ಮನದೀಪ್ ಹ್ಯಾಟ್ರಿಕ್: ಫೈನಲ್‌ಗೆ ಭಾರತ

ಟೋಕಿಯೊ: ಉಪನಾಯಕ ಮನದೀಪ್ ಸಿಂಗ್ ಅವರ ಹ್ಯಾಟ್ರಿಕ್ ಗೋಲು ನೆರವಿನಿಂದ ಭಾರತ ಫೈನಲ್‌ಗೆ ಕಾಲಿಟ್ಟಿದೆ. ಮಂಗಳವಾರ ಒಲಿಂಪಿಕ್ ಹಾಕಿ ಟೆಸ್ಟ್‌ನ ಕೊನೆಯ ಲೀಗ್ ಪಂದ್ಯದಲ್ಲಿ ಜಪಾನ್ ವಿರುದ್ಧ 6–3ರಿಂದ ಭರ್ಜರಿ ಜಯ ಸಾಧಿಸಿತು.
ಹೋದ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಹರ್ಮನ್‌ಪ್ರೀತ್ ಪಡೆ ಸೋಲಿನ ಕಹಿ ಉಂಡಿತ್ತು. ಒಯ್ ಕ್ರೀಡಾಂಗಣದಲ್ಲಿ ಜಪಾನ್ ವಿರುದ್ಧ ಆ ನಿರಾಸೆಯನ್ನು ಮರೆಯಿತು. ಬುಧವಾರ ನಡೆಯುವ ಅಂತಿಮ ಪಂದ್ಯದಲ್ಲಿ ಭಾರತಕ್ಕೆ ಮತ್ತೆ ನ್ಯೂಜಿಲೆಂಡ್ ಸವಾಲು ಎದುರಾಗಿದೆ.
ಭಾರತದ ಪರ ಮನದೀಪ್ 9, 29, 30ನೇ ನಿಮಿಷದಲ್ಲಿ ಗೋಲು ಗಳಿಸಿ ಮಿಂಚಿದರೆ, ನೀಲಕಂಠ ಶರ್ಮಾ (3), ನೀಲಂ ಸಂಜೀಪ ಕ್ಸೆಸ್ (7) ಹಾಗೂ ಗುರ್ಜಂತ್ ಸಿಂಗ್ (41) ತಲಾ ಒಂದು ಗೋಲು ದಾಖಲಿಸಿದರು.
ಕೆಂಟಾರೊ ಫುಕುದಾ (25), ಕೆಂಟಾ ತನಕಾ (36) ಹಾಗೂ ಕಜುಮಾ ಮುರಾಟಾ (52) ಜಪಾನ್ ಪರ ಯಶಸ್ಸು ಕಂಡರು.
ಪಂದ್ಯದ ಮೂರನೇ ನಿಮಿಷದಲ್ಲೇ ಭಾರತ ಖಾತೆ ತೆರೆಯಿತು. ನೀಲಕಂಠ ಸೊಗಸಾದ ಫೀಲ್ಡ್ ಗೋಲು ದಾಖಲಿಸಿದರು. ಆರಂಭದ ಮುನ್ನಡೆಯಿಂದ ಉತ್ಸಾಹ ಹೆಚ್ಚಿಸಿಕೊಂಡ ಭಾರತ ಎದುರಾಳಿ ಮೇಲೆ ಒತ್ತಡ ಹೆಚ್ಚಿಸುತ್ತಲೇ ಸಾಗಿತು. ಏಳನೇ ನಿಮಿಷದಲ್ಲೇ ಪೆನಾಲ್ಟಿ ಕಾರ್ನರ್ ಅವಕಾಶವನ್ನು ನೀಲಂ ಸಂಜೀಪ್ ಗೋಲಾಗಿಸಿ 2–0 ಮುನ್ನಡೆ ತಂದರು.
ಹರ್ಮನ್‌ಪ್ರೀತ್ ಬಳಗ ಆಕ್ರಮಣಕಾರಿ ಆಟಕ್ಕೆ ಮನಮಾಡಿತು. ಒಂಬತ್ತನೇ ನಿಮಿಷದಲ್ಲಿ ಮನದೀಪ್ ಫೀಲ್ಡ್ ಗೋಲು ಬಾರಿಸಿದರು. ಮೊದಲ ಕ್ವಾರ್ಟರ್‌ನಲ್ಲಿ ಜಪಾನ್ ಯಶಸ್ಸು ಸಾಧಿಸಲು ಹೆಣಗಾಡಿತು. ಆದರೆ ಫಲ ದೊರೆಯಲಿಲ್ಲ. ಭಾರತದ 3–0 ಮುನ್ನಡೆಯೊಂದಿಗೆ ಕ್ವಾರ್ಟರ್ ಅಂತ್ಯವಾಯಿತು.
ಎರಡನೇ ಕ್ವಾರ್ಟರ್‌ನ್ನೂ ಭಾರತ ಆಕ್ರಮಣಕಾರಿಯಾಗಿಯೇ ಆರಂಭಿಸಿತು. ಜರ್ಮನ್‌ಪ್ರೀತ್ ಸಿಂಗ್ ಹಾಗೂ ನಾಯಕ ಹರ್ಮನ್‌ಪ್ರೀತ್ ಸಿಂಗ್ ಉತ್ತಮ ಪ್ರಯತ್ನ ನಡೆಸಿದರು. ಆದರೆ ಗೋಲು ದಾಖಲಾಗಲಿಲ್ಲ.
ಫುಕುದಾ ಫೀಲ್ಡ್ ಗೋಲು ದಾಖಲಿಸುವ ಮೂಲಕ 25ನೇ ನಿಮಿಷದಲ್ಲಿ ಜಪಾನ್ ಖಾತೆ ತೆರೆಯಿತು. ಆದರೆ ಸತತ ಎರಡು ಅದ್ಭುತ ಫೀಲ್ಡ್ ಗೋಲು ದಾಖಲಿಸಿದ ಮನದೀಪ್ ಸಿಂಗ್ ತಂಡದ ಮುನ್ನಡೆಯನ್ನು 5–1ಕ್ಕೆ ಮುನ್ನಡೆ ಹೆಚ್ಚಿಸಿದರು. ಈ ಹಂತದಲ್ಲಿ ದಾಳಿಯ ವೇಗ ಹೆಚ್ಚಿಸಿದ ಜಪಾನ್‌ಗೆ 36ನೇ ನಿಮಿಷದಲ್ಲಿ ಕೆಂಟಾ ತನಕಾ ಯಶಸ್ಸು ತಂದರು. ಆದರೆ ಸಂತಸ ಹೆಚ್ಚು ಹೊತ್ತು ಉಳಿಯಲಿಲ್ಲ. ಮೂರನೇ ಕ್ವಾರ್ಟರ್ ಅಂತ್ಯಕ್ಕೆ ಗುರ್ಜತ್ ಸಿಂಗ್ ಎದುರಾಳಿ ಕೋಟೆಯನ್ನು ಭೇದಿಸಿದರು. ಭಾರತದ ಮುನ್ನಡೆ 6–2ಕ್ಕೆ ತಲುಪಿತು.
ನಾಲ್ಕನೇ ಕ್ವಾರ್ಟರ್‌ನಲ್ಲಿ ಭಾರತದ ರಕ್ಷಣಾ ಕೋಟೆಗೆ ನುಗ್ಗಿದ ಆತಿಥೇಯ ತಂಡ ಕುಜುಮಾ ಮೂಲಕ ಗೋಲು ದಾಖಲಿಸಿ 3–6ಕ್ಕೆ ಹಿನ್ನಡೆ ತಗ್ಗಿಸಿಕೊಂಡಿತು. ಈ ಗೆಲುವಿನೊಂದಿಗೆ ಹರ್ಮನ್ ಪ್ರೀತ್ ಬಳಗ ಪಾಯಿಂಟ್‌ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿತು.
#TeamIndia beat Japan this morning to head into the big final tomorrow. 💪
Have a look at the stills from #INDvJPN: https://t.co/gZgGFnH4Yp#IndiaKaGame #ReadySteadyTokyo #Tokyo2020 @WeAreTeamIndia pic.twitter.com/wqnwEUTOCL
— Hockey India (@TheHockeyIndia) August 20, 2019