿ ಚೊಚುವಾಂಗ್ ಎದುರು 21–7, 21–18ರಲ್ಲಿ ಗೆದ್ದರು. ಕಳೆದ ವಾರ ನಡೆದಿದ್ದ ಮಲೇಷ್ಯಾ ಮಾಸ್ಟರ್ಸ್ ಟೂರ್ನಿಯಲ್ಲೂ ಅವರು ಸೆಮಿಫೈನಲ್ ಪ್ರವೇಶಿಸಿದ್ದರು.

ನಾಲ್ಕರ ಘಟ್ಟದ ಪಂದ್ಯದಲ್ಲಿ ಸೈನಾಗೆ ಚೀನಾದ ಹಿ ಬಿಂಗ್‌ಜಿಯಾವೊ ಎದುರಾಳಿ. ಅಂಗಣದಲ್ಲಿ ಇವರಿಬ್ಬರು ಈ ವರೆಗೆ ಒಮ್ಮೆಯೂ ಮುಖಾಮುಖಿಯಾಗಲಿಲ್ಲ.

ಆರಂಭದಲ್ಲೇ ಅಮೋಘ ಆಟವಾಡಿದ ಸೈನಾ ಮೊದಲ ಗೇಮ್‌ನಲ್ಲಿ 11–4ರ ಮುನ್ನಡೆಯೊಂದಿಗೆ ವಿರಾಮಕ್ಕೆ ತೆರಳಿದರು. ನಂತರವೂ ಆಕ್ರಮಣಕಾರಿ ಆಟವಾಡಿ ಎದುರಾಳಿಯನ್ನು ಕಂಗೆಡಿಸಿದರು. ಎರಡನೇ ಗೇಮ್‌ನ ಆರಂಭದಲ್ಲಿ ಎದುರಾಳಿ 8–4ರಲ್ಲಿ ಮುನ್ನಡೆದರು. ಚೇತರಿಸಿಕೊಂಡ ಸೈನಾ 12–12ರಲ್ಲಿ ಸಮಬಲ ಸಾಧಿಸಿ ನಿಟ್ಟುಸಿರು ಬಿಟ್ಟರು. ನಂತರ ಸುಲಭ ಜಯ ಸಾಧಿಸಿದರು.

ಮರಿನ್‌ಗೆ ಸಾಟಿಯಾಗದ ಸಿಂಧು: ಮೂರು ಬಾರಿಯ ಒಲಿಂಪಿಕ್ ಚಾಂಪಿಯನ್‌ ಕರೊಲಿನಾ ಮರಿನ್‌ ಅವರ ವೇಗ ಮತ್ತು ಕರಾರುವಾಕ್ ಆಟಕ್ಕೆ ಪಿ.ವಿ.ಸಿಂಧು ದಂಗಾದರು. ಹೀಗಾಗಿ ಮರಿನ್‌ 21–11, 21–12ರಲ್ಲಿ ಗೆದ್ದರು. ಈ ಪಂದ್ಯಕ್ಕೂ ಮೊದಲು ಸಿಂಧು ಮತ್ತು ಮರಿನ್‌ ಒಟ್ಟು 12 ಬಾರಿ ಸೆಣಸಿದ್ದು ಏಳು ಬಾರಿ ಸಿಂಧು ಸೋತಿದ್ದರು. ರಿಯೊ ಒಲಿಂಪಿಕ್ಸ್ ಮತ್ತು ಕಳೆದ ಬಾರಿಯ ವಿಶ್ವ ಚಾಂಪಿಯನ್‌ಷಿಪ್‌ನಲ್ಲೂ ಮರಿನ್‌ಗೆ ಸಿಂಧು ಮಣಿದಿದ್ದರು.

ಕಿದಂಬಿ ಶ್ರೀಕಾಂತ್‌ ಏಷ್ಯನ್ ಕ್ರೀಡಾಕೂಟದ ಚಾಂಪಿಯನ್‌ ಜೊನಾಥನ್‌ ಕ್ರಿಸ್ಟಿ ವಿರುದ್ಧ 18–21, 19–21ರಲ್ಲಿ ಸೋತರು. ಮೊದಲ ಗೇಮ್‌ನ ವಿರಾಮದ ವೇಳೆ 11–7ರ ಮುನ್ನಡೆ ಸಾಧಿಸಿದ್ದ ಜೊನಾಥನ್‌ಗೆ ನಂತರ ಶ್ರೀಕಾಂತ್‌ ಪ್ರತಿರೋಧ ಒಡ್ಡಿ 15–15ರ ಸಮಬಲ ಸಾಧಿಸಿದರು. ಆದರೆ ಈ ಲಯವನ್ನು ಮುಂದುವರಿಸಲು ಆಗದೆ ಸೋಲೊಪ್ಪಿಕೊಂಡರು. ಸ್ವಯಂ ತಪ್ಪುಗಳು ಅವರಿಗೆ ಮಾರಕವಾಗಿ ಪರಿಣಮಿಸಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !