ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಾಥ್ಲಾನ್‌ನಲ್ಲಿ ಮಾರ್ಟಿ ಒಲ್ಸ್‌ಬುಗೆ ಚಿನ್ನ

ಚಳಿಗಾಲದ ಒಲಿಂಪಿಕ್ಸ್‌: ಎಲ್ವಿರಾ ಒಯ್‌ಬರ್ಗ್‌ಗೆ 48 ತಾಸಿನಲ್ಲಿ ಎರಡನೇ ಬೆಳ್ಳಿ ಪದಕ
Last Updated 13 ಫೆಬ್ರುವರಿ 2022, 11:11 IST
ಅಕ್ಷರ ಗಾತ್ರ

ಜಾಂಗ್ಜಿಯಾಕೊ, ಚೀನಾ: ಮತ್ತೊಮ್ಮೆ ಅಮೋಘ ಶೂಟಿಂಗ್ ಮೂಲಕ ಮಿಂಚಿದ ಮಾರ್ಟಿ ಒಲ್ಸ್‌ಬು ರೊಯಿಸ್‌ಲ್ಯಾಂಡ್ ಮೂರನೇ ಚಿನ್ನದ ಪದಕ ಗೆದ್ದು ಸಂಭ್ರಮಿಸಿದರು. ಈ ಮೂಲಕ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ನಾರ್ವೆಗೆ ಮತ್ತೊಂದು ಪದಕದ ಕಾಣಿಕೆ ನೀಡಿದರು.

ರಾಷ್ಟ್ರೀಯ ಬಯಾಥ್ಲಾನ್‌ ಕೇಂದ್ರದಲ್ಲಿ ಭಾನುವಾರ ನಡೆದ ಬಯಾಥ್ಲಾನ್‌ನ 10 ಕಿಮೀ ಪರ್ಸ್ಯೂಟ್‌ ರೇಸ್‌ನಲ್ಲಿ ಅವರು ಮೊದಲಿಗರಾದರು. ನಾರ್ವೆಯವರೇ ಆದ ತಿರಿಲ್ ಎಕೋಫ್‌ ಕಂಚಿನ ಪದಕ ಗೆದ್ದುಕೊಂಡರು. ಬೆಳ್ಳಿ ಪದಕ ಸ್ವೀಡನ್‌ನ ಯುವ ಅಥ್ಲೀಟ್‌ ಎಲ್ವಿರಾ ಒಯ್‌ಬರ್ಗ್‌ ಅವರ ಪಾಲಾಯಿತು. ಎಲ್ವಿರಾ ಅವರಿಗೆ 48 ತಾಸಿನಲ್ಲಿ ಲಭಿಸಿದ ಎರಡನೇ ಬೆಳ್ಳಿ ಪದಕ ಇದಾಗಿದೆ.

ಮಾನವ ನಿರ್ಮಿತ ಕೋರ್ಸ್‌ನ ಬಹುತೇಕ ಭಾಗದಲ್ಲಿ ದಟ್ಟ ಮಂಜು ಕವಿದಿತ್ತು. ಹೀಗಾಗಿ ಸ್ಪರ್ಧಾಳುಗಳು ಕಠಿಣ ಸವಾಲು ಎದುರಿಸಬೇಕಾಗಿತ್ತು. ಇದನ್ನು ಮೀರಿ ನಿಂತ ರೊಯಿಸ್‌ಲ್ಯಾಂಡ್ ಆರಂಭದಿಂದಲೇ ಉತ್ತಮ ಸಾಮರ್ಥ್ಯ ತೋರುತ್ತ ಬಂದರು. ಮೊದಲ ಐದು ಶಾಟ್‌ಗಳನ್ನು ಉತ್ತಮವಾಗಿಯೇ ನಿರ್ವಹಿಸಿದರು. ಒಯ್‌ಬರ್ಗ್‌ ಅವರು ಮಾಡಿದ ತಪ್ಪಿನಿಂದಾಗಿ ದೊರೊಥಿಯಾ ವೀರರ್‌ ಆರಂಭದಲ್ಲಿ ಕೊಂಚ ಮುನ್ನಡೆ ಸಾಧಿಸಿ ಭರವಸೆ ಮೂಡಿಸಿದರು. ನಂತರ ಒಯ್‌ಬರ್ಗ್ ಚೇತರಿಸಿಕೊಂಡರು.

ಎದುರಾಳಿಗಳು ಪರಸ್ಪರ ಪೈಪೋಟಿ ನಡೆಸುತ್ತಿರುವಾಗ ರೊಯಿಸ್‌ಲ್ಯಾಂಡ್ ಏಕಾಗ್ರತೆಯಿಂದ ಮುಂದೆ ಸಾಗಿದರು. ಹೀಗಾಗಿ ಅವರ ಹಾದಿ ಸುಗಮವಾಯಿತು.

ಸ್ಕೀಯಿಂಗ್‌ ‍ಪೂರ್ಣಗೊಳಿಸಿದ ಅಬ್ದಿ

ಯಾಂಗಿಂಗ್‌ನಲ್ಲಿ ನಡೆದ ಪುರುಷರ ಸ್ಕೀಯಿಂಗ್‌ನಲ್ಲಿ ಸೌದಿ ಅರೆಬಿಯಾದ ಫಯಿಕ್ ಅಬ್ದಿ ಮಿಂಚಿದರು. ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಸೌದಿ ಅರೆಬಿಯಾದ ಮೊದಲ ಕ್ರೀಡಾಪಟು ಆಗಿರುವ ಅವರು ಸ್ಪರ್ಧೆ ಪೂರ್ತಿಗೊಳಿಸಿದರು. ಒಟ್ಟಾರೆ 44ನೇ ಸ್ಥಾನ ಗಳಿಸಿದರು.

ಯುಎಇಯಿಂದ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ಏಕೈಕ ಕ್ರೀಡಾಪಟು ಅಬ್ದಿ. ರೇಸಿಂಗ್‌ ಅಭ್ಯಾಸ ಮಾಡಲು ಶುರು ಮಾಡಿ ಒಂದು ವರ್ಷ ಆಗಿದೆಯಷ್ಟೆ. 24 ವರ್ಷದ ಅವರ ಅಭ್ಯಾಸ ಲೆಬನಾನ್‌ನಲ್ಲಿ ನಡೆದಿತ್ತು.

ಮಂಜಿನ ಪರದೆ ನಿರ್ಮಾಣವಾಗಿದ್ದ ಹಾದಿಯಲ್ಲಿ ಹತ್ತಿರದ ವಸ್ತುಗಳು ಕೂಡ ಸರಿಯಾಗಿ ಗೋಚರಿಸುತ್ತಿರಲಿಲ್ಲ. ಜಯಂಟ್ ಸ್ಲಾಲೋಮ್‌ನ ಮೊದಲ ಲೆಗ್‌ನ್ಲಿ 54 ಮಂದಿಯ ಪೈಕಿ 51ನೇ ಸ್ಥಾನ ಗಳಿಸಿದ ಅಬ್ದಿ ಎರಡನೇ ಲೆಗ್‌ನಲ್ಲಿ ಸಾಮರ್ಥ್ಯ ಉತ್ತಮಪಡಿಸಿಕೊಂಡರು. ಸ್ವಿಟ್ಜರ್ಲೆಂಡ್‌ನ ಮಾರ್ಕೊ ಒಡೆರ್‌ಮ್ಯಾಟ್‌ ಚಿನ್ನ ಗೆದ್ದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT