ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭೆ, ರ‍್ಯಾಲಿಗಳಿಗೆ ‘ಸುವಿಧಾ’ ಆ್ಯಪ್‌ ಅನುಮತಿ

Last Updated 10 ಏಪ್ರಿಲ್ 2018, 19:54 IST
ಅಕ್ಷರ ಗಾತ್ರ

ಬೆಂಗಳೂರು: ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಸಭೆ, ರ‍್ಯಾಲಿ ಇತ್ಯಾದಿಗಳಿಗೆ 24 ಗಂಟೆಗಳಲ್ಲಿ ಅನುಮತಿ ಪಡೆಯಲು ‘ಸುವಿಧಾ’ ಆ್ಯಪ್‌ ಬಳಕೆ ಮಾಡಬೇಕು.

ಹೆಲಿಕಾಪ್ಟರ್‌ ಮತ್ತು ಹೆಲಿಪ್ಯಾಡ್‌ ಬಳಕೆಗೆ ಸಂಬಂಧಿಸಿದಂತೆ ಆ್ಯಪ್‌ ಮೂಲಕ ಅರ್ಜಿಗಳನ್ನು 36 ಗಂಟೆ ಮೊದಲು ಸಲ್ಲಿಸಬೇಕು ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ವಾಹನಗಳ ಬಳಕೆ, ತಾತ್ಕಾಲಿಕ ಚುನಾವಣಾ ಕಚೇರಿ, ಧ್ವನಿವರ್ಧಕ ಮುಂತಾದವುಗಳಿಗೆ ಅನುಮತಿಯನ್ನು ಸುವಿಧಾ ಮೂಲಕ ಪಡೆಯಬಹುದು. ವಿವಿಧ ಇಲಾಖೆ ಮತ್ತು ಪ್ರಾಧಿಕಾರಗಳ ಸಮನ್ವಯವನ್ನು ಏಕಗವಾಕ್ಷಿಯಲ್ಲಿ ಲಭ್ಯವಾಗುವಂತೆ ಈ ಆ್ಯಪ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಸುವಿಧಾ 224 ಕ್ಷೇತ್ರಗಳಲ್ಲಿಯೂ ಕಾರ್ಯ ನಿರ್ವಹಿಸುತ್ತದೆ. ಇದರಿಂದ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳಿಗೆ ತ್ವರಿತಗತಿಯಲ್ಲಿ ಅನುಮತಿ ನೀಡಲು ಸಾಧ್ಯವಾಗುತ್ತದೆ. ಮೊದಲು ಬಂದವರಿಗೆ ಮೊದಲ ಅದ್ಯತೆ ನೀಡಲಾಗುತ್ತದೆ. ಅಪೂರ್ಣ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ. ಪ್ರತಿ ಚುನಾವಣಾಧಿಕಾರಿಗಳ ಕಚೇರಿಯೂ ಸುವಿಧಾ ಹೆಲ್ಪ್‌ ಡೆಸ್ಕ್‌ ಹೊಂದಿರುತ್ತದೆ ಎಂದು ಸಂಜೀವ್‌ ಕುಮಾರ್‌ ಹೇಳಿದರು.

ಸಮಾಧಾನ:

ದೂರುಗಳನ್ನು ಒಂದೇ ವೇದಿಕೆಯಲ್ಲಿ ಸಲ್ಲಿಸಲು ಅನುಕೂಲವಾಗುವಂತೆ ‘ಸಮಾಧಾನ’ ವ್ಯವಸ್ಥೆ ರೂಪಿಸಲಾಗಿದೆ. ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳನ್ನು ಸಲ್ಲಿಸಬಹುದಾಗಿದೆ. ನಾಗರಿಕರು ಸಹಾಯವಾಣಿ 1950 ಅಥವಾ ವೆಬ್‌ಸೈಟ್‌, ಫ್ಯಾಕ್ಸ್‌, ಎಸ್‌ಎಂಎಸ್‌ ಸೇರಿದಂತೆ ಇನ್ನಿತರ ಮಾಧ್ಯಮಗಳ ಮೂಲಕ ದೂರು ನೀಡಬಹುದು. ಇದಕ್ಕೆ ಆಯೋಗದ ವೆಬ್‌ಸೈಟ್‌ ceokarnataka.kar.nic.in ಭೇಟಿ ನೀಡಬೇಕು ಎಂದು ಅವರು ಹೇಳಿದರು.

ಕನ್ನಡದಲ್ಲಿ ದೂರು ಸಲ್ಲಿಸಲು ಅನುಕೂಲವಾಗುವಂತೆ ಯೂನಿಕೋಡ್‌ ತಂತ್ರಾಂಶವನ್ನು ಅಳವಡಿಸಲಾಗಿದೆ. ದೂರುಗಳನ್ನು ಚುನಾವಣಾಧಿಕಾರಿಗಳು ಮತ್ತು ಉಪಚುನಾವಣಾಧಿಕಾರಿಗಳ ಸಮ್ಮುಖದಲ್ಲಿಯೇ ದಾಖಲಿಸಬೇಕು ಎಂದು ಅವರು ಹೇಳಿದರು.

ಚಿಹ್ನೆ ಜಾಹೀರಾತಿನಂತೆ ಬಳಸುವಂತಿಲ್ಲ:

ಮನೆ ಅಥವಾ ಕಟ್ಟಡಗಳ ಮೇಲೆ ಪಕ್ಷದ ಚಿಹ್ನೆಯನ್ನು ಜಾಹೀರಾತಿನಂತೆ ಬಳಕೆ ಮಾಡುವಂತಿಲ್ಲ. ಆ ರೀತಿ ಬಳಸುವುದಿದ್ದರೆ, ಅನುಮತಿ ಪಡೆಯುವುದು ಕಡ್ಡಾಯ ಎಂಬುದು ಚುನಾವಣಾ ಆಯೋಗದ ನಿಯಮ ಎಂದು ಅವರು ಸ್ಪಷ್ಟಪಡಿಸಿದರು.

ಉಡುಪಿ ಜಿಲ್ಲೆಯಲ್ಲಿ ಯಾವುದೇ ದೇವಸ್ಥಾನಗಳ ಮೇಲಿರುವ ಕೇಸರಿ ಧ್ವಜಗಳನ್ನು ಚುನಾವಣಾ ಆಯೋಗ ವಶಕ್ಕೆ ತೆಗೆದುಕೊಂಡಿಲ್ಲ. ಆದರೆ, ರಸ್ತೆ ಬದಿಯಲ್ಲಿ ಹಾಕಿದ್ದ ಕೇಸರಿ ಧ್ವಜಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಮೂರನೇ ತಲೆಮಾರಿನ ಇವಿಎಂ ಬಳಕೆ:

ಬೆಂಗಳೂರಿನಲ್ಲಿ ಮೊದಲ ಬಾರಿಗೆ 5000 ಎಂ3 ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುವುದು ಎಂದು ಸಂಜೀವ್‌ ಕುಮಾರ್‌ ಹೇಳಿದರು.

ಬಿಇಎಲ್‌ ತಯಾರಿಸಿರುವ ಈ ಇವಿಎಂಗಳ ಕಾರ್ಯ ನಿರ್ವಹಣೆ ಬಗ್ಗೆ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ. ಇದು ಅತ್ಯಾಧುನಿಕ ವಿದ್ಯುನ್ಮಾನ ಮತಯಂತ್ರವಾಗಿದ್ದು, ಯಾವುದೇ ರೀತಿಯ ದುರ್ಬಳಕೆ ಮಾಡಿದಾಗ ಅದು ಎಚ್ಚರಿಕೆ ನೀಡುತ್ತದೆ ಎಂದು ಅವರು ವಿವರಿಸಿದರು.

* ‘ಸಮಾಧಾನ’ದಡಿ 253 ದೂರುಗಳ ದಾಖಲೆ

* ‘ಸುವಿಧಾ’ದಡಿ 336 ಅರ್ಜಿ ಸಲ್ಲಿಕೆ

*ಉಡುಪಿಯಲ್ಲಿ 66, ಚಿಕ್ಕಬಳ್ಳಾಪುರಲ್ಲಿ 44 ಅರ್ಜಿ ಸಲ್ಲಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT