ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ನಿಂದ ಬದುಕು ಮೂರಾಬಟ್ಟೆ: ಕೋಚ್‌ಗಳ ಸಂಕಷ್ಟಕ್ಕೆ ಮಿಡಿದ ಕೆಬಿಎ

ಒಂದು ಬಾರಿಯ ನೆರವು ನೀಡಲು ಮುಂದಾದ ಸಂಸ್ಥೆ
Last Updated 19 ಜೂನ್ 2020, 16:20 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಮಹಾಮಾರಿಯನ್ನು ನಿಯಂತ್ರಿಸುವ ಸಲುವಾಗಿ ಜಾರಿಗೊಳಿಸಲಾದ ಲಾಕ್‌ಡೌನ್‌ನಿಂದಾಗಿ ಸುಮಾರು ಎರಡೂವರೆ ತಿಂಗಳ ಕಾಲ ಕ್ರೀಡಾ ಚಟುವಟಿಕೆಗಳು ಸ್ತಬ್ಧಗೊಂಡಿದ್ದವು. ಇದರಿಂದಾಗಿ ಬ್ಯಾಡ್ಮಿಂಟನ್‌ ಕ್ರೀಡೆಯನ್ನೇ ಜೀವನಾಧಾರವಾಗಿಸಿಕೊಂಡಿದ್ದ ಹಲವು ಕೋಚ್‌ಗಳ ಬದುಕು ದುಸ್ಥರವಾಗಿದೆ. ತುತ್ತಿನ ಚೀಲ ತುಂಬಿಸಿಕೊಳ್ಳಲೂ ಹಲವರು ಪರದಾಡುತ್ತಿದ್ದಾರೆ. ಅಂತಹ ಕೋಚ್‌ಗಳ ಕಣ್ಣೀರು ಒರೆಸಲು ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆ (ಕೆಬಿಎ) ಮುಂದಾಗಿದೆ.

ಬೆಂಗಳೂರು ಬಿಟ್ಟು ಉಳಿದೆಲ್ಲಾ ಜಿಲ್ಲೆಗಳಲ್ಲಿರುವ ಪೂರ್ಣಪ್ರಮಾಣದ ಕೋಚ್‌ಗಳಿಗೆ ಒಂದು ಬಾರಿಯ ಹಣಕಾಸಿನ ನೆರವು ನೀಡಲು ಕೆಬಿಎ ನಿರ್ಧರಿಸಿದೆ. ಈ ಸಂಬಂಧ ಎಲ್ಲಾ ಜಿಲ್ಲಾ ಸಂಸ್ಥೆಗಳಿಗೂ ಈಗಾಗಲೇ ಇ–ಮೇಲ್‌ ರವಾನಿಸಿದೆ. ಕೆಬಿಎಯಲ್ಲಿ ಹೆಸರು ನೋಂದಾಯಿಸಿಕೊಂಡಿರುವ ಕೋಚ್‌ಗಳು ನೆರವು ಪಡೆಯಲು ಅರ್ಹರಾಗಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಕೆಬಿಎ ಕಾರ್ಯದರ್ಶಿ ಪಿ.ರಾಜೇಶ್‌ ‘ಕೊರೊನಾ ಬಿಕ್ಕಟ್ಟಿನಿಂದ ಇಡೀ ಜಗತ್ತೇ ತಲ್ಲಣಗೊಂಡಿದೆ. ಹಲವರು ನಿರುದ್ಯೋಗಿಗಳಾಗಿದ್ದಾರೆ. ಒಪ್ಪತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಸಂಕಷ್ಟದಲ್ಲಿರುವ ಕೋಚ್‌ಗಳಿಗೆ ನೆರವು ನೀಡುವುದು ನಮ್ಮ ಕರ್ತವ್ಯ. ಕೆಬಿಎ ಸದಸ್ಯರು ಹಾಗೂ ಅಧಿಕಾರಿಗಳ ಸಹಕಾರದೊಂದಿಗೆ ಈ ಕಾರ್ಯಕ್ಕೆ ಮುಂದಾಗಿದ್ದೇವೆ’ ಎಂದರು.

‘ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ಕೋಚ್‌ಗಳ ಪಟ್ಟಿಯನ್ನು ಸಿದ್ಧಪಡಿಸಿ ನಮಗೆ ಸಲ್ಲಿಸುವಂತೆ ಎಲ್ಲಾ ಜಿಲ್ಲಾ ಸಂಸ್ಥೆಗಳಿಗೂ ಸೂಚಿಸಿದ್ದೇವೆ. ಪಟ್ಟಿ ಕೈಸೇರಿದ ಬಳಿಕ ಅದರಲ್ಲಿರುವ ಎಲ್ಲಾ ಕೋಚ್‌ಗಳ ಹಿನ್ನೆಲೆಯನ್ನು ಪರಿಶೀಲಿಸುತ್ತೇವೆ. ಸ್ಥಳೀಯ ಆಟಗಾರರು ಹಾಗೂ ಅಧಿಕಾರಿಗಳಿಂದಲೂ ಮಾಹಿತಿ ಪಡೆಯುತ್ತೇವೆ. ತೀರಾ ಅಗತ್ಯವಿದ್ದವರಿಗಷ್ಟೇ ನೆರವು ಒದಗಿಸುತ್ತೇವೆ. ಹಣವನ್ನು ನೇರವಾಗಿ ಅವರ ಬ್ಯಾಂಕ್‌ ಖಾತೆಗೆ ಜಮೆ ಮಾಡುತ್ತೇವೆ’ ಎಂದು ಹೇಳಿದರು.

‘ಲಾಕ್‌ಡೌನ್‌ ಸಮಯದಲ್ಲಿಎಲ್ಲಾ ವೃತ್ತಿಪರ ಕೋಚ್‌ಗಳಿಗೂ ಮಾಸಿಕ ಭತ್ಯೆ ನೀಡಬೇಕೆಂಬ ಆಲೋಚನೆ ಇತ್ತು. ಪ್ರಾಯೋಜಕರ ಕೊರತೆಯಿಂದಾಗಿ ನಮ್ಮ ಆದಾಯಕ್ಕೂ ಕತ್ತರಿ ಬಿದ್ದಿದ್ದರಿಂದ ಆ ಆಲೋಚನೆ ಕೈಬಿಟ್ಟೆವು’ ಎಂದು ತಿಳಿಸಿದರು.

‘ಕೊರೊನಾದಿಂದಾಗಿ ಈಗಾಗಲೇ ಎಲ್ಲಾ ಟೂರ್ನಿಗಳು ಮುಂದೂಡಲ್ಪಟ್ಟಿವೆ. ಕ್ರೀಡಾಪಟುಗಳ ತರಬೇತಿ ಶುರುವಾಗಿದೆ. ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸುವಂತೆ ಎಲ್ಲರಿಗೂ ತಿಳಿಸಲಾಗಿದೆ. ಕ್ರೀಡಾಂಗಣ ಪ್ರವೇಶಿಸುವ ಮುನ್ನ ಎಲ್ಲರನ್ನೂ ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಪಡಿಸುತ್ತಿದ್ದೇವೆ. ದಿನಕ್ಕೆ ಮೂರು ಬಾರಿ ಬ್ಯಾಡ್ಮಿಂಟನ್‌ ಕೋರ್ಟ್‌ಗಳಿಗೆ ಸ್ಯಾನಿಟೈಸಿಂಗ್‌ ಮಾಡಲಾಗುತ್ತಿದೆ. ಕ್ರೀಡಾಪಟುಗಳಿಗೆ ನಾವೇ ಷಟಲ್‌ ಪೂರೈಸುತ್ತಿದ್ದೇವೆ. ರಾಯಚೂರು, ಉಡುಪಿ ಸೇರಿದಂತೆ ಕೆಲವು ಕಂಟೈನ್‌ಮೆಂಟ್‌ ವಲಯಗಳಲ್ಲಿ ತರಬೇತಿಗೆ ಅವಕಾಶ ನೀಡಿಲ್ಲ’ ಎಂದೂ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT