ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀಕ್ವಾರ್ಟರ್‌ ಫೈನಲ್‌ ತೀರ್ಪು: ಐಒಸಿ ಮೇಲೆ ಮೇರಿ ಕೋಮ್ ಆಕ್ರೋಶ

Last Updated 29 ಜುಲೈ 2021, 15:14 IST
ಅಕ್ಷರ ಗಾತ್ರ

ನವದೆಹಲಿ: ಗುರುವಾರ ನಡೆದ 51 ಕೆಜಿ ವಿಭಾಗದ ಪ್ರೀಕ್ವಾರ್ಟರ್‌ ಫೈನಲ್‌ನಲ್ಲಿ ತಮ್ಮ ವಿರುದ್ಧ ನೀಡಲಾದ ತೀರ್ಪಿನ ಬಗ್ಗೆ ಮೇರಿ ಕೋಮ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂತರರಾಷ್ಟ್ರೀಯ ಒಲಿಂಪಿಕ್ ಕೌನ್ಸಿಲ್‌(ಐಒಸಿ) ಬಾಕ್ಸಿಂಗ್ ಕಾರ್ಯಪಡೆಯ ವಿರುದ್ಧ ಹರಿಹಾಯ್ದಿರುವ ಅವರು, ‘ಕಳಪೆ ಅಂಪೈರಿಂಗ್‘ ಎಂದಿದ್ಧಾರೆ.

ಸುದ್ದಿಸಂಸ್ಥೆಗೆ ಫೋನ್‌ ಮೂಲಕ ಸಂದರ್ಶನ ನೀಡಿರುವ ಅವರು, ‌‘ನಾನು ಕೂಡ ಈ ಟಾಸ್ಕ್‌ಫೋರ್ಸ್ ಸದಸ್ಯೆ. ಉತ್ತಮವಾದ ಆಯೋಜನೆಗೆ ಬೇಕಾದ ಎಲ್ಲ ಸಲಹೆ, ಸಹಕಾರವನ್ನು ನೀಡುತ್ತ ಬಂದಿದ್ದೇನೆ. ಆದರೆ ನನ್ನ ಜೊತೆಗೆ ಈ ರೀತಿ ಮಾಡಿದ್ದಾರೆ‘ ಎಂದು ಬೇಸರ ವ್ಯಕ್ತಪಡಿಸಿದರು.

‘ರಿಂಗ್‌ನಲ್ಲಿ ಬೌಟ್ ಮುಗಿದಾಗ ನಾನು ಬಹಳ ಸಂತಸದಿಂದ ಇದ್ದೆ. ಏಕೆಂದರೆ, ಗೆದ್ದಿರುವ ವಿಶ್ವಾಸ ನನಗಿತ್ತು. ಉದ್ದೀಪನ ಮದ್ದು ಸೇವನೆ ಪರೀಕ್ಷೆಗೆ ಮಾದರಿ ಪಡೆಯಲು ಕರೆದೊಯ್ದಾಗಲೂ ಬಹಳ ಹರ್ಷದಿಂದ ಇದ್ದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ನಾನು ಸೋತ ಸುದ್ದಿಗಳು ಬಂದಿದ್ದನ್ನು ನೋಡಿದೆ. ನನ್ನ ಕೋಚ್ (ಚೋಟೆಲಾಲ್ ಯಾದವ್) ಕೂಡ ಹೇಳಿದರು. ಆಗ ನನಗೆ ಆಘಾತವಾಯಿತು‘ ಎಂದಿದ್ದಾರೆ.

‘ಈ ಹುಡುಗಿ (ವೆಲೆನ್ಸಿಯಾ)ಯನ್ನು ಈ ಹಿಂದೆ ಎರಡು ಬಾರಿ ಸೋಲಿಸಿದ್ದೇನೆ. ರೆಫರಿ ಆಕೆಯ ಕೈಯೆತ್ತಿ ಗೆಲುವು ಘೋಷಿಸಿದಾಗ ನನಗೆ ನಂಬಲು ಸಾಧ್ಯವೇ ಆಗಲಿಲ್ಲ‘ ಎಂದಿದ್ದಾರೆ.

ಬೌಟ್‌ನ ಮೊದಲ ಸುತ್ತಿನಲ್ಲಿ ಮೇರಿ 4–1ರಿಂದ ಹಿಂದಿದ್ದರು. ಆದರೆ ಐವರು ನಿರ್ಣಾಯಕರ ತಂಡವು ವೆಲೆನ್ಸಿಯಾ ಪರವಾಗಿ 10–9ರ ವಿಜಯ ಘೋಷಿಸಿತ್ತು. ನಂತರದ ಎರಡು ಸುತ್ತುಗಳಲ್ಲಿ ಮೇರಿ ಗೆದ್ದರೂ ಸ್ಕೋರ್‌ಲೈನ್‌ನಲ್ಲಿ ವೆಲೆನ್ಸಿಯಾ ಮುಂಚೂಣಿಯಲ್ಲಿದ್ದರು. ಇದು ಮೇರಿ ಸೋಲಿಗೆ ಕಾರಣವಾಯಿತು. ವೆಲೆನ್ಸಿಯಾ 3–2ರಿಂದ ಗೆದ್ದರು.

‘ಅಂಪೈರಿಂಗ್‌ನಲ್ಲಿ ಪಾರದರ್ಶಕತೆಯಿಲ್ಲ. ಇದು ಕೆಟ್ಟ ಸಂಪ್ರದಾಯ. ಇದನ್ನು ಪ್ರತಿಭಟಿಸಲು ಅಥವಾ ಮರುಪರಿಶೀಲನೆ ಮನವಿ ಮಾಡಲು ಕೂಡ ಅವಕಾಶವಿಲ್ಲ. ಈ ಧೋರಣೆ ಕೆಟ್ಟದಾಗಿದೆ‘ ಎಂದು ಕಿಡಿ ಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT