ಶುಕ್ರವಾರ, ಏಪ್ರಿಲ್ 23, 2021
27 °C

ನರಿಂದರ್ ಬಾತ್ರಾ ವಿರುದ್ಧ ಮಿತ್ತಲ್ ಮಾಡಿದ್ದ ಆರೋಪಗಳನ್ನು ಕಡೆಗಣಿಸಿದ ಐಒಸಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಅಧ್ಯಕ್ಷ ನರಿಂದರ್ ಬಾತ್ರಾ ಮೇಲೆ ಸಂಸ್ಥೆಯ ಉಪಾಧ್ಯಕ್ಷರೇ ಮಾಡಿರುವ ಆರೋಪವನ್ನು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಶುಕ್ರವಾರ ಅಲ್ಲಗಳೆದಿದ್ದು ಚುನಾವಣೆ ಸಂದರ್ಭದಲ್ಲಿ ಬಾತ್ರಾ ಯಾವುದೇ ಅಕ್ರಮ ಎಸಗಲಿಲ್ಲ ಎಂದು ತೀರ್ಪು ನೀಡಿದೆ.

2017ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಐಒಎ ಉಪಾಧ್ಯಕ್ಷ ಸುಧಾಂಶು ಮಿತ್ತಲ್ ದೂರಿದ್ದರು. ಈ ಕುರಿತು ಐಒಸಿ ನೀತಿ ಆಯುಕ್ತರು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು. ಆದರೆ ಈ ದೂರಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಐಒಸಿ, ಪ್ರಕರಣವನ್ನು ಇಲ್ಲಿಗೇ ಮುಗಿಸಲಾಗಿದೆ ಎಂದು ಹೇಳಿದೆ.

‘ಸಂಸ್ಥೆಯ ಆಂತರಿಕ ಕಲಹದ ಹಿನ್ನೆಲೆಯಲ್ಲಿ ನೀವು ಸಲ್ಲಿಸಿದ ದೂರನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದ್ದು ಚುನಾವಣೆಯ ಫಲಿತಾಂಶಕ್ಕೆ ಸಂಬಂಧಿಸಿ ಹಸ್ತಕ್ಷೇಪ ಮಾಡದೇ ಇರಲು ನಿರ್ಧರಿಸಲಾಗಿದೆ’ ಎಂದು ಈ ಕುರಿತು ಮಿತ್ತಲ್ ಅವರಿಗೆ ಬರೆದ ಪತ್ರದಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ನೀತಿ ಆಯುಕ್ತ ಪಕಿರೆಟಿ ಜಪ್ಪೆಲಿ ತಿಳಿಸಿದ್ದಾರೆ.

ಬಾತ್ರಾ ಮೋಸಗಾರನೂ ಸುಳ್ಳುಗಾರನೂ ತಪ್ಪೆಸಗಿದವನೂ ಆಗಿದ್ದಾನೆ ಎಂದು ಐಒಸಿ ಅಧ್ಯಕ್ಷ ಥಾಮಸ್ ಬಾಕ್ ಅವರಿಗೆ ಬರೆದಿರುವ ಪತ್ರದಲ್ಲಿ ಮಿತ್ತಲ್ ದೂರಿದ್ದರು. ಇದೇ ಬಗೆಯ ಆರೋಪಗಳನ್ನು ಹೊರಿಸಿ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ಗೂ ದೂರು ಸಲ್ಲಿಸಿದರು. ಭಾರತ ಹಾಕಿ ಫೆಡರೇಷನ್‌ ಅಧ್ಯಕ್ಷರಾಗಿದ್ದಾಗಲೇ 2016ರಲ್ಲಿ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಬಾತ್ರಾ ಅಧ್ಯಕ್ಷರಾಗಿದ್ದರು ಎಂದು ಆರೋಪಿಸಿದ್ದರು. ಆದರೆ ಬಾತ್ರಾ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹಾಕಿ ಫೆಡರೇಷನ್ ಹೇಳಿತ್ತು.

ಬಾತ್ರಾಗೆ ಮತ್ತೊಬ್ಬ ಉಪಾಧ್ಯಕ್ಷರ ಬೆಂಬಲ
ಬಾತ್ರಾ ಮೇಲೆ ಮಿತ್ತಲ್ ಮಾಡಿರುವ ಆರೋಪಗಳಿಗೆ ಮತ್ತೊಬ್ಬ ಉಪಾಧ್ಯಕ್ಷ ಆದಿಲೆ ಸುಮರಿವಾಲ ಆಕ್ಷೇಪ ವ್ಯಕ್ತಪಡಿಸಿದ್ದರು. ಮಿತ್ತಲ್ ಆಧಾರರಹಿತ ಆರೋಪಗಳನ್ನು ಮಾಡಿದ್ದು ಪ್ರಾಮಾಣಿಕನೂ ಕಠಿಣ ಪರಿಶ್ರಮಪಡುವ ವ್ಯಕ್ತಿಯೂ ಆಗಿರುವ ಬಾತ್ರಾ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ನಡೆಸಿರುವ ಪ್ರಯತ್ನ ಬೇಸರ ತಂದಿದೆ. ಮಿತ್ತಲ್‌ ಐಒಎ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು ಆರೋಪಗಳನ್ನು ಮಾಡಿದ್ದಾರೆ’ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದರು. ಐಒಸಿ ಮುಖ್ಯಸ್ಥ ಥಾಮಸ್‌ ಬಾಕ್‌ ಅವರು ತಮಗೆ ಬಂದಿರುವ ಪತ್ರಗಳ ಕುರಿತು ಇನ್ನೂ ಪ್ರತಿಕ್ರಿಯಿಸಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು