ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ ಲೀಗ್‌: ದಬಂಗ್‌ ಡೆಲ್ಲಿ, ಯುಪಿ ಯೋಧಾ ಜಯಭೇರಿ

ಪ್ರೊ ಕಬಡ್ಡಿ ಲೀಗ್‌: ಹರಿಯಾಣ ಸ್ಟೀಲರ್ಸ್‌ಗೆ ಸೋಲು; ಮುಂಬಾ–ಬೆಂಗಾಲ್ ಪಂದ್ಯ ಟೈ
Last Updated 16 ಜನವರಿ 2022, 3:59 IST
ಅಕ್ಷರ ಗಾತ್ರ

ಬೆಂಗಳೂರು: ಕೊನೆಯ ನಿಮಿಷದಲ್ಲಿ ವಿಜಯ್ ಕುಮಾರ್ ಅವರ ವೀರೋಚಿತ ಆಟವು ದಬಂಗ್ ಡೆಲ್ಲಿ ತಂಡಕ್ಕೆ ರೋಚಕ ಜಯ ತಂದುಕೊಟ್ಟಿತು. ವೈಟ್‌ಫೀಲ್ಡ್‌ನ ಹೋಟೆಲ್ ಶೆರಟಾನ್ ಗ್ರ್ಯಾಂಡ್‌ನಲ್ಲಿ ಶನಿವಾರ ರಾತ್ರಿ ನಡೆದ ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ ದಬಂಗ್ ಡೆಲ್ಲಿ 28–25ರಲ್ಲಿ ಹರಿಯಾಣ ಸ್ಟೀಲರ್ಸ್ ವಿರುದ್ಧ ಜಯ ಗಳಿಸಿತು.

ಮತ್ತೊಂದು ಪಂದ್ಯದಲ್ಲಿ ಪ್ರದೀಪ್ ನರ್ವಾಲ್ ಅವರ ‘ಸೂಪರ್ ಟೆನ್‌’ ನೆರವಿನಿಂದ ಯು.ಪಿ.ಯೋಧಾ 39–33ರಲ್ಲಿ ತೆಲುಗು ಟೈಟನ್ಸ್ ವಿರುದ್ಧ ಜಯಭೇರಿ ಮೊಳಗಿಸಿತು.

ತಂಡದ ಕಳೆದ ಪಂದ್ಯದಲ್ಲಿ ಕಣಕ್ಕೆ ಇಳಿಯದೇ ಇದ್ದ ಎಕ್ಸ್‌ಪ್ರೆಸ್ ಖ್ಯಾತಿಯ ನವೀನ್ ಕುಮಾರ್ ಈ ಪಂದ್ಯದಲ್ಲೂ ದ್ವಿತೀಯಾರ್ಧದಲ್ಲಿ ಗಾಯಗೊಂಡು ವಿಶ್ರಾಂತಿ ಪಡೆದರು. ಆದರೂ ದಿಟ್ಟತನ ಮೆರೆದ ತಂಡ ಕೊನೆಯ ವರೆಗೂ ಕಾದಾಡಿ ಗೆಲುವು ತನ್ನದಾಗಿಸಿಕೊಂಡಿತು. ವಿಜಯ್ ಪಂದ್ಯದಲ್ಲಿ ಒಟ್ಟು 11 ಪಾಯಿಂಟ್ ಕಲೆ ಹಾಕಿದರು. ಈ ಪೈಕಿ ಐದು ಪಾಯಿಂಟ್‌ಗಳು ಕೊನೆಯ ಎರಡು ರೇಡ್‌ಗಳಲ್ಲಿ ಲಭಿಸಿದವು. ಇದು, ತಂಡದ ಗೆಲುವಿಗೆ ಸಹಕಾರಿಯಾಯಿತು.

ಪಂದ್ಯದ ಮೊದಲಾರ್ಧದಲ್ಲಿ ಎರಡೂ ತಂಡಗಳು ನೀರಸ ಆಟವಾಡಿದವು. ಆದರೆ ನವೀನ್ ಕುಮಾರ್ ಅವರನ್ನು ನಾಲ್ಕು ಬಾರಿ ಹೊರಹಾಕುವಲ್ಲಿ ಹರಿಯಾಣ ಸ್ಟೀಲರ್ಸ್ ಯಶಸ್ವಿಯಾಯಿತು. ಮೊದಲಾರ್ಧದ ಮುಕ್ತಾಯಕ್ಕೆ ಉಭಯ ತಂಡಗಳು 11–11ರ ಸಮಬಲ ಸಾಧಿಸಿದವು.

ದ್ವಿತೀಯಾರ್ಧದ ಮೊದಲ 10 ನಿಮಿಷವೂ ನೀರಸವಾಗಿತ್ತು. ನಂತರ ಪಂದ್ಯ ಕಳಗಟ್ಟಿತು. ಕೊನೆಯ ಐದು ನಿಮಿಷಗಳು ಬಾಕಿ ಇದ್ದಾಗ ಸ್ಕೋರು 21–21ರಲ್ಲಿ ಸಮ ಆಗಿತ್ತು. ಕೊನೆಯ ಎರಡು ರೇಡ್‌ಗಳ ಪೈಕಿ ಒಂದಲ್ಲಿ ಎರಡು ಪಾಯಿಂಟ್ ಗಳಿಸಿದ ನವೀನ್ ಮತ್ತೆ ಸೂಪರ್ ರೇಡ್‌ ಮೂಲಕ ಮಿಂಚಿದರು.

ತೆಲುಗು ಟೈಟನ್ಸ್ ಎದುರಿನ ಪಂದ್ಯದಲ್ಲಿ ಯು.ಪಿ.ಯೋಧಾದ ಪ್ರದೀಪ್ ನರ್ವಾಲ್ 10 ಪಾಯಿಂಟ್ ಗಳಿಸಿದರೆ ಶ್ರೀಕಾಂತ್ ಯಾದವ್‌, ಸುರೇಂದರ್ ಗಿಲ್ ಮತ್ತು ನಿತೇಶ್ ಕುಮಾರ್ ತಲಾ 7 ಪಾಯಿಂಟ್ ಕಲೆ ಹಾಕಿದರು. ಟೈಟನ್ಸ್‌ಗಾಗಿ ಅಂಕಿತ್ ಬೇನಿವಾಲ್ ಮತ್ತು ರಜನೀಶ್ ತಲಾ 9 ಪಾಯಿಂಟ್ ಗಳಿಸಿದರು.

ಯು ಮುಂಬಾ ಮತ್ತು ಬೆಂಗಾಲ್ ವಾರಿಯರ್ಸ್ ನಡುವಿನ ಪಂದ್ಯ 32–32ರಲ್ಲಿ ಟೈ ಆಯಿತು. ಮಣಿಂದರ್ ಸಿಂಗ್ (17 ಪಾಯಿಂಟ್‌) ಅವರ ಪ್ರಭಾವಿ ಆಟದ ನೆರವಿನಿಂದ ಬೆಂಗಾಲ್ ಆಧಿಪತ್ಯ ಸ್ಥಾಪಿಸಿತ್ತು. ಆದರೆ ಕೊನೆಯ ಹಂತದಲ್ಲಿ ಮುಂಬಾ ಪುಟಿದೆದ್ದು ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ತಂಡದ ಪರ ಅಭಿಷೇಕ್ ಸಿಂಗ್ 13 ಪಾಯಿಂಟ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT