ವಿಶ್ವ ಚಾಂಪಿಯನ್‌ಷಿಪ್‌ಗೆ ನೀರಜ್‌ ಅಲಭ್ಯ?

ಸೋಮವಾರ, ಮೇ 27, 2019
24 °C

ವಿಶ್ವ ಚಾಂಪಿಯನ್‌ಷಿಪ್‌ಗೆ ನೀರಜ್‌ ಅಲಭ್ಯ?

Published:
Updated:
Prajavani

ಮುಂಬೈ: ಭಾರತದ ಜಾವೆಲಿನ್‌ ಥ್ರೋ ಸ್ಪರ್ಧಿ ನೀರಜ್‌ ಚೋಪ್ರಾ ಅವರು ಮುಂಬರುವ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕಿಳಿಯುವುದು ಅನುಮಾನವಾಗಿದೆ.

ವಿಶ್ವ ಚಾಂಪಿಯನ್‌ಷಿಪ್‌ ಈ ವರ್ಷದ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ದೋಹಾದಲ್ಲಿ ನಿಗದಿಯಾಗಿದೆ.

ಗುರುವಾರ ಸಂಜೆ ಬಲ ಮೊಣಕೈ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನೀರಜ್‌, ಇದರಿಂದ ಸಂಪೂರ್ಣವಾಗಿ ಗುಣಮುಖರಾಗಲು ಕನಿಷ್ಠ ನಾಲ್ಕು ತಿಂಗಳು ಬೇಕಾಗಬಹುದು ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ಹರಿಯಾಣದ ಅಥ್ಲೀಟ್‌, ಡೈಮಂಡ್‌ ಲೀಗ್‌ ಸೇರಿದಂತೆ ಈ ಅವಧಿಯಲ್ಲಿ ನಡೆಯುವ ಇತರ ಚಾಂಪಿಯನ್‌ಷಿಪ್‌ಗಳಲ್ಲಿ ಭಾಗವಹಿಸುತ್ತಿಲ್ಲ.

‘ವೈದ್ಯರಾದ ದಿನ್ಶಾ ಪರ್ದಿವಾಲಾ ಅವರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಕನಿಷ್ಠ ನಾಲ್ಕು ತಿಂಗಳು ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಹೀಗಾಗಿ ಮುಂಬರುವ ಪ್ರಮುಖ ಚಾಂಪಿಯನ್‌ಷಿಪ್‌ಗಳಲ್ಲಿ ಭಾಗವಹಿಸಲು ಆಗುತ್ತಿಲ್ಲ. ಪರಿಪೂರ್ಣವಾಗಿ ಗುಣಮುಖನಾದ ನಂತರ ಮತ್ತೆ ಅಂಗಳಕ್ಕಿಳಿದು ಮಿಂಚುತ್ತೇನೆ. ಆ ವಿಶ್ವಾಸ ನನ್ನಲ್ಲಿ ಇದೆ’ ಎಂದು ನೀರಜ್‌ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಹೋದ ತಿಂಗಳು ಎನ್‌ಐಎಸ್‌ ಪಟಿಯಾಲದಲ್ಲಿ ಅಭ್ಯಾಸ ಮಾಡುವ ವೇಳೆ 21 ವರ್ಷದ ನೀರಜ್‌ ಅವರ ಬಲ ಮೊಣಕೈಯಲ್ಲಿ ನೋವು ಕಾಣಿಸಿಕೊಂಡಿತ್ತು. ಅದಕ್ಕೂ ಮುನ್ನ ಅವರು ದಕ್ಷಿಣ ಆಫ್ರಿಕಾದಲ್ಲಿ ಎರಡು ತಿಂಗಳ ಕಾಲ ವಿಶೇಷ ತರಬೇತಿ ಪಡೆದಿದ್ದರು. ಮೊಣಕೈ ನೋವಿನಿಂದಾಗಿ ನೀರಜ್‌ ಅವರು ಇತ್ತೀಚೆಗೆ ನಡೆದಿದ್ದ ಏಷ್ಯನ್‌ ಚಾಂಪಿಯನ್‌ಷಿಪ್‌ನಿಂದಲೂ ಹಿಂದೆ ಸರಿದಿದ್ದರು.

ನೀರಜ್‌ಗೆ ಪ್ರಾಯೋಜಕತ್ವ ನೀಡುತ್ತಿರುವ ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್‌ ಮತ್ತು ಭಾರತೀಯ ಅಥ್ಲೆಟಿಕ್ಸ್‌ ಫೆಡರೇಷನ್‌ (ಎಎಫ್‌ಐ) ವಿದೇಶದಲ್ಲಿ ಶಸ್ತ್ರಚಿಕಿತ್ಸೆಗೆ ಕರೆದುಕೊಂಡು ಹೋಗಲು ತೀರ್ಮಾನಿಸಿದ್ದವು. ಸ್ವತಃ ನೀರಜ್‌ ಈ ಪ್ರಸ್ತಾವವನ್ನು ತಿರಸ್ಕರಿಸಿದ್ದರು.

ಕೋಕಿಲಾಬೆನ್‌ ಧೀರೂಭಾಯ್‌ ಅಂಬಾನಿ ಆಸ್ಪತ್ರೆಯಲ್ಲೇ ಶಸ್ತ್ರಚಿಕಿತ್ಸೆಗೆ ಒಳಗಾಗಲು ಅವರು ತೀರ್ಮಾನಿಸಿದ್ದರು.

ಚೋಪ್ರಾ ಅವರು 2016ರಲ್ಲಿ ಪೋಲೆಂಡ್‌ನಲ್ಲಿ ನಡೆದಿದ್ದ ಐಎಎಎಫ್‌ ವಿಶ್ವ ಚಾಂಪಿಯನ್‌ಷಿಪ್‌ನ 20 ವರ್ಷದೊಳಗಿನವರ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು.

ನಂತರ ದಕ್ಷಿಣ ಏಷ್ಯನ್‌ ಕ್ರೀಡಾಕೂಟ, 2017ರ ಏಷ್ಯನ್‌ ಚಾಂ‍ಪಿಯನ್‌ಷಿಪ್‌ ಮತ್ತು ಹೋದ ವರ್ಷ ನಡೆದಿದ್ದ ಕಾಮನ್‌ವೆಲ್ತ್‌ ಮತ್ತು ಏಷ್ಯನ್‌ ಕ್ರೀಡಾಕೂಟಗಳಲ್ಲಿ ಪದಕಗಳ ಬೇಟೆಯಾಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !