ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಣಯ್ ಜಯಭೇರಿ: ಸಿಂಧುಗೆ ಸೋಲು

ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಪ್ರೀಕ್ವಾರ್ಟರ್‌ಗೆ ಸಾತ್ವಿಕ್–ಚಿರಾಗ್‌
Last Updated 11 ಜನವರಿ 2023, 12:42 IST
ಅಕ್ಷರ ಗಾತ್ರ

ಕ್ವಾಲಾಲಂಪುರ: ದೀರ್ಘ ಸಮಯದ ಬಳಿಕ ಸ್ಪರ್ಧಾಕಣಕ್ಕೆ ಇಳಿದಿದ್ದ ಭಾರತದ ಪಿ.ವಿ.ಸಿಂಧು ಅವರಿಗೆ ಗೆಲುವು ಒಲಿಯಲಿಲ್ಲ. ಲಕ್ಷ್ಯಸೇನ್‌ ಎದುರು ಗೆದ್ದ ಎಚ್‌.ಎಸ್‌. ಪ್ರಣಯ್ ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.

ಇಲ್ಲಿ ನಡೆಯುತ್ತಿರುವ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಸಿಂಧು 12–21, 21–10, 15–21ರಿಂದ ರಿಯೊ ಒಲಿಂಪಿಕ್ಸ್ ಚಾಂಪಿಯನ್‌ ಸ್ಪೇನ್‌ನ ಕರೋಲಿನಾ ಮರಿನ್ ಎದುರು ಎಡವಿದರು.

ಬರ್ಮಿಂಗ್‌ಹ್ಯಾಮ್‌ನಲ್ಲಿ ಆಗಸ್ಟ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಗೇಮ್ಸ್‌ ವೇಳೆ ಪಾದದ ಗಾಯಕ್ಕೆ ಒಳಗಾಗಿದ್ದ ಸಿಂಧು ಅವರು ಆ ಬಳಿಕ ಯಾವುದೇ ಟೂರ್ನಿಯಲ್ಲಿ ಆಡಿರಲಿಲ್ಲ. ಇಲ್ಲಿ 59 ನಿಮಿಷಗಳ ಹಣಾಹಣಿಯಲ್ಲಿ ಅವರು ತಮ್ಮ ಬದ್ಧ ಎದುರಾಳಿ ಎದುರು ಸೋಲೊಪ್ಪಿಕೊಂಡರು.

ಮೊದಲ ಗೇಮ್‌ ಕೈಚೆಲ್ಲಿದ ಬಳಿಕ ಪುಟಿದೆದ್ದ ಸಿಂಧು, ಎರಡನೇ ಗೇಮ್‌ ತಮ್ಮದಾಗಿಸಿಕೊಂಡರು. ಆದರೆ ನಿರ್ಣಾಯಕ ಗೇಮ್‌ನಲ್ಲಿ ಮತ್ತೆ ಎಡವಿದರು.

ಲಕ್ಷ್ಯ ಸವಾಲು ಮೀರಿದ ಪ್ರಣಯ್‌: ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಪ್ರಣಯ್‌, ತಮ್ಮ ಸ್ಥಾನಕ್ಕೆ ತಕ್ಕ ಆಟವಾಡಿದರು. ಮೊದಲ ಗೇಮ್‌ನಲ್ಲಿ ಸೋತರೂ 22–24, 21–12, 21–18ರಿಂದ ಭಾರತದವರೇ ಆದ ಲಕ್ಷ್ಯ ಸೇನ್‌ ಅವರನ್ನು ಪರಾಭವಗೊಳಿಸುವಲ್ಲಿ ಯಶಸ್ವಿಯಾದರು. ಒಂದು ತಾಸಿಗಿಂತ ಅಧಿಕ ಅವಧಿಗೆ ನಡೆದ ಪಂದ್ಯದಲ್ಲಿ 10ನೇ ಕ್ರಮಾಂಕದ ಆಟಗಾರನ ಎದುರು ಪ್ರಣಯ್‌ಗೆ ಗೆಲುವು ಒಲಿಯಿತು.

ಪ್ರಣಯ್ ಅವರು ಮುಂದಿನ ಪಂದ್ಯದಲ್ಲಿ ಇಂಡೊನೇಷ್ಯಾದ ಚಿಕೊ ಔರಾ ದ್ವಿ ವರ್ದೊಯೊ ಎದುರು ಆಡಲಿದ್ದಾರೆ.

ಸಾತ್ವಿಕ್– ಚಿರಾಗ್ ಮುನ್ನಡೆ: ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ 16ರ ಘಟ್ಟಕ್ಕೆ ಮುನ್ನಡೆದರು. ಮೊದಲ ಸುತ್ತಿನ ಪಂದ್ಯದಲ್ಲಿ ಸಾತ್ವಿಕ್– ಚಿರಾಗ್‌ 21-16, 21-13ರಿಂದ ಕೊರಿಯಾದ ಚೊಯಿ ಸೊಲ್ ಗು ಮತ್ತು ಕಿಮ್ ವೊನ್ ಹೊ ಅವರನ್ನು ಮಣಿಸಿದರು.

ಭಾರತದ ಆಟಗಾರರಿಗೆ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಇಂಡೊನೇಷ್ಯಾದ ಮುಹಮ್ಮದ್‌ ಶೊಹಿಬುಲ್‌ ಫಿಕ್ರಿ– ಬಾಗಸ್‌ ಮೌಲಾನ ಎದುರು ಆಡುವರು.

ಮಹಿಳಾ ಸಿಂಗಲ್ಸ್‌ ಮೊದಲ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಮಾಳವಿಕಾ ಬನ್ಸೋದ್‌ ಅವರು 9-21, 13-21ರಿಂದ ಕೊರಿಯಾದ ಆ್ಯನ್ ಸೆ ಯೂಂಗ್ ಎದುರು ಮಣಿದರು. ಡಬಲ್ಸ್‌ನಲ್ಲಿ ಅಶ್ವಿನಿ ಭಟ್‌– ಶಿಖಾ ಗೌತಮ್‌ 10-21, 12-21ರಿಂದ ಥಾಯ್ಲೆಂಡ್‌ನ ಸುಪಿಸ್ಸರಾ ಪಾಸಂಪ್ರನ್‌– ಪುಟ್ಟಿಟಾ ಸುಪಜಿರಾಕುಲ್ ಎದುರು ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT