ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಲ್ಸ್‌ ಬೆನ್ನೆಲುಬು ಪವನ್‌ ಶೆರಾವತ್‌ ಸಂದರ್ಶನ

Last Updated 18 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಪ್ರೊ ಕಬಡ್ಡಿ ಲೀಗ್‌ನಲ್ಲಿ ಕಳೆದ ಎರಡು ವರ್ಷಗಳಿಂದ ಅಮೋಘ ರೈಡಿಂಗ್‌ಗಳ ಮೂಲಕ ಸದ್ದು ಮಾಡುತ್ತಿರುವ ಆಟಗಾರ ಬೆಂಗಳೂರು ಬುಲ್ಸ್‌ನ ಪವನ್‌ ಕುಮಾರ್‌ ಶೆರಾವತ್‌. ಕಳೆದ ಜನವರಿ ಆರಂಭದಲ್ಲಿ ನಡೆದ ಸೀಸನ್‌ ಆರರ ಫೈನಲ್‌ ಒಮ್ಮೆ ನೆನಪಿಸಿಕೊಳ್ಳಿ....

ರೋಚಕವಾಗುತ್ತಿದ್ದ ಫೈನಲ್‌ನಲ್ಲಿ ಸ್ಕೋರ್‌ 29–29ರಲ್ಲಿ ಸಮನಾದ ಮೇಲೆ ಐದು ಯಶಸ್ವಿ ರೈಡ್‌ಗಳೊಂದಿಗೆ ಬುಲ್ಸ್‌ ತಂಡವನ್ನು ಮೊದಲ ಪ್ರಶಸ್ತಿಯ ಹಾದಿಯಲ್ಲಿ ಯಶಸ್ವಿಯಾಗಿ ಮುನ್ನಡೆಸಿದವ ದೆಹಲಿಯ ಈ ಯುವಕ. 25 ರೈಡ್‌ಗಳ ಪೈಕಿ 22ರಲ್ಲಿ ಪಾಯಿಂಟ್ಸ್‌ ತಂದುಕೊಟ್ಟ ಶ್ರೇಯಸ್ಸು ಈತನದು. ಅದುವರೆಗಿನ ಫೈನಲ್‌ಗಳಲ್ಲೇ ರೈಡರ್‌ ಒಬ್ಬರ ಸರ್ವಶ್ರೇಷ್ಠ ಪ್ರದರ್ಶನ ಅದು.

ಈ ಬಾರಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಬುಧವಾರದ ವರೆಗೆ ನಡೆದ ಏಳು ಪಂದ್ಯಗಳಲ್ಲಿ ಅವರ ಗಳಿಕೆ 96 ಪಾಯಿಂಟ್ಸ್‌. ಟೂರ್ನಿಯ ರೈಡರ್‌ಗಳಲ್ಲೇ ಈತ ಅಗ್ರಗಣ್ಯ! ಎರಡು ಪಂದ್ಯಗಳಲ್ಲಿ ಬುಲ್ಸ್‌ ಸೋತಾಗ ಪವನ್‌ ಯಶಸ್ಸು ಕಂಡಿರಲಿಲ್ಲ. ಇದು ಪವನ್‌ನನ್ನು ಬುಲ್ಸ್ ಎಷ್ಟೊಂದು ನಂಬಿಕೊಂಡಿದೆ ಎನ್ನುವುದಕ್ಕೆ ಉದಾಹರಣೆ.

ನಾಯಕ ರೋಹಿತ್‌ ಕುಮಾರ್‌ ಕೆಲವು ಪಂದ್ಯಗಳಲ್ಲಿ ವಿಫಲರಾದರೂ ಅದು ಎದ್ದುಕಾಣದಂತೆ ಮರೆಮಾಚಿರುವುದು ಪವನ್‌ ರೈಡಿಂಗ್ ಕೌಶಲ.

‘ಪ್ರಜಾವಾಣಿ’ ಜೊತೆ ಮಾತುಕತೆಯಲ್ಲಿ 23 ವರ್ಷದ ಪವನ್ ಕುಮಾರ್ ಶೆರಾವತ್‌ ಈ ಮಾತನ್ನು ಒಪ್ಪಲಿಲ್ಲ. ಸಂದರ್ಶನದ ಸಂಕ್ಷಿಪ್ತ ವಿವರವನ್ನು ಇಲ್ಲಿ ನೀಡಲಾಗಿದೆ.

ಬುಲ್ಸ್‌ ನಿಮ್ಮನ್ನು ಹೆಚ್ಚು ಅವಲಂಬಿಸಿರುವುದರಿಂದ ಒತ್ತಡದ ಅನುಭವ ಆಗುತ್ತಿದೆಯೇ?

ಒತ್ತಡದ ಪರಿಣಾಮ ನನ್ನ ಮೇಲಾಗದಂತೆ ನೋಡಿಕೊಳ್ಳುತ್ತೇನೆ. ನಾನು ಒತ್ತಡದಕ್ಕೆ ಒಳಗಾದರೆ ಅದರ ‍ಪರಿಣಾಮ ತಂಡದ ಮೇಲಾಗುತ್ತದೆ. ತಂಡ, ಕೋಚ್‌, ತಂಡದ ಆಡಳಿತ ಎಲ್ಲರೂ ನನ್ನ ಮೇಲೆ ವಿಶ್ವಾಸವಿಟ್ಟುಕೊಂಡಿದ್ದಾರೆ. ನಾನು ಸದಾ ಉತ್ತಮ ಪ್ರದರ್ಶನಕ್ಕೆ ಪ್ರಯತ್ನ ಪಡುತ್ತೇನೆ. ನನ್ನಿಂದ ಸಾಮರ್ಥ್ಯಕ್ಕಿಂತ ಕಡಿಮೆ ಪ್ರದರ್ಶನ ಬಂದಿದ್ದಿದೆ. ಇದರಿಂದ ನಿರಾಶನಾಗಿದ್ದೂ ಇದೆ. ಆದರೆ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಕಠಿಣ ತಾಲೀಮು ನಡೆಸಿ ಉತ್ತಮ ಪ್ರದರ್ಶನಕ್ಕೆ ಪ್ರಯತ್ನಿಸುತ್ತೇನೆ. ನನ್ನಿಂದ ಉತ್ತಮ ಸಾಧನೆ ಬಂದಾಗ ನನ್ನ ವಿಶ್ವಾಸ ಹೆಚ್ಚುತ್ತದೆ. ಅಂಥ ಆಟ ಮುಂದುವರಿಸಲು ಪ್ರೇರಣೆ ನೀಡುತ್ತದೆ.

ಬೆಂಗಾಲ್‌ ವಾರಿಯರ್ಸ್‌ ವಿರುದ್ಧ ಇತ್ತೀಚೆಗೆ ನಡೆದ ಪಂದ್ಯದಲ್ಲಿ ಏಕಾಂಗಿಯಾಗಿ 29 ಅಂಕ ಗಳಿಸಿದ್ದು ಅಮೋಘ ಸಾಧನೆ. ಏನನಿಸಿತು?

ಪ್ರತಿ ಪಂದ್ಯದ ಪರಿಸ್ಥಿತಿ ಬೇರೆ ಬೇರೆ ಇರುತ್ತದೆ. ತಂಡ ಎದುರಾಳಿ ವಿರುದ್ಧ ಭಿನ್ನವಾಗಿ ಯೋಚಿಸಿ ಆಡಬೇಕಾಗುತ್ತದೆ. ವಾರಿಯರ್ಸ್‌ ವಿರುದ್ಧ ರೋಹಿತ್‌ ಮತ್ತು ನಾನು ಯಶಸ್ಸು ಗಳಿಸುವುದು ಬಹುಮುಖ್ಯವಾಗಿತ್ತು. ನಾವು ಅಂಕಗಳನ್ನು ಗಳಿಸದೇ ಹೋಗುತ್ತಿದ್ದರೆ ಸೋಲುವ ಸಾಧ್ಯತೆಯಿತ್ತೇನೊ? ಪ್ರತಿ ಬಾರಿ ಎದುರಾಳಿಯ ಅಂಕಣಕ್ಕೆ ಹೋದಾಗ ಪಾಯಿಂಟ್‌ ಗಳಿಸಿ ಸುರಕ್ಷಿತವಾಗಿ ಮರಳುವುದೊಂದೇ ನಮ್ಮ ತಲೆಯಲ್ಲಿತ್ತು.

ನಿಮ್ಮ ರೈಡಿಂಗ್‌ ಯಶಸ್ಸಿನ ಗುಟ್ಟೇನು?

ನಿತ್ಯ ಅಭ್ಯಾಸ ಮತ್ತು ವರ್ಷವಿಡೀ ಫಿಟ್‌ನೆಸ್‌ ಉಳಿಸಿಕೊಳ್ಳುವುದು ನನ್ನ ಯಶಸ್ಸಿನ ಹಿನ್ನೆಲೆ. ಬೆಳಿಗ್ಗೆ ಮೂರು, ಸಂಜೆ ಮೂರು ಗಂಟೆ ಅಭ್ಯಾಸ ನಡೆಸುವುದನ್ನು ತಪ್ಪಿಸುವುದಿಲ್ಲ. ಇದರಲ್ಲಿ ಒಂದು ಅವಧಿ ಬರೇ ಫಿಟ್‌ನೆಸ್‌ ಉದ್ದೇಶ ಹೊಂದಿರುತ್ತದೆ. ಕಳೆದ 2–3 ವರ್ಷಗಳಿಂದ ಮ್ಯಾಟ್‌ ಮೇಲೆ ಅಭ್ಯಾಸ ನಡೆಸದ ದಿನವೇ ಇಲ್ಲ.

ಪ್ರೊ ಕಬಡ್ಡಿ ಲೀಗ್‌ನಲ್ಲಿ ಉತ್ತಮ ಡಿಫೆನ್ಸ್‌ ಹೊಂದಿರುವ ತಂಡ ಯಾವುದು?

ಪ್ರತಿ ತಂಡ ಪ್ರಬಲ ರಕ್ಷಣೆ ಹೊಂದಿದೆ. ಈ ಸೀಸನ್‌ನಲ್ಲಿ ಹೆಚ್ಚಿನ ಪಂದ್ಯಗಳು ಡಿಫೆನ್ಸ್‌ ಅವಲಂಬನೆ ಮೇಲೆ ಸಾಗಿದವು. ಎಲ್ಲ ತಂಡಗಳೂ ಉತ್ತಮ ಪ್ರದರ್ಶನ ನೀಡುತ್ತಿವೆ.

ಕಬಡ್ಡಿಯಲ್ಲಿ ನೀವು ಬಹುವಾಗಿ ಮೆಚ್ಚಿಕೊಳ್ಳುವ ಆಟಗಾರ ಯಾರು?

ಹಲವು ಅನುಭವಿ ಆಟಗಾರರು ನನಗೆ ಸ್ಫೂರ್ತಿಯಾಗಿದ್ದಾರೆ. ಮಂಜಿತ್‌ ಚಿಲ್ಲಾರ್‌ ಚೆನ್ನಾಗಿ ಆಡುತ್ತಾರೆ ಮಾತ್ರವಲ್ಲ, ಪಂದ್ಯದುದ್ದಕ್ಕೂ ತಂಡಕ್ಕೆ ಮಾರ್ಗದರ್ಶನ ನೀಡುತ್ತಾರೆ. ಅಜಯ್‌ ಠಾಕೂರ್‌ ಕೂಡ ಶ್ರೇಷ್ಠ ಆಟಗಾರನಾಗಿದ್ದು, ತಂಡಕ್ಕೆ ಸಲಹೆಗಳನ್ನು ನೀಡುತ್ತಿರುತ್ತಾರೆ.

ಈಗಿನ ತಂಡದ ಸಂಯೋಜನೆ ಪರಿಣಾಮಕಾರಿಯಾಗಿದೆಯೇ?

ತಂಡದಲ್ಲಿ ಹೆಚ್ಚು ಬದಲಾವಣೆಯಾಗಿಲ್ಲ. ನಮ್ಮ ರಕ್ಷಣಾ ವಿಭಾಗ ಬಲಗೊಂಡಿದೆ. ವೈಯಕ್ತಿಕವಾಗಿ ಹೇಳುವುದಾದರೆ ನಾನು ಆಟದಲ್ಲಿ ಬೆಳೆದಿದ್ದು, ರಕ್ಷಣಾ ಕೌಶಲಗಳಿಗೆ ಒತ್ತು ನೀಡುತ್ತಿದ್ದೇನೆ. ‘ಪವರ್‌ ರೈಡರ್‌’ ಒಬ್ಬ ಒಳ್ಳೆಯ ರಕ್ಷಣೆ ಆಟಗಾರನಾಗಿರಬೇಕು ಎಂಬುದು ನನ್ನ ನಂಬಿಕೆ. ಈ ವರ್ಷ ಆ ಕಡೆ ಹೆಚ್ಚು ಒತ್ತು ನೀಡುತ್ತಿರುವುದು ಈಗಾಗಲೇ ಗಮನಕ್ಕೆ ಬಂದಿರಬಹುದು. (ಪವನ್‌ ಈ ಬಾರಿ ಟ್ಯಾಕ್ಲಿಂಗ್‌ನಲ್ಲೂ ಆರು ಪಾಯಿಂಟ್‌ ಗಳಿಸಿದ್ದಾರೆ).

ಬೆಂಗಳೂರು ಬುಲ್ಸ್‌ ಹಾಲಿ ಚಾಂಪಿಯನ್‌. ಇದು ಒತ್ತಡಕ್ಕೆ ಕಾರಣವಾಗುವುದೇ?

ನಾವು ಹಾಲಿ ಚಾಂಪಿಯನ್ನರೆಂಬ ಒತ್ತಡದ ಹಂತವನ್ನು ದಾಟಿದ್ದೇವೆ. ಇದು ಹೊಸ ಋತು. ಎಲ್ಲ ತಂಡಗಳೂ ಚಾಂಪಿಯನ್‌ ಆಗಲು ಶಕ್ತಿಮೀರಿ ಪ್ರಯತ್ನಿಸಲಿವೆ. ನಾವೂ ಚಾಂಪಿಯನ್ನರಾಗುವ ಗುರಿ ಹೊಂದಿದ್ದೇವೆ. ಪರಿಶ್ರಮ, ಮ್ಯಾಟ್‌ ಮೇಲೆ ದಿಟ್ಟ ಪ್ರದರ್ಶನ ಮತ್ತು ಫಲಿತಾಂಶಗಳಿಂದ ಅದನ್ನು ಸಾಧಿಸಬೇಕಾಗಿದೆ.

ಎರಡು ವರ್ಷಗಳಲ್ಲಿ ಪವನ್‌ ಸಾಧನೆ

ಋತು 6

ಆಡಿದ ಪಂದ್ಯ: 24

ಗಳಿಸಿದ ಪಾಯಿಂಟ್ಸ್‌: 282

ಒಂದೇ ಪಂದ್ಯದ ಅತ್ಯಧಿಕ ಗಳಿಕೆ 22: ಪಾಯಿಂಟ್ಸ್‌

ನಾಟೌಟ್‌ ಸಾಧನೆ: ಶೇ 77.42

***

ಋತು 7

ಆಡಿದ ಪಂದ್ಯಗಳು:7 (ಆ. 14ರವರೆಗೆ)

ಗಳಿಸಿದ ಪಾಯಿಂಟ್ಸ್‌ 96

ಒಂದೇ ಪಂದ್ಯದ ಅತ್ಯಧಿಕ ಗಳಿಕೆ: 29 ಪಾಯಿಂಟ್ಸ್‌

ನಾಟೌಟ್‌ ಸಾಧನೆ: ಶೇ 76.42

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT