ಸೋಮವಾರ, ಜೂನ್ 21, 2021
29 °C

ಸಾಯ್‌ ಕೇಂದ್ರದಲ್ಲಿ ಅಥ್ಲೀಟ್‌ಗಳಿಗೆ ಸೋಂಕು

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ವೇಗನಡಿಗೆ ಅಥ್ಲೀಟ್‌ ಕೆ.ಟಿ.ಇರ್ಫಾನ್ ಒಳಗೊಂಡಂತೆ ಐವರು ಕ್ರೀಡಾಪಟುಗಳಿಗೆ ಕೋವಿಡ್‌–19 ಇರುವುದು ಗುರುವಾರ ದೃಢಪಟ್ಟಿದೆ. ಇವರೆಲ್ಲರೂ ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್) ಬೆಂಗಳೂರು ಪ್ರಾದೇಶಿಕ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದರು.

ಕಳೆದ ಶುಕ್ರವಾರ ಕ್ರೀಡಾಪಟುಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಮರುದಿನ ವರದಿ ಬಂದಿದೆ. ನಾಲ್ವರು ಪುರುಷ ಮತ್ತು ಒಬ್ಬರು ಮಹಿಳಾ ಅಥ್ಲೀಟ್‌ಗೆ ಸೋಂಕು ಇರುವುದು ದೃಢಪಟ್ಟಿದ್ದು ಅವರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಮಹಿಳಾ ಅಥ್ಲೀಟ್ ಮನೆಯಿಂದ ಬಂದಿದ್ದರು. ಈ ಕ್ರೀಡಾಪಟುಗಳೆಲ್ಲರೂ ಏಪ್ರಿಲ್ 29ರಂದು ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದರು ಎಂದು ಸಾಯ್ ಮೂಲಗಳು ತಿಳಿಸಿವೆ.

ಇಬ್ಬರು ಅಥ್ಲೀಟ್‌ಗಳು ಲಸಿಕೆ ತೆಗೆದುಕೊಳ್ಳಲಿಲ್ಲ. ಅವರನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗಿದ್ದು ಶುಕ್ರವಾರ ವರದಿ ಬರಲಿದೆ ಎನ್ನಲಾಗಿದೆ.

31 ವರ್ಷದ ಇರ್ಪಾನ್ 2019ರ ಆರಂಭದಲ್ಲೇ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದರು. ಜಪಾನ್‌ನ ನೋಮಿಯಲ್ಲಿ ನಡೆದಿದ್ದ ಏಷ್ಯನ್ ರೇಸ್ ವಾಕಿಂಗ್ ಚಾಂಪಿಯನ್‌ಷಿಪ್‌ನ 20 ಕಿಲೋಮೀಟರ್ ನಡಿಗೆಯಲ್ಲಿ ನಾಲ್ಕನೇ ಸ್ಥಾನ ಗಳಿಸುವ ಮೂಲಕ ಅವರು ಈ ಸಾಧನೆ ಮಾಡಿದ್ದರು.

ಒಲಿಂಪಿಕ್ಸ್‌ಗೆ ಆಯ್ಕೆಯಾಗಿರುವ ಪ್ರಿಯಾಂಕ ಗೋಸ್ವಾಮಿ, ಮಧ್ಯಮ ದೂರ ಓಟಗಾರ ಜಿನ್ಸನ್ ಜಾನ್ಸನ್‌, ದೂರ ಅಂತರದ ಓಟಗಾರ್ತಿ ಪಾರುಲ್ ಚೌಧರಿ, ಸ್ಟೀಪಲ್ ಚೇಸ್ ಪಟು ಚಿಂತಾ ಯಾದವ್ ಮತ್ತು ವೇಗ ನಡಿಗೆಯ ಅಥ್ಲೀಟ್‌ ಏಕನಾಥ್ ಅವರಿಗೆ ಕಳೆದ ತಿಂಗಳು ಸೋಂಕು ತಗುಲಿತ್ತು. ವೇಗ ನಡಿಗೆಯ ಕೋಚ್‌ ರಷ್ಯಾದ ಅಲೆಕ್ಸಾಂಡರ್ ಅರ್ಟ್ಸಿಬಶೆವ್ ಅವರಿಗೂ ಆಗ ಸೋಂಕು ದೃಢಪಟ್ಟಿತ್ತು.

ಜಿನ್ಸನ್ ಜಾನ್ಸನ್ ಜೊತೆ ಇದ್ದ ಕಾರಣ ಇರ್ಫಾನ್ ಅವರನ್ನು ಆಗ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ವರದಿ ನೆಗೆಟಿವ್ ಬಂದಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು