ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿ: ಭಾರತಕ್ಕೆ ಭರ್ಜರಿ ಗೆಲುವು

ನೆದರ್ಲೆಂಡ್ಸ್‌ನ ಬುಕೆನ್ಸ್‌ಗೆ ಐದು ಗೋಲು; ಅರ್ಜೆಂಟೀನಾದ ಜೆರಟೆ ಹ್ಯಾಟ್ರಿಕ್
Last Updated 25 ನವೆಂಬರ್ 2021, 16:26 IST
ಅಕ್ಷರ ಗಾತ್ರ

ಭುವನೇಶ್ವರ್: ಮೊದಲ ಪಂದ್ಯದಲ್ಲಿ ನೀರಸ ಆಟವಾಡಿ ಸೋಲಿಗೆ ಶರಣಾಗಿದ್ದ ಭಾರತ ತಂಡ ಎಫ್‌ಐಎಚ್‌ ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿಯ ಎರಡನೇ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿತು. ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ತಂಡ 13–1ರಲ್ಲಿ ಕೆನಡಾವನ್ನು ಮಣಿಸಿತು.

ಸಂಜಯ್ ಗಳಿಸಿದ ಹ್ಯಾಟ್ರಿಕ್ (17, 32, 59ನೇ ನಿಮಿಷ) ಮತ್ತು ಉತ್ತಮ್ ಸಿಂಗ್ ಗಳಿಸಿದ ಎರಡು ಗೋಲುಗಳು ತಂಡದ ಗೆಲುವಿಗೆ ಮೆಟ್ಟಿಲುಗಳಾದವು. ನಾಯಕ ವಿವೇಕ್ ಪ್ರಸಾದ್ ಸಾಗರ್ (8ನೇ ನಿ), ಮಣಿಂದರ್ ಸಿಂಗ್ (27ನಿ), ಶಾರದಾನಂದ ತಿವಾರಿ (35, 53ನಿ), ಹುಂಡಾಲ್ ಅರಿಜೀತ್ ಸಿಂಗ್ (40, 50, 51ನಿ) ಮತ್ತು ಅಭಿಷೇಕ್ ಲಕ್ರಾ (55ನಿ) ಅವರು ಗೋಲು ಬಾರಿಸಿದರು.

ಪಂದ್ಯದ ಆರನೇ ನಿಮಿಷದಲ್ಲಿಯೇ ಗೋಲು ಖಾತೆ ತೆರೆದ ಭಾರತದ ಉತ್ತಮ ಸಿಂಗ್ ನಂತರವೂ ಮಿಂಚಿದರು. ಕೆನಡಾ ತಂಡದ ದುರ್ಬಲ ರಕ್ಷಣಾ ಪಡೆಗೆ ಯಾವುದೇ ಅವಕಾಶ ನೀಡದಂತೆ ಗೋಲುಗಳ ಮಳೆ ಸುರಿದ ಭಾರತದ ಆಟಗಾರರು ಮೇಲುಗೈ ಸಾಧಿಸಿದರು.

ಅರ್ಜೆಂಟೀನಾ ಗೋಲು ಮಳೆ

ಜೆರಟೆ ಫಾಕುಂಡೊ ಗಳಿಸಿದ ಹ್ಯಾಟ್ರಿಕ್ ಗೋಲು ಸೇರಿದಂತೆ ಅರ್ಜೆಂಟೀನಾ ಗೋಲು ಮಳೆ ಸುರಿಸಿ ಮಿಂಚಿತು. ಬೆಳಿಗ್ಗೆ ನಡೆದ ಪಂದ್ಯದಲ್ಲಿ ಈಜಿಪ್ಟ್ ವಿರುದ್ಧ ಅರ್ಜೆಂಟೀನಾ 14–0ಯಿಂದ ಜಯ ಗಳಿಸಿತು.

ಮೂರನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ನಲ್ಲಿ ಗಳಿಸಿದ ಗೋಲಿನೊಂದಿಗೆ ಜೆರಟೆ ಅವರು ಅರ್ಜೆಂಟೀನಾದ ನಾಗಾಲೋಟಕ್ಕೆ ಚಾಲನೆ ನೀಡಿದರು. 58ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್ ಮೂಲಕ ತಂಡದ ಕೊನೆಯ ಗೋಲನ್ನೂ ಅವರೇ ಗಳಿಸಿದರು. ಇದರೊಂದಿಗೆ ಹ್ಯಾಟ್ರಿಕ್ ಪೂರ್ಣಗೊಳಿಸಿದರು. 47ನೇ ನಿಮಿಷದಲ್ಲೂ ಅವರು ಚೆಂಡನ್ನು ಗುರಿ ಮುಟ್ಟಿಸಿದ್ದರು.

ರೂಯಿಸ್ ಫ್ರಾನ್ಸಿಸ್ಕೊ (10ನೇ ನಿಮಿಷ), ಡೊಮೆನಿ ಲಾಟರೊ (12, 44ನೇ ನಿಮಿಷ), ಕಪುರೊ ಬೂಟಿಸ್ಟ (22ನೇ ನಿಮಿಷ), ಆಗೊಸ್ಟಿನಿ ಫ್ರಾನ್ಕೊ(25ನೇ ನಿಮಿಷ), ನರ್ದೊಲಿಲೊ ಇಗ್ನೆಷಿಯೊ(39ನೇ ನಿಮಿಷ), ಮೆಂಡೆಜ್ ಲೂಸಿಯೊ (46ನೇ ನಿಮಿಷ), ಕ್ರುಗೆರ್ ಜಾಕ್ವಿನ್ (47ನೇ ನಿಮಿಷ), ಸ್ಟೆಲಾಟೊ ಬ್ರೂನೊ (48ನೇ ನಿಮಿಷ), ಟೊಸ್ಕಾನಿ ಜಾಕ್ವಿನ್ (51ನೇ ನಿಮಿಷ) ತಂಡದ ಪರ ಗೋಲು ಗಳಿಸಿದ ಇತರ ಆಟಗಾರರು.

ಬುಕೆನ್ಸ್ ಮೈಲ್ಸ್ ಅವರ ಐದು ಗೋಲುಗಳ ಬಲದಿಂದ ನೆದರ್ಲೆಂಡ್ಸ್‌ 12–5ರಲ್ಲಿ ದಕ್ಷಿಣ ಕೊರಿಯಾವನ್ನು ಮಣಿಸಿತು. ಶಾಟೆನ್ ಶೆಲ್ಡನ್ (10ನೇ ನಿ), ಬುಕೆನ್ಸ್‌ ಮೈಲ್ಸ್ (13, 16, 35, 36, 58, 60ನೇ ನಿ), ವ್ಯಾನ್ ಡೆರ್ ವೀನ್ ಕಾಸ್ಪರ್ (18, 26, 53ನೇ ನಿ), ಹಾರ್ಟೆನ್‌ಸ್ಯೂ ಒಲಿವರ್ (21ನೇ ನಿ), ವ್ಯಾನ್ ಬ್ರೆಂಟ್ (35, 49ನೇ ನಿ) ನೆದರ್ಲೆಂಡ್ಸ್ ಪರ ಗೋಲು ಗಳಿಸಿದರು.

ದಕ್ಷಿಣ ಕೊರಿಯಾಗಾಗಿ ಜೆಂಗ್ ಜುನ್ ಸೊಂಗ್‌ (7, 14, 48ನೇ ನಿ), ಯೂ ಸೆಂಗ್ ಹೊ (41ನೇ ನಿ) ಹಾಗೂ ಕಿಮ್ ಹ್ಯೂನ್‌ವೂ (54 ನೇ ನಿ) ಗೋಲು ಗಳಿಸಿದರು.

ಸ್ಪೇನ್‌ 17–0ಯಿಂದ ಅಮೆರಿಕ ವಿರುದ್ಧ ಗೆಲುವು ದಾಖಲಿಸಿತು. ಪೋಲೆಂಡ್ ವಿರುದ್ಧ ಫ್ರಾನ್ಸ್ 7–1ರಲ್ಲಿ ಜಯ ಸಾಧಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT