ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುತ್ವ ಮುಂದಿಟ್ಟು ಮತಯಾಚನೆ

Last Updated 27 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಹಿಂದುಳಿದ ವರ್ಗದವರ ಸ್ಥಿತಿಗತಿ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ವಿವಾದ, ವಂಶಪಾರಂಪರ್ಯ ರಾಜಕಾರಣ, ಯಡಿಯೂರಪ್ಪ ಮತ್ತು ತಮ್ಮ ನಡುವಿನ ಸಂಬಂಧ ಮುಂತಾದವುಗಳ ಬಗ್ಗೆ ಮಾತನಾಡಿದ್ದಾರೆ ಕೆ.ಎಸ್‌.ಈಶ್ವರಪ್ಪ.

l ಹಿಂದುಳಿದ ವರ್ಗದವರು ನಿಮ್ಮ ಪಕ್ಷಕ್ಕೇ ಯಾಕೆ ಮತ ಹಾಕಬೇಕು?

ನರೇಂದ್ರ ಮೋದಿ ಹಿಂದುಳಿದ ವರ್ಗದವರ ಹಿತಕ್ಕಾಗಿ ಹೊಸ ಮಸೂದೆ ತರಲಿದ್ದಾರೆ. ₹ 5 ಲಕ್ಷದಷ್ಟು ಮನೆ ನಿರ್ಮಾಣ ವೆಚ್ಚದಲ್ಲಿ ₹ 3.20 ಲಕ್ಷ ಸಬ್ಸಿಡಿ ಕೊಡಿಸಲಿದ್ದಾರೆ. ಆದರೆ, ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದಮೇಲೆ ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ, ವಾಲ್ಮೀಕಿ, ಕನಕದಾಸರು ಎಲ್ಲರನ್ನೂ ಮರೆತರು. ಹಿಂದುಳಿದ ವರ್ಗದವರಿಗೆ ಮನೆಯನ್ನೂ ಕೊಡಲಿಲ್ಲ. ದಲಿತ ಮತ್ತು ಹಿಂದುಳಿದ ವರ್ಗಗಳ ಮಠಾಧಿಪತಿಗಳ ಒಕ್ಕೂಟದ 37 ಸ್ವಾಮೀಜಿಗಳು ನಾನು ಸಚಿವನಾಗಿದ್ದಾಗ ಭೇಟಿ ಮಾಡಿದ್ದರು.

ಮಠಗಳಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ವಸತಿ ನಿಲಯ, ಶಾಲೆಗಳನ್ನು ಕೇಳಿದ್ದರು. ಮೂವತ್ತೇಳೂ ಮಠಗಳಿಗೆ ₹ 97 ಕೋಟಿ ಬಿಡುಗಡೆ ಮಾಡಿದ್ದೆವು. ಅವರೆಲ್ಲರೂ ಮತ್ತೊಮ್ಮೆ ಬಿಜೆಪಿ ನೇತೃತ್ವದ ಸರ್ಕಾರ ಬರಲಿ ಎಂದು ಇಷ್ಟಪಡುತ್ತಿದ್ದಾರೆ. ಮಾದಾರ ಚೆನ್ನಯ್ಯ ಸ್ವಾಮೀಜಿ ಅವರು ‘ಈ ಮಠ ಮಾಡಿಕೊಟ್ಟಿದ್ದು ನೀವೇ’ ಎನ್ನುತ್ತಾರೆ. ಹೀಗಾಗಿ ನಮಗೆ ಹಿಂದುಳಿದ ವರ್ಗದವರು ಮತ ಹಾಕಬೇಕು.

l ಹಿಂದುಳಿದ ವರ್ಗಗಳ ನಾಯಕನಾಗಿ ಹೊರಹೊಮ್ಮಲು ನಿಮಗೆ ಯಾಕೆ ಸಾಧ್ಯವಾಗಲೇ ಇಲ್ಲ?

ನಾನು ಹಿಂದುತ್ವವಾದಿ. ಹಿಂದುತ್ವದ ಒಳಗೇ ಹಿಂದುಳಿದ ವರ್ಗದವರೂ ಸೇರುತ್ತಾರೆ. ಅವರ ಏಳಿಗೆಯಿಂದ ಹಿಂದುತ್ವವೂ ಉದ್ಧಾರವಾಗುತ್ತದೆ ಎನ್ನುವುದು ನಂಬಿಕೆ. ವೈಯಕ್ತಿಕ ಬೆಳವಣಿಗೆ ಮುಖ್ಯವಲ್ಲ.

l ಚುನಾವಣೆ ರಾಜಕಾರಣದಿಂದಾಗಿ ನಿಮ್ಮದೇ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಹಿನ್ನಡೆ ಆಯಿತಲ್ಲವೇ?

ಸಿದ್ದರಾಮಯ್ಯನವರಿಂದ ನಿರಾಸೆ ಅನುಭವಿಸಿದವರು, ದಲಿತರು ಹಾಗೂ ಹಿಂದುಳಿದ ವರ್ಗದವರ ಉದ್ಧಾರದ ಉದ್ದೇಶದಿಂದ ರಾಯಣ್ಣ ಬ್ರಿಗೇಡ್ ಕಟ್ಟಿದರು. ನನ್ನನ್ನೂ ಕರೆದರು. ಅದಕ್ಕೂ ಬಿಜೆಪಿಗೂ ಸಂಬಂಧವಿಲ್ಲ. ಅದರಲ್ಲಿ ಇದ್ದವರಿಗೆ ಚುನಾವಣೆಗೆ ಟಿಕೆಟ್ ಕೊಡಿಸುತ್ತೇನೆ ಎಂದು ನಾನು ಹೇಳಿರಲಿಲ್ಲ. ನಮ್ಮ ರಾಷ್ಟ್ರೀಯ ಅಧ್ಯಕ್ಷರು ನನ್ನನ್ನು, ಯಡಿಯೂರಪ್ಪನವರನ್ನು ಕೂರಿಸಿಕೊಂಡು ದೆಹಲಿಯಲ್ಲಿ ಮೂರೂವರೆ ತಾಸು ಚರ್ಚಿಸಿದರು. ಕಾರ್ಯಕರ್ತರಲ್ಲಿ ಗೊಂದಲ ಮೂಡುವುದರಿಂದ, ಚುನಾವಣೆ ಸಂದರ್ಭದಲ್ಲಿ ಬ್ರಿಗೇಡ್ ವಿಷಯಕ್ಕೆ ಹೋಗಬೇಡಿ ಎಂದು ಸೂಚಿಸಿದರು. ಅವರ ಮಾತಿಗೆ ಬೆಲೆ ಕೊಟ್ಟೆ.

l ಮಂಗಳೂರಿನಲ್ಲಿ ಟಿಕೆಟ್ ಹಂಚಿಕೆಯಲ್ಲಿ ಬಿಜೆಪಿ ಬಿಲ್ಲವರನ್ನು ನಿರ್ಲಕ್ಷಿಸಿದೆಯಲ್ಲವೇ?

ಜಾತಿ ನೋಡಿಕೊಂಡು ಎಲ್ಲ ಕಡೆ ಟಿಕೆಟ್ ಕೊಡಬೇಕು ಎಂದೇನೂ ಇಲ್ಲ. ಸಮೀಕ್ಷೆ ನಡೆಸಿ, ಪಕ್ಷ ಟಿಕೆಟ್ ನೀಡುವ ತೀರ್ಮಾನ ತೆಗೆದುಕೊಂಡಿದೆ.

l ಈ ಸಂದರ್ಭವು ನಿಮ್ಮ ಹಾಗೂ ಯಡಿಯೂರಪ್ಪನವರ ನಡುವಿನ ‘ಶಾಂತಿ ಕಾಲ'ದ ತರಹ ಕಾಣುತ್ತಿದೆ ಅಲ್ಲವೇ?

ನಾನು ವಿಚಾರಕ್ಕೆ ಸಂಘರ್ಷ ನಡೆಸಿದವನು. ಅಣ್ಣ-ತಮ್ಮಂದಿರ ಜೊತೆಗೂ ಕಠೋರವಾಗಿ ಮಾತನಾಡಿದ್ದೇನೆ. ನಾನು ಬೆಳೆದಿರುವುದೇ ಯಡಿಯೂರಪ್ಪ, ಸಂಘ ಪರಿವಾರದವರಿಂದ. ಯಡಿಯೂರಪ್ಪನವರು ಪಕ್ಷ ಬಿಡುವುದಾಗಿ ಹೇಳಿದಾಗ ಬೇಡ ಎಂದು ನಾನು ಒತ್ತಾಯಿಸಿದ್ದೆ. ಸೇರಿಸಿಕೊಳ್ಳುವ ಸಂದರ್ಭ ಬಂದಾಗ ಅವರು ಬರಲಿ ಎಂದೂ ಹಟ ಹಿಡಿದಿದ್ದೆ. ಸಂವಾದದಲ್ಲಿ ಸಂಘರ್ಷ ಸಹಜ. ನಮ್ಮ ಸಂಘರ್ಷಗಳೇ ಹೊರಗಿನವರಿಗೆ ಮುನಿಸು, ‘ಗ್ಯಾಪ್’ ಎಂಬಂತೆ ಕಾಣುತ್ತದಷ್ಟೆ.

l ಜನಾರ್ದನ ರೆಡ್ಡಿ ಅವರಿಗೂ ನಿಮ್ಮ ಪಕ್ಷಕ್ಕೂ ಸಂಬಂಧ ಇಲ್ಲ ಎಂದು ಅಮಿತ್ ಶಾ ಅವರೇ ಹೇಳಿದರು. ಆದರೂ ಮಧ್ಯ ಕರ್ನಾಟಕದಲ್ಲಿ ರೆಡ್ಡಿ ಕ್ರಿಯಾಶೀಲರಾಗಿ ಪ್ರಚಾರದಲ್ಲಿ ತೊಡಗಿದ್ದಾರಲ್ಲ?

ಜನಾರ್ದನ ರೆಡ್ಡಿ ಅವರ ಭಾಗವಹಿಸುವಿಕೆಯನ್ನು ನಾನೂ ಮಾಧ್ಯಮಗಳಲ್ಲಷ್ಟೇ ಓದಿ ತಿಳಿದುಕೊಂಡಿರುವೆ. ಅದರ ಬಗೆಗೆ ಹೆಚ್ಚು ಗೊತ್ತಿಲ್ಲ. ಈ ಕುರಿತು ರಾಷ್ಟ್ರೀಯ ಅಧ್ಯಕ್ಷರನ್ನು ಕೇಳಲು ನನಗೆ ಆಗಿಲ್ಲ.

l ‘ಏನಾದರೂ ಹೇಳುತ್ತಿರಬೇಕು; ಸುಳ್ಳು ನುಡಿದರೂ ಪರವಾಗಿಲ್ಲ’ ಎಂದು ನೀವು ಹೇಳಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತಲ್ಲವೇ?

ಅದು ಪಕ್ಷದ ಕಾರ್ಯಕರ್ತರ ಸಭೆ. ಅಲ್ಲಿಗೆ ಪತ್ರಕರ್ತರೊಬ್ಬರು ಬಂದರು. ಬರೆಯುವುದಿಲ್ಲ, ಪ್ರಸಾರ ಮಾಡುವುದಿಲ್ಲ ಎಂದಾದರೆ ಅಲ್ಲಿರಬಹುದು, ಇಲ್ಲದಿದ್ದರೆ ಹೋಗಬಹುದು ಎಂದು ಸೂಚಿಸಿದೆ. ನನ್ನ ಮಾತಿಗೆ ಒಪ್ಪಿರುವುದಾಗಿ ಹೇಳಿದರು. ಆಮೇಲೆ ವಿಡಿಯೊ ವೈರಲ್ ಮಾಡಿದರು. ಅದು ನಮ್ಮ ಆಂತರಿಕ ಸಭೆ. ಅಲ್ಲಿ ತಮಾಷೆ ಮಾಡುತ್ತಿರುತ್ತೇವೆ. ಅದನ್ನೇ ಇಟ್ಟುಕೊಂಡು ಪತ್ರಕರ್ತ ಮಾಡಿದ ರಾಜಕೀಯ ಅದು.

l ಚುನಾವಣೆ ಪ್ರಚಾರದಲ್ಲಿ ಕಾಂಗ್ರೆಸ್‌ನ ಭ್ರಷ್ಟಾಚಾರದ ಕುರಿತು ಪದೇ ಪದೇ ವಾಗ್ದಾಳಿ ನಡೆಸಿದ್ದೀರಿ. ಆದರೆ, ಬಲವಾದ ಸಾಕ್ಷ್ಯ ಒದಗಿಸಲು ಆಗಲೇ ಇಲ್ಲವಲ್ಲ…

ಅದು ಯಾವ ಪಕ್ಷದವರಿಗೂ ಆಗಿಲ್ಲ. ರಾಜಕಾರಣದಲ್ಲಿ ಪರಸ್ಪರ ಟೀಕೆಗಳು ಸಹಜ. ಆದರೆ, ಸಿದ್ದರಾಮಯ್ಯ ಸಾಧನಾ ಸಮಾವೇಶ ಮಾಡಿದರಲ್ಲ; ಪಕ್ಕದಲ್ಲಿ ಡಿ.ಸಿ, ಎಸ್.ಪಿಯನ್ನೂ ಕೂರಿಸಿಕೊಂಡರು. ಸರ್ಕಾರಿ ದುಡ್ಡಿನಲ್ಲಿ ಮೋದಿ, ಅಮಿತ್ ಶಾ, ಯಡಿಯೂರಪ್ಪನವರನ್ನು ಟೀಕಿಸಿದರು. ಪ್ರಧಾನಿ ಮೋದಿ ಟೀಕೆಯನ್ನಷ್ಟೇ ಮಾಡಲಿಲ್ಲ; ಸಾಧನೆಯನ್ನೂ ಹೇಳಿಕೊಂಡರು.

l ನೀವು ಮುಖ್ಯಮಂತ್ರಿ ಸೀಟಿನ ಮೇಲೆ ಟವಲ್ ಹಾಕಿರುವಿರಾ?

ದೊಡ್ಡ ಮಾತಾಯಿತು. ಮೋದಿ ಅವರು ನನ್ನನ್ನು ‘ಸಾಥಿ’ ಎಂದು ಪ್ರೀತಿಯಿಂದ ಕರೆಯುವುದು ಅವರ ದೊಡ್ಡತನ. ನನಗಿಂತ ದೊಡ್ಡವರು ಪಕ್ಷದಲ್ಲಿದ್ದಾರೆ. ಕೊಟ್ಟ ಜವಾಬ್ದಾರಿಯನ್ನಷ್ಟೇ ನಿರ್ವಹಿಸುವೆ.

l ನೀವು ಯಾವ ಒಂದೇ ಒಂದು ಅಂಶ ಇಟ್ಟುಕೊಂಡು ಮತ ಯಾಚಿಸುವಿರಿ?

ಹಿಂದುತ್ವ ಇಟ್ಟುಕೊಂಡು ಯಾಚಿಸುವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT