ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ: ಬೆಂಗಳೂರಿಗೆ ನಿರಾಸೆ; ಪ್ರಶಸ್ತಿಗೆ ಪಟ್ನಾ-ಡೆಲ್ಲಿ ಹಣಾಹಣಿ

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ನಿರಾಸೆ; ಯೋಧಾದ ಪ್ರದೀಪ್ ನರ್ವಾಲ್ ವೈಫಲ್ಯ
Last Updated 23 ಫೆಬ್ರುವರಿ 2022, 20:09 IST
ಅಕ್ಷರ ಗಾತ್ರ

ಬೆಂಗಳೂರು: ಪಟ್ನಾ ಪೈರೇಟ್ಸ್ ಮತ್ತು ದಬಂಗ್ ಡೆಲ್ಲಿ ತಂಡಗಳು ಪ್ರೊ ಕಬಡ್ಡಿ ಲೀಗ್‍ನ ಪ್ರಶಸ್ತಿಗಾಗಿ ಶುಕ್ರವಾರ ಸೆಣಸಲಿವೆ.

ವೈಟ್‍ಫೀಲ್ಡ್‌ ನಲ್ಲಿರುವಶೆರಟನ್ ಗ್ರ್ಯಾಂಡ್ ಹೋಟೆಲ್ ಆವರಣದಲ್ಲಿ ನಡೆಯುತ್ತಿರುವ ಲೀಗ್‍ನ ಮೊದಲ ಸೆಮಿಫೈನಲ್‍ನಲ್ಲಿ ಪಟ್ನಾ ಪೈರೇಟ್ಸ್ 38-27ರಲ್ಲಿ ಯು.ಪಿ ಯೋಧಾವನ್ನು ಮಣಿಸಿತು. ಮತ್ತೊಂದು ಪಂದ್ಯದಲ್ಲಿ ದಬಂಗ್ ಡೆಲ್ಲಿ 40–35ರಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಮಣಿಸಿತು.

ಪಟ್ನಾ ಮತ್ತು ಯೋಧಾ ಪಂದ್ಯ ಏಕಪಕ್ಷೀಯವಾಗಿದ್ದರೆ ಬುಲ್ಸ್ ಮತ್ತು ಡೆಲ್ಲಿ ತಂಡಗಳು ರೋಚಕ ಹೋರಾಟ ಪ್ರದರ್ಶಿಸಿದವು. ಬುಲ್ಸ್‌ನ ಹೈ ಫ್ಲೈಯರ್ ಪವನ್ ಶೆರಾವತ್ ಆರಂಭದಿಂದಲೇ ಅಮೋಘ ರೇಡಿಂಗ್ ಮೂಲಕ ಮಿಂಚಿದರು. ಮೊದಲ 10 ನಿಮಿಷಗಳಲ್ಲೇ ಅವರು ತಮ್ಮ 'ಸೂಪರ್ ಟೆನ್" ಪೂರೈಸಿದರು. ನವೀನ್ 'ಎಕ್ಸ್‍ಪ್ರೆಸ್'ಗೆ ತಡೆ ಹಾಕಲು ಮಹೇಂದರ್ ಸಿಂಗ್ ಮತ್ತು ಅಮನ್ ಅವರಿಗೆ ಪ್ರಯಾಸವಾಗಲಿಲ್ಲ.

ಆದರೆ ದ್ವಿತೀಯಾರ್ಧದಲ್ಲಿ ಡೆಲ್ಲಿ ಆಧಿಪತ್ಯ ಸಾಧಿಸಿತು. ಮೊದಲಾರ್ಧದಲ್ಲಿ 17-16ರ ಮುನ್ನಡೆ ಗಳಿಸಿದ ಬುಲ್ಸ್ ದ್ವಿತೀಯಾರ್ಧದ ಆರಂಭದಲ್ಲಿ ಪಾಯಿಂಟ್ ಗಳಿಸಲು ಪರದಾಡಿತು. 25ನೇ ನಿಮಿಷದಲ್ಲಿ ನವೀನ್ ಕುಮಾರ್ ಅವರನ್ನು ಸೂಪರ್ ಟ್ಯಾಕಲ್ ಮಾಡಿ ತಂಡ ಚೇತರಿಸಿಕೊಂಡಿತು. ಆದರೆ 26ನೇ ನಿಮಿಷದಲ್ಲಿ ಟ್ಯಾಕ್ಲಿಂಗ್‍ನಲ್ಲಿ ಮಾಡಿದ ಪ್ರಮಾದದಿಂದಾಗಿ ತಂಡ ಪೆಟ್ಟು ತಿಂದಿತು. 28ನೇ ನಿಮಿಷದಲ್ಲಿ ಎರಡನೇ ಬಾರಿ ಆಲೌಟಾಯಿತು. ಕೊನೆಯ ಐದು ನಿಮಿಷ ಉಳಿದಿರುವಾಗ ನವೀನ್ ಕುಮಾರ್ 'ಸೂಪರ್ ಟೆನ್' ಪೂರ್ಣಗೊಳಿಸಿದರು. ಅಷ್ಟರಲ್ಲಿ ತಂಡದ ಜಯ ಖಾತರಿಯಾಗಿತ್ತು. ನಂತರ ಬುಲ್ಸ್ ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾದವು.

ಯೋಧಾ ಕನಸು ನುಚ್ಚುನೂರು

ಯು.ಪಿ ಯೋಧಾದ ಕನಸನ್ನು ನುಚ್ಚುನೂರು ಮಾಡಿದ ಪಟ್ನಾ ಪೈರೇಟ್ಸ್ ರಕ್ಷಣಾ ವಿಭಾಗದ ಆಟಗಾರರು ತಂಡಕ್ಕೆ ಗೆಲುವು ತಂದುಕೊಟ್ಟರು. ಸ್ಪಷ್ಟ ರಣತಂತ್ರದೊಂದಿಗೆ ಕಣಕ್ಕೆ ಇಳಿದ ಮೂರು ಬಾರಿಯ ಚಾಂಪಿಯನ್ ಪಟ್ನಾ ಆಟಗಾರರು ಅಲ್‍ರೌಂಡ್ ಆಟದ ಮೂಲಕ ಕಬಡ್ಡಿ ಪ್ರೇಕ್ಷಕರನ್ನು ಮುದಗೊಳಿಸಿದರು.

ಸಚಿನ್ (7 ಪಾಯಿಂಟ್) ಆರಂಭದಲ್ಲಿ ತಂದುಕೊಟ್ಟ ರೇಡಿಂಗ್ ಪಾಯಿಂಟ್‍ಗಳಿಗೆ ಗುಮಾನ್ ಸಿಂಗ್ (8 ಪಾಯಿಂಟ್) ಬಲ ತುಂಬಿದರು. ಸುನಿಲ್ (5 ಪಾಯಿಂಟ್), ನೀರಜ್ ಮತ್ತು ಮೊಹಮ್ಮದ್ರೇಜಾ ಅವರು 'ದಾಖಲೆ ವೀರ' ಪ್ರದೀಪ್ ನರ್ವಾಲ್ ಅವರನ್ನು ಸತತವಾಗಿ ಬಲೆಯಲ್ಲಿ ಬೀಳಿಸಿದರು.

ಮೊದಲಾರ್ಧದಲ್ಲಿ ಪಟ್ನಾ ಪೈರೇಟ್ಸ್ 22-9ರಲ್ಲಿ ಮುನ್ನಡೆ ಸಾಧಿಸಿತು. ಪಂದ್ಯದ ಮೊದಲ ಪಾಯಿಂಟ್ ಗಳಿಸಲು ಯು.ಪಿ ಯೋಧಾಗೆ ನಾಲ್ಕು ನಿಮಿಷಗಳು ಬೇಕಾದವು. ಆಲ್‍ಔಟ್ ಆಗುವ ಆತಂಕದಲ್ಲಿದ್ದಾಗ ಸೂಪರ್ ಟ್ಯಾಕಲ್ ಮೂಲಕ ಸಚಿನ್ ಅವರನ್ನು ಕಟ್ಟಿಹಾಕಿ ತಂಡ ಖಾತೆ ತೆರೆಯಿತು.

ಎಂಟನೇ ನಿಮಿಷದಲ್ಲಿ ಸುರೇಂದರ್ ಗಿಲ್ ಅವರನ್ನು ಬಲೆಯಲ್ಲಿ ಬೀಳಿಸಿ ಪಟ್ನಾ ಆಲ್‍ಔಟ್ ಪಾಯಿಂಟ್ ಗಳಿಸಿತು. 16ನೇ ನಿಮಿಷದಲ್ಲಿ ಯು.ಪಿ ಯೋಧಾ ಮತ್ತೊಮ್ಮೆ ಆಲೌಟ್ ಆದಾಗ 6-16ರ ಹಿನ್ನಡೆಯಲ್ಲಿತ್ತು. ಮೊದಲಾರ್ಧ ಮುಕ್ತಾಯಗೊಳ್ಳಲು ಎರಡು ನಿಮಿಷ ಉಳಿಸಿರುವಾಗ ಪ್ರದೀಪ್ ನರ್ವಾಲ್ ಮೊದಲ ವೈಯಕ್ತಿಕ ಪಾಯಿಂಟ್ ಗಳಿಸಲು ಸಫಲರಾದರು.

ದ್ವಿತೀಯಾರ್ಧದಲ್ಲಿ ಯು.ಪಿ ಯೋಧಾ ಸ್ವಲ್ಪ ಚೇತರಿಕೆಯ ಆಟವಾಡಿತು. 27ನೇ ನಿಮಿಷದಲ್ಲಿ ಮತ್ತೊಮ್ಮೆ ಆಲೌಟಾದರೂ ನಂತರ ಕೆಲವು ಪಾಯಿಂಟ್‍ಗಳನ್ನು ಕಲೆ ಹಾಕಲು ತಂಡಕ್ಕೆ ಸಾಧ್ಯವಾಯಿತು. ಆದರೆ ಪ್ರದೀಪ್ ನರ್ವಾಲ್ ವೈಫಲ್ಯ ಮುಂದುವರಿಯಿತು. ಟ್ಯಾಕ್ಲಿಂಗ್‍ನಲ್ಲಿ ನಿರಂತರ ಪಾಯಿಂಟ್‍ಗಳನ್ನು ಗಳಿಸಿದ ಇರಾನ್ ಆಟಗಾರ ಮೊಹಮ್ಮದ್ರೇಜಾ ಈ ಆವೃತ್ತಿಯಲ್ಲಿ 10ನೇ ಹೈ ಫೈವ್ ಸಾಧನೆಯೊಂದಿಗೆ ದಾಖಲೆ ಬರೆದರು. ಪ್ರೊ ಕಬಡ್ಡಿಯಲ್ಲಿ ಈ ವರೆಗೆ ಯಾವ ಡಿಫೆಂಡರ್ ಕೂಡ ಒಂದೇ ಆವೃತ್ತಿಯಲ್ಲಿ 10 ಬಾರಿ ಐದು ಪಾಯಿಂಟ್ ಗಳಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT