ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pro Kabaddi: ಬೆಂಗಳೂರು ಬುಲ್ಸ್‌ನ ಮತ್ತೊಂದು ಮಿಂಚು ಚಂದ್ರನ್ ರಂಜೀತ್

Last Updated 23 ಫೆಬ್ರುವರಿ 2022, 13:13 IST
ಅಕ್ಷರ ಗಾತ್ರ

ಬೆಂಗಳೂರು: ‘ಪವನ್ ಶೆರಾವತ್ ಅದ್ಭುತ ಆಟಗಾರ, ಚಾಣಾಕ್ಷ ನಾಯಕ ಮತ್ತು ಅವರು ನಮ್ಮನ್ನು ಹುರಿದುಂಬಿಸುವ ರೀತಿ ಅನನ್ಯವಾದದ್ದು. ಆದ್ದರಿಂದಲೇ ತಂಡವು ಇಷ್ಟು ಉತ್ತಮವಾಗಿ ಆಡಲು ಸಾಧ್ಯವಾಗುತ್ತಿದೆ’

ಪ್ರೊ ಕಬಡ್ಡಿ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿರುವ ಬೆಂಗಳೂರು ಬುಲ್ಸ್ ತಂಡದ ಆಟಗಾರ ಚಂದ್ರನ್ ರಂಜೀತ್ ಅವರ ಮಾತುಗಳಿವು. ಗುಜರಾತ್ ಜೈಂಟ್ಸ್ ಎದುರಿನ ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರು ತಂಡಕ್ಕೆ ಉತ್ತಮ ಆರಂಭ ದೊರೆಯಲು ಚಂದ್ರನ್ ರಂಜೀತ್ ಆಟ ಕಾರಣವಾಗಿತ್ತು. ಇಡೀ ಟೂರ್ನಿಯಲ್ಲಿ ಪವನ್ ಶೆರಾವತ್ ಪಾಯಿಂಟ್ಸ್‌ಗಳನ್ನು ಸೂರೆ ಮಾಡಿ ತಂಡದ ಜಯದಲ್ಲಿ ಮಿಂಚಿದ್ದಾರೆ. ಅವರಿಗೆ ತಕ್ಕ ಜೊತೆ ನೀಡುತ್ತಿರುವವರು ರೇಡರ್ ರಂಜೀತ್. ತಮ್ಮ ಅನುಭವದ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.

‘ಬಾಲ್ಯದಿಂದಲೂ ಕಬಡ್ಡಿ ಆಟಗಾರನಾಗುವ ಕನಸು ಕಂಡಿದ್ದೆ. ನಮ್ಮ ಊರು, ಶಾಲೆಗಳಲ್ಲಿ ತರಬೇತುದಾರರು ನೀಡಿದ ಮಾರ್ಗದರ್ಶನದಿಂದಾಗಿ ಕಬಡ್ಡಿ ಕೌಶಲಗಳನ್ನು ಕಲಿಯಲು ಸಾಧ್ಯವಾಯಿತು. ಉತ್ತಮವಾದ ರೇಡಿಂಗ್ ಕೌಶಲಗಳು ನನ್ನಲ್ಲಿದ್ದವು. ವಿವಿಧ ಹಂತಗಳಲ್ಲಿ ಆಡುವಾಗ ಹಲವು ಕಠಿಣ ಸವಾಲುಗಳನ್ನು ಎದುರಿಸಿದ್ದೇನೆ. ಪ್ರೊ ಕಬಡ್ಡಿಯ ಮೊದಲ ಆವೃತ್ತಿಯಲ್ಲಿ ತೆಲುಗು ಟೈಟನ್ಸ್‌ ತಂಡದಲ್ಲಿ ಸ್ಥಾನ ಪಡೆದಿದ್ದೆ. ಆದರೆ, ಐದನೇ ಆವೃತ್ತಿಯವರೆಗೂ ಆತ್ಮವಿಶ್ವಾಸದಿಂದ ಆಡಲು ಸಾಧ್ಯವಾಗಿರಲಿಲ್ಲ. ಅನುಭವ ಹೆಚ್ಚಿದಂತೆ ಆತ್ಮಬಲ ವೃದ್ದಿಸಿತು. ಬುಲ್ಸ್‌ಗೆ ಬಂದ ಮೇಲೆ ಇನ್ನಷ್ಟು ಬಲಶಾಲಿಯಾದೆ’ ಎಂದರು ತಮಿಳುನಾಡಿನ ರಂಜೀತ್.

‘ಬುಲ್ಸ್‌ ತಂಡದಲ್ಲಿ ಪವನ್ ಜೊತೆಗೆ ಮ್ಯಾಟ್‌ನಲ್ಲಿ ರೇಡಿಂಗ್ ಮಾಡುವ ಅವಕಾಶ ದೊರೆತಿದ್ದು ಜೀವನದ ಅವಿಸ್ಮರಣೀಯ ಸಂಗತಿ. ಪಂದ್ಯದ ಅತ್ಯಂತ ಕ್ಲಿಷ್ಟ ಪರಿಸ್ಥಿತಿಯಲ್ಲಿಯೂ ದೃತಿಗೆಡದ ಪವನ್ ಸೂಚಿಸುವ ತಂತ್ರಗಳು ಅಸಾಧಾರಣವಾಗಿರುತ್ತವೆ. ಅವರ ಚುರುಕುತನ ಮತ್ತು ಆಟವನ್ನು ಆಳವಾಗಿ ತಿಳಿದಿರುವುದನ್ನು ನೋಡಿದರೆ ನಮ್ಮಲ್ಲಿಯೂ ಉತ್ಸಾಹ ಹೆಚ್ಚುತ್ತದೆ’ ಎಂದರು.

ಈ ಬಾರಿಯ ಟೂರ್ನಿಯು ಸಂಪೂರ್ಣ ಬಯೋಬಬಲ್‌ನಲ್ಲಿ ನಡೆಯುತ್ತಿದೆ. ವೈಟ್‌ಫೀಲ್ಡ್‌ನಲ್ಲಿರುವ ಶೆರಟಾನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ಟೂರ್ನಿಯ ಎಲ್ಲ ಪಂದ್ಯಗಳನ್ನು ಎರಡೂವರೆ ತಿಂಗಳಿನಿಂದ ನಡೆಸಲಾಗುತ್ತಿದೆ.

‘ಇದೊಂದು ವಿಭಿನ್ನವಾದ ಅನುಭವ. ಬಯೋಬಬಲ್‌ನಲ್ಲಿ ಆಡುವುದು ಸವಾಲಿನದ್ದು. 12 ತಂಡಗಳು ಒಂದೇ ಸೂರಿನಡಿ, ಒಂದೇ ಅಂಕಣದಲ್ಲಿ ಇಡೀ ಟೂರ್ನಿಯನ್ನು ಆಡುವುದು ಸುಲಭವಲ್ಲ. ಆದರೆ ಕೋವಿಡ್ ಕಾಲಘಟ್ಟದಲ್ಲಿ ಈ ಸವಾಲನ್ನು ಸ್ವೀಕರಿಸಿ ಯಶಸ್ವಿಯಾಗಿ ನಿಭಾಯಿಸಿದ್ದೇವೆ. ಟೂರ್ನಿಯ ವ್ಯವಸ್ಥಾಪಕರ ಅಚ್ಚುಕಟ್ಟಾದ ನಿರ್ವಹಣೆ ಎದ್ದುಕಾಣುತ್ತದೆ. ಅಲ್ಲದೇ ನಮ್ಮ ಕುಟುಂಬ, ತಂಡದ ಸಹಆಟಗಾರರು ನೀಡಿದ ನೆರವು ಕೂಡ ಮಹತ್ವದ್ದು’ ಎಂದು ಚಂದ್ರನ್ ರಂಜೀತ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT