ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನಾ, ಶ್ರೀಕಾಂತ್‌ಗೆ ಒಲಿಂಪಿಕ್‌ ಅರ್ಹತೆಯ ಕನಸು

ಇಂದಿನಿಂದ ಬಾರ್ಸಿಲೋನಾ ಸ್ಪೇನ್‌ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿ
Last Updated 17 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಬಾರ್ಸಿಲೋನಾ: ಭಾರತದ ಸೈನಾ ನೆಹ್ವಾಲ್‌ ಮತ್ತು ಕಿದಂಬಿ ಶ್ರೀಕಾಂತ್‌ ಅವರು ಮಂಗಳವಾರದಿಂದ ಆರಂಭವಾಗುವ ಬಾರ್ಸಿಲೋನಾ ಸ್ಪೇನ್‌ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು ಟೋಕಿಯೊ ಒಲಿಂಪಿಕ್ಸ್‌ ಅರ್ಹತೆ ಆಸೆಯನ್ನು ಜೀವಂತವಾಗಿಟ್ಟುಕೊಳ್ಳುವ ಆಲೋಚನೆಯಲ್ಲಿದ್ದಾರೆ.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಸೈನಾ ಹಾಗೂ ಶ್ರೀಕಾಂತ್‌ ಕ್ರಮವಾಗಿ 18 ಮತ್ತು 15ನೇ ಸ್ಥಾನಗಳಲ್ಲಿದ್ದಾರೆ. ಏಪ್ರಿಲ್‌ ಅಂತ್ಯದಲ್ಲಿ ಪ್ರಕಟವಾಗುವ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ 16ರೊಳಗೆ ಸ್ಥಾನ ಹೊಂದಿರುವ ಇಬ್ಬರಿಗೆ (ಪುರುಷರ ಮತ್ತು ಮಹಿಳಾ ಸಿಂಗಲ್ಸ್‌ನಲ್ಲಿ ತಲಾ ಒಬ್ಬರು) ಟೋಕಿಯೊ ಟಿಕೆಟ್‌ ಸಿಗಲಿದೆ.

ಹೀಗಾಗಿ ಸೈನಾ ಮತ್ತು ಶ್ರೀಕಾಂತ್‌ ಅವರು ಬಾರ್ಸಿಲೋನಾ ಮಾಸ್ಟರ್ಸ್‌ ಸೇರಿದಂತೆ ಮುಂದಿನ ಏಳು ಟೂರ್ನಿಗಳಲ್ಲಿ ಶ್ರೇಷ್ಠ ಆಟ ಆಡಿ ರ‍್ಯಾಂಕಿಂಗ್‌ ಉತ್ತಮಪಡಿಸಿಕೊಳ್ಳಬೇಕಿದೆ.

ಸಿಂಗಲ್ಸ್‌ ವಿಭಾಗದ ಸ್ಪರ್ಧಿಗಳಾದ ಪಿ.ವಿ.ಸಿಂಧು ಮತ್ತು ಬಿ.ಸಾಯಿ ಪ್ರಣೀತ್‌, ಡಬಲ್ಸ್‌ ಆಟಗಾರರಾದ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರು ಒಲಿಂಪಿಕ್‌ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದ್ದಾರೆ.

ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಸೈನಾ, ಸತತ ವೈಫಲ್ಯದಿಂದ ಕಂಗೆಟ್ಟಿದ್ದಾರೆ. ಈ ವರ್ಷ ಆಡಿರುವ ಮೂರು ಟೂರ್ನಿಗಳ ಪೈಕಿ ಎರಡರಲ್ಲಿ ಮೊದಲ ಸುತ್ತಿನಲ್ಲೇ ಸೋತಿದ್ದಾರೆ. ಶ್ರೀಕಾಂತ್‌ ಅವರು ಆಡಿರುವ ಮೂರು ಟೂರ್ನಿಗಳಲ್ಲೂ ಮೊದಲ ಸುತ್ತಿನಲ್ಲೇ ಮುಗ್ಗರಿಸಿದ್ದಾರೆ.

ಆರಂಭಿಕ ಸುತ್ತಿನಲ್ಲಿ ಸೈನಾಗೆ ಜರ್ಮನಿಯ ಯವೊನ್ನೆ ಲೀ ಸವಾಲು ಎದುರಾಗಲಿದೆ. ಮೂರನೇ ಶ್ರೇಯಾಂಕದ ಆಟಗಾರ ಶ್ರೀಕಾಂತ್‌, ಭಾರತದ ಮತ್ತೊಬ್ಬ ಆಟಗಾರ ಶುಭಾಂಕರ್‌ ಡೇ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 25ನೇ ಸ್ಥಾನದಲ್ಲಿರುವ ಪರುಪಳ್ಳಿ ಕಶ್ಯಪ್‌, ಮೊದಲ ಸುತ್ತಿನಲ್ಲಿ ಬ್ರೆಜಿಲ್‌ನ ಯಗೊರ್‌ ಕೊಯೆಲೊ ವಿರುದ್ಧ ಸೆಣಸಲಿದ್ದಾರೆ.

ಎಚ್‌.ಎಸ್‌.ಪ್ರಣಯ್‌, ಮಲೇಷ್ಯಾದ ಡರೆನ್‌ ಲೀವ್‌ ಎದುರೂ; ಸೌರಭ್‌ ವರ್ಮಾ, ಇಸ್ರೇಲ್‌ನ ಮಿಶಾ ಜಿಲ್‌ಬರ್ಮನ್‌ ವಿರುದ್ಧವೂ; ಸಮೀರ್‌ ವರ್ಮಾ, ಭಾರತದವರೇ ಆದ ಬಿ.ಸಾಯಿ ಪ್ರಣೀತ್‌ ವಿರುದ್ಧವೂ ಆಡಲಿದ್ದಾರೆ.

ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ ಅವರು ಭಾರತದ ಸವಾಲು ಎತ್ತಿ ಹಿಡಿಯಲಿದ್ದಾರೆ. ಅಶ್ವಿನಿ ಮತ್ತು ಸಿಕ್ಕಿ ಜೋಡಿ ಮೊದಲ ಸುತ್ತಿನಲ್ಲಿ ಚೀನಾದ ಚೆನ್‌ ಲು ಮತ್ತು ಕ್ಸು ಯಾ ವಿರುದ್ಧ ಪೈಪೋಟಿ ನಡೆಸಲಿದೆ.

ಪುರುಷರ ಡಬಲ್ಸ್‌ನ ಮೊದಲ ಸುತ್ತಿನಲ್ಲಿ ಪ್ರಣವ್‌ ಜೆರಿ ಚೋಪ್ರಾ ಮತ್ತು ಕೃಷ್ಣಪ್ರಸಾದ್‌ ಗರಗ್‌ ಅವರು ಇಂಗ್ಲೆಂಡ್‌ನ ಬೆನ್‌ ಲೇನ್‌ ಮತ್ತು ಸೀನ್‌ ವೆಂಡಿ ಎದುರು ಹೋರಾಡಲಿದ್ದಾರೆ.

ಮಿಶ್ರ ಡಬಲ್ಸ್‌ನಲ್ಲಿ ಕಣಕ್ಕಿಳಿಯುತ್ತಿರುವ ಪ್ರಣವ್‌ ಜೆರಿ ಮತ್ತು ಸಿಕ್ಕಿ ಅವರಿಗೆ ಮಥಿಯಾಸ್‌ ಕ್ರಿಸ್ಟಿಯನ್‌ಸನ್‌ ಮತ್ತು ಅಲೆಕ್ಸಾಂಡ್ರಾ ಬೊಜೆ ಅವರ ಸವಾಲು ಎದುರಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT