ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಕ್ಲಿಂಗ್‌: ಮೌಂಟೇನ್ ಬೈಕ್‌ಗೆ ‘ಬಿಂಕದ’ ಟ್ರ್ಯಾಕ್‌

ಕರ್ನಾಟಕದಲ್ಲಿ ಮೊದಲ ರಾಷ್ಟ್ರೀಯ ಚಾಂಪಿಯನ್‌ಷಿಪ್‌: ಗದಗದಲ್ಲಿ ಗರಿಗೆದರಿದ ನಿರೀಕ್ಷೆ
Last Updated 18 ಫೆಬ್ರುವರಿ 2021, 5:36 IST
ಅಕ್ಷರ ಗಾತ್ರ

ಬೆಂಗಳೂರು: ಸಾಲು ಸಾಲು ಮರಗಳ ನಡುವಿನ ಕಡಿದಾದ ಹಾದಿಯಲ್ಲಿ ಬಂಡೆ–ಕಲ್ಲುಗಳ ಸಂದಿಯ ಕಠಿಣ ತಡೆಗಳನ್ನು ದಾಟಿ ಸಾಗುವ ಮೌಂಟೇನ್ ಬೈಕ್ (ಎಂಟಿಬಿ) ಸ್ಪರ್ಧೆ ಕರ್ನಾಟಕದ ಸೈಕ್ಲಿಸ್ಟ್‌ಗಳಿಗೆ ಇನ್ನು ಸುಗಮವಾಗಲಿದೆ. ಗದಗ ಜಿಲ್ಲೆಯ ಬಿಂಕದಕಟ್ಟೆಯಲ್ಲಿರುವ ಸಾಲುಮರದ ತಿಮ್ಮಕ್ಕ ಉದ್ಯಾನದ ಸಹಜ ವಾತಾವರಣದಲ್ಲಿ ಬೆಡಗು–ಬಿನ್ನಾಣದ ಟ್ರ್ಯಾಕ್ ಸಜ್ಜುಗೊಂಡಿದ್ದು ದೇಶದ ಅಪರೂಪದ ಟ್ರ್ಯಾಕ್‌ಗಳಲ್ಲಿ ಒಂದೆನಿಸಿಕೊಂಡಿದೆ.

ಭಾರತದಲ್ಲಿ ಪುಣೆ, ಹಿಮಾಚಲಪ್ರದೇಶ, ಕೇರಳ, ಉತ್ತರಾಖಂಡ ಮುಂತಾದ ಕಡೆಗಳನ್ನು ಹೊರತುಪಡಿಸಿದರೆ ಬೇರೆಲ್ಲೂ ಸಹಜವಾದ ಎಂಟಿಬಿ ಟ್ರ್ಯಾಕ್ ಇಲ್ಲ. ಕರ್ನಾಟಕದಲ್ಲಿ ಮೈಸೂರಿನ ಲಲಿತ್ ಮಹಲ್ ಅರಮನೆ ಸಮೀಪ, ಗದಗ ಜಿಲ್ಲೆಯ ಯತ್ನಳ್ಳಿ ಮತ್ತು ಲಕ್ಷ್ಮೇಶ್ವರದಲ್ಲಿ ಎಂಟಿಬಿ ಟ್ರ್ಯಾಕ್ ಇದೆ. ಆದರೆ ಅದು ರಾಜ್ಯಮಟ್ಟದ ಸ್ಪರ್ಧೆಗಳಿಗಷ್ಟೆ ಸೀಮಿತ.

ರಾಷ್ಟ್ರೀಯ ಮಟ್ಟದ ಐದು ರೋಡ್ ಸೈಕ್ಲಿಂಗ್ ಚಾಂಪಿಯನ್‌ಷಿಪ್ ಮತ್ತು ಒಂದು ಟ್ರ್ಯಾಕ್ ಚಾಂಪಿಯನ್‌ಷಿಪ್ ಆಯೋಜಿಸಿರುವ ಕರ್ನಾಟಕಕ್ಕೆ ಎಂಟಿಬಿ ಚಾಂಪಿಯನ್‌ಷಿಪ್‌ ಆಯೋಜಿಸುವ ಅವಕಾಶ ಇಲ್ಲಿಯ ವರೆಗೆ ಸಿಗಲಿಲ್ಲ. ಗುಣಮಟ್ಟದ ಟ್ರ್ಯಾಕ್ ಇಲ್ಲದ್ದೇ ಇದಕ್ಕೆ ಕಾರಣ. ಅರಣ್ಯ ಇಲಾಖೆ ಮತ್ತು ರಾಜ್ಯ ಅಮೆಚೂರ್ ಸೈಕ್ಲಿಂಗ್ ಸಂಸ್ಥೆಯ ವರ್ಷಗಳ ಯೋಜನೆಯ ಫಲವಾಗಿ ಈಗ ಟ್ರ್ಯಾಕ್ ಸಿದ್ಧವಾಗಿದ್ದು ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ಆತಿಥ್ಯ ವಹಿಸುವ ಅವಕಾಶವೂ ಲಭಿಸಿದೆ.

ಎಂಟಿಬಿ ಚಾಂಪಿಯನ್‌ಷಿಪ್‌ಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಮಾನದಂಡಗಳನ್ನು ಅನುಸರಿಸಿ ಇದನ್ನು ಸಿದ್ಧಪಡಿಸಿದ್ದು ಒಟ್ಟು ನಾಲ್ಕು ಕಿಲೋಮೀಟರ್ ಉದ್ದದ ಟ್ರ್ಯಾಕ್‌ನ ಮೊದಲ ಒಂದೂವರೆ ಕಿಲೋಮೀಟರ್‌ ಜೀಪ್ ಟ್ರ್ಯಾಕ್‌ (ನಾಲ್ಕು ಸೈಕಲ್‌ಗಳು ಸಾಗಬಹುದಾದಷ್ಟು ಅಗಲ) ಇರುವುದು ವಿಶೇಷ.

‘ಅರಣ್ಯ ಇಲಾಖೆಗೆ ಸೇರಿದ ಟ್ರೀ ಪಾರ್ಕ್ ಇದು. ಎಂಟಿಬಿಗೆ ಬೇಕಾದ ಏರಿಳಿತ, ತಿರುವು, ದುರ್ಗಮ ಹಾದಿ ಎಲ್ಲವೂ ಇಲ್ಲಿ ಸಹಜವಾಗಿಯೇ ಇದೆ. ಸಣ್ಣಪುಟ್ಟ ಮಾರ್ಪಾಟುಗಳನ್ನು ಮಾಡಿ ಟ್ರ್ಯಾಕ್ ನಿರ್ಮಿಸಲಾಗಿದೆ. ಜನವರಿ 17ರಂದು ನಡೆದ ರಾಜ್ಯ ಎಂಟಿಬಿ ಚಾಂಪಿಯನ್‌ಷಿಪ್‌ ಈ ಟ್ರ್ಯಾಕ್‌ಗೆ ಸಂಬಂಧಿಸಿ ‘ಟ್ರಯಲ್’ ಆಗಿತ್ತು. ಅಂದು ಹಾಜರಿದ್ದ ಭಾರತ ಸೈಕ್ಲಿಂಗ್ ಫೆಡರೇಷನ್‌ನ ಮುಖ್ಯ ಕಮಿಷನರ್ ಕೆ.ದತ್ತಾತ್ರೇಯ ಅವರು ಟ್ರ್ಯಾಕ್ ಮಾನ್ಯ ಮಾಡಿದ್ದಾರೆ. ಹೀಗಾಗಿ ರಾಷ್ಟ್ರೀಯ ಚಾಂಪಿಯನ್‌ಷಿಪ್ ಆಯೋಜಿಸಲು ಫೆಡರೇಷನ್ ಅನುಮತಿ ನೀಡಿದೆ’ ಎಂದು ರಾಜ್ಯ ಅಮೆಚೂರ್ ಸೈಕ್ಲಿಂಗ್ ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀಶೈಲ ಎಂ.ಕುರಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ಅಂತರರಾಷ್ಟ್ರೀಯ ಸ್ಪರ್ಧೆಗೆ ಅನುಕೂಲ

ಇದು ಸುಸಜ್ಜಿತ, ಅಂತರರಾಷ್ಟ್ರೀಯ ಗುಣಮಟ್ಟದ ಟ್ರ್ಯಾಕ್. ಇದರಿಂದ ರಾಜ್ಯದ ಸೈಕ್ಲಿಸ್ಟ್‌ಗಳಿಗೆ ತುಂಬ ಅನುಕೂಲ ಆಗಲಿದೆ. ದೇಶದ ಇತರ ಕಡೆಗಳಲ್ಲಿ ಇರುವುದೆಲ್ಲ ಸಿಂಗಲ್ ಟ್ರ್ಯಾಕ್. ಆದ್ದರಿಂದ ಇಲ್ಲಿನವರು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ಹೋದಾಗ ಜೀಪ್ ಟ್ರ್ಯಾಕ್ ಮತ್ತು ಸಿಂಗಲ್ ಟ್ರ್ಯಾಕ್‌ಗಳಿಗೆ ಹೊಂದಿಕೊಳ್ಳಲು‌ ಕಷ್ಟವಾಗುತ್ತದೆ. ಇನ್ನು ಮುಂದೆ ಈ ಸಮಸ್ಯೆ ಕಾಡದು. ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ಸಿದ್ಧವಾಗುತ್ತಿರುವ ರಾಜ್ಯದ ಸೈಕ್ಲಿಸ್ಟ್‌ಗಳಿಗೆ ಇಲ್ಲೇ 15 ದಿನಗಳ ಶಿಬಿರ ಆಯೋಜನೆಯಾಗಿದೆ. ಇದರ ಲಾಭ ಈ ಬಾರಿಯ ಫಲಿತಾಂಶದಲ್ಲಿ ಎದ್ದು ಕಾಣಲಿದೆ.

ಸುನಿಲ್ ನಂಜಪ್ಪ, ಟ್ರ್ಯಾಕ್ ವಿನ್ಯಾಸಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT