ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಕಂಠೀರವ ಹೊರಾಂಗಣದಲ್ಲಿ ಓಡಿದ ಕ್ರೀಡಾಪಟುಗಳು

ಕೆಒಎ ಆಯೋಜಿಸಿದ್ದ ‘ಒಲಿಂಪಿಕ್‌ ಡೇ ರನ್‌’ ಕಾರ್ಯಕ್ರಮ
Last Updated 23 ಜೂನ್ 2020, 18:08 IST
ಅಕ್ಷರ ಗಾತ್ರ

ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ಬೆಳಿಗ್ಗೆ ಹಿರಿಯ ಮತ್ತು ಕಿರಿಯ ಅಥ್ಲೀಟ್‌ಗಳ ಕಲರವ ಶುರುವಾಗಿತ್ತು.

ಅಂತರರಾಷ್ಟ್ರೀಯ ಒಲಿಂಪಿಕ್‌ ದಿನದ ಅಂಗವಾಗಿ ಕರ್ನಾಟಕ ಒಲಿಂಪಿಕ್‌ ಸಂಸ್ಥೆ (ಕೆಒಎ) ಆಯೋಜಿಸಿದ್ದ ‘ಒಲಿಂಪಿಕ್‌ ಡೇ ರನ್‌’ ಕಾರ್ಯಕ್ರಮದಲ್ಲಿ ಒಲಿಂಪಿಯನ್‌ ಅಥ್ಲೀಟ್‌ ಕೆನೆತ್‌‌ ಪೋವೆಲ್‌, ಟೇಬಲ್‌ ಟೆನಿಸ್‌ ಆಟಗಾರ್ತಿ ಅರ್ಚನಾ ಕಾಮತ್‌ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಕ್ರೀಡಾ ಸಚಿವ ಸಿ.ಟಿ.ರವಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಅಥ್ಲೀಟ್‌ಗಳೆಲ್ಲಾ ಸಾಂಕೇತಿಕವಾಗಿ ಕಂಠೀರವ ಹೊರಾಂಗಣದ ಸುತ್ತ ಓಡಿದರು. ಸಚಿವರ ಜೊತೆಗೆ ಕೆಒಎ ಅಧ್ಯಕ್ಷ ಕೆ.ಗೋವಿಂದರಾಜ್‌ ಹಾಗೂ ಪ್ರಧಾನ ಕಾರ್ಯದರ್ಶಿ ಅನಂತರಾಜು ಅವರೂ ಅಥ್ಲೀಟ್‌ಗಳನ್ನು ಹಿಂಬಾಲಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಕ್ರೀಡಾಪಟುಗಳು ಮುಖಗವಸು ಧರಿಸಿದ್ದರು.

ಟ್ರ್ಯಾಕ್‌ ಪರಿಶೀಲಿಸಿದ ಸಚಿವರು

ಕಾರ್ಯಕ್ರಮದ ಬಳಿಕ ಸಚಿವ ಸಿ.ಟಿ.ರವಿ ಅವರು ಕಂಠೀರವ ಕ್ರೀಡಾಂಗಣದ ಟ್ರ್ಯಾಕ್‌ ಕಾಮಗಾರಿಯನ್ನು ಪರಿಶೀಲಿಸಿದರು.

ಹಳೆಯ ಸಿಂಥೆಟಿಕ್‌ ಹಾಸು ತೆಗೆಯುವ ಕಾರ್ಯ ಈಗಾಗಲೇ ಪೂರ್ಣಗೊಂಡಿದ್ದು, ಕೊರೊನಾ ಬಿಕ್ಕಟ್ಟಿನಿಂದಾಗಿ ಹೊಸ ಹಾಸು ಅಳವಡಿಸುವ ಕೆಲಸ ತಡವಾಗಿದೆ.

‘ಟ್ರ್ಯಾಕ್‌ಗೆ ಬೇಕಿರುವ ಕಚ್ಚಾವಸ್ತು ಜರ್ಮನಿಯಿಂದ ಬರಬೇಕಿದೆ. ಕೊರೊನಾ ಬಿಕ್ಕಟ್ಟಿನಿಂದಾಗಿ ಅದು ಇನ್ನೂ ತಲುಪಿಲ್ಲ. ಕೇಂದ್ರ ಸರ್ಕಾರದ ಸೂಚನೆಯಂತೆ ಗುತ್ತಿಗೆ ಅವಧಿಯನ್ನು ಮುಂದೂಡಲಾಗಿದೆ. ಕೊರೊನಾ ಅಟ್ಟಹಾಸ ಕಡಿಮೆಯಾದ ಬಳಿಕವಷ್ಟೇ ಕಾಮಗಾರಿ ಮುಂದುವರಿಸಲು ಹಾಗೂ ಮುಗಿಸಲು ಸಾಧ್ಯ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಂಟಿ ಆಯುಕ್ತ ರಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಕೊರೊನಾ ಸೋಂಕು ಶಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿಕಂಠೀರವ ಮತ್ತು ಕೋರಮಂಗಲ ಕ್ರೀಡಾಂಗಣಗಳಲ್ಲಿ ಕ್ವಾರಂಟೈನ್‌ ವ್ಯವಸ್ಥೆ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಆದೇಶವನ್ನೂ ಹೊರಡಿಸಿದೆ. ಆದರೆ ಇನ್ನೂ ವಶಕ್ಕೆ ತೆಗೆದುಕೊಂಡಿಲ್ಲ. ವಸತಿ ನಿಲಯದಲ್ಲಿ ಈಗಾಗಲೇ ಹಲವರನ್ನು ಕ್ವಾರಂಟೈನ್‌ ಮಾಡಲಾಗಿದ್ದು ಆ ಪ್ರಕ್ರಿಯೆ ಮುಂದುವರಿದಿದೆ’ ಎಂದು ಉಪನಿರ್ದೇಶಕ ಜಿತೇಂದ್ರ ಶೆಟ್ಟಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT