ಶನಿವಾರ, ಜೂನ್ 6, 2020
27 °C

ಆನ್‌ಲೈನ್‌ ಚೆಸ್‌: ₹15 ಲಕ್ಷ ದೇಣಿಗೆ ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಸರ್ಕಾರ, ದಿ ಯುನೈಟೆಡ್‌ ಕರ್ನಾಟಕ ಚೆಸ್‌ ಸಂಸ್ಥೆ ಹಾಗೂ ಮೊಬೈಲ್‌ ಪ್ರೀಮಿಯರ್‌ ಲೀಗ್‌ (ಎಂಪಿಎಲ್‌) ಸಹಯೋಗದಲ್ಲಿ ಆಯೋಜಿಸಿದ್ದ ‘ಚೆಕ್‌ಮೇಟ್‌ ಕೋವಿಡ್‌’ ಆನ್‌ಲೈನ್‌ ಚೆಸ್‌ ಟೂರ್ನಿಯ ಮೂಲಕ ₹15 ಲಕ್ಷ ದೇಣಿಗೆ ಸಂಗ್ರಹಿಸಲಾಗಿದೆ.

ಈ ಮೊತ್ತವನ್ನು ಮುಖ್ಯಮಂತ್ರಿಗಳ ಕೋವಿಡ್‌–19 ಪರಿಹಾರ ನಿಧಿಗೆ ನೀಡಲಾಗಿದೆ.

‘ಇದೇ ತಿಂಗಳ 2 ಹಾಗೂ 3ರಂದು ನಡೆದಿದ್ದ ₹10 ಲಕ್ಷ ಬಹುಮಾನ ಮೊತ್ತದ ಈ ಟೂರ್ನಿಗೆ ಒಟ್ಟು 19,245 ಮಂದಿ ಹೆಸರು ನೋಂದಾಯಿಸಿದ್ದರು. ಗ್ರ್ಯಾಂಡ್‌ ಮಾಸ್ಟರ್‌ ಅಂಕಿತ್‌ ರಾಜಪರಾ ಚಾಂಪಿಯನ್‌ ಆದರು. ಮಹಿಳಾ ವಿಭಾಗದಲ್ಲಿ ಗ್ರ್ಯಾಂಡ್‌ ಮಾಸ್ಟರ್‌ ಭಕ್ತಿ ಕುಲಕರ್ಣಿ ಹಾಗೂ 60 ವರ್ಷ ಮೇಲ್ಪಟ್ಟ ಮಹಿಳಾ ವಿಭಾಗದಲ್ಲಿ ಶಕುಂತಲಾ ದೇವಿ ಅವರು ಉತ್ತಮ ಆಟಗಾರ್ತಿ ಗೌರವ ಗಳಿಸಿದರು’ ಎಂದು ಗುರುವಾರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸ್ಪೀಡ್‌ ಚೆಸ್‌ ಮಾದರಿಯಲ್ಲಿ ನಡೆದ ಟೂರ್ನಿಯಲ್ಲಿ ಪಂದ್ಯವೊಂದಕ್ಕೆ ಮೂರು ನಿಮಿಷ ನಿಗದಿ ಮಾಡಲಾಗಿತ್ತು. ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ಸ್ಪರ್ಧಿಗಳನ್ನು ವಿಜೇತರೆಂದು ಘೋಷಿಸಲಾಯಿತು.

‘ಚೆಕ್‌ಮೇಟ್‌ ಕೋವಿಡ್‌ ಚೆಸ್‌ ಟೂರ್ನಿಯಲ್ಲಿ ಪಾಲ್ಗೊಂಡ ಎಲ್ಲಾ ಸ್ಪರ್ಧಿಗಳಿಗೂ ನಾನು ಆಭಾರಿಯಾಗಿದ್ದೇನೆ. ದೊಡ್ಡ ಮೊತ್ತದ ದೇಣಿಗೆ ಸಂಗ್ರಹಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದೇವೆ. ಮುಂದೆಯೂ ನಾವೆಲ್ಲಾ ಒಗ್ಗೂಡಿ ಕೊರೊನಾ ಪಿಡುಗಿನ ವಿರುದ್ಧ ಹೋರಾಡೋಣ’ ಎಂದು ಕ್ರೀಡಾ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು