ಮಂಗಳವಾರ, ಅಕ್ಟೋಬರ್ 15, 2019
26 °C
ಬೆಂಗಾಲ್‌ಗೆ ಅಗ್ರಸ್ಥಾನಕ್ಕೇರುವ ಆಸೆ

ಪ್ರೊ ಕಬಡ್ಡಿ ಲೀಗ್‌: ಯೋಧಾಗೆ ಸತತ ಮೂರನೇ ಜಯದ ಕನಸು

Published:
Updated:
prajavani

ಗ್ರೇಟರ್‌ ನೊಯ್ಡಾ: ತವರಿನಲ್ಲಿ ಸತತ ಮೂರನೇ ಜಯದ ಕನಸು ಕಾಣುತ್ತಿರುವ ಯುಪಿ ಯೋಧಾ ತಂಡ ಬುಧವಾರ ಶಹೀದ್‌ ವಿಜಯ್‌ ಪಾಟಿಕ್‌ ಕ್ರೀಡಾಂಗಣದಲ್ಲಿ  ನಡೆಯುವ ಪ್ರೊ ಕಬಡ್ಡಿ ಲೀಗ್ ಪಂದ್ಯ ತೆಲುಗು ಟೈಟನ್ಸ್ ಎದುರು ಆಡಲಿದೆ.

ಹೋದ ಐದು ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ ಸೋತಿರುವ ಯೋಧಾ ಇಲ್ಲಿ ಗೆದ್ದರೆ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರುವ ಅವಕಾಶ ಹೊಂದಿದೆ.

ತಾನಾಡಿದ ಕೊನೆಯ ಪಂದ್ಯದಲ್ಲಿ ಸೋಲು ಕಂಡಿರುವ ಟೈಟನ್ಸ್ ಇಲ್ಲಿ ಜಯದೊಂದಿಗೆ ಈ ಋತುವಿನ ಅಭಿಯಾನ ಮುಗಿಸುವ
ಹಂಬಲದಲ್ಲಿದೆ. ಎರಡೂ ತಂಡಗಳು 6 ಬಾರಿ ಮುಖಾಮುಖಿಯಾಗಿವೆ. ನಾಲ್ಕರಲ್ಲಿ ಯೋಧಾ ಗೆದ್ದರೆ, ಒಂದರಲ್ಲಿ ಟೈಟನ್ಸ್ ಜಯಗಳಿಸಿದ್ದು, ಉಳಿದೆರಡು ಪಂದ್ಯಗಳು ಟೈ ಆಗಿವೆ.

ಯೋಧಾ ಪರ ಶ್ರೀಕಾಂತ್‌ ಜಾಧವ್‌, ಮೋನು ಗೊಯತ್‌, ರಿಷಾಂಕ್‌ ದೇವಾಡಿಗ ರೇಡಿಂಗ್‌ನಲ್ಲಿ ಭರವಸೆಯಾಗಿದ್ದರೆ, ಡಿಫೆನ್ಸ್‌ನಲ್ಲಿ ನಾಯಕ ನಿತೇಶ್‌ ಕುಮಾರ್‌ ಹಾಗೂ ಸುಮಿತ್‌ ಮಿಂಚಬಲ್ಲರು.

ಟೈಟನ್ಸ್ ತಂಡ ಸಿದ್ಧಾರ್ಥ್‌ ‘ಬಾಹುಬಲಿ’ ದೇಸಾಯಿ ರೇಡಿಂಗ್‌ನಲ್ಲಿ ಹಾಗೂ ವಿಶಾಲ್‌ ಭಾರದ್ವಾಜ್‌ ಅವರ ಡಿಫೆನ್ಸ್‌ನಲ್ಲಿ ನಂಬಿಕೆ ಇರಿಸಿದೆ.

ಬೆಂಗಾಲ್‌ ವಾರಿಯರ್ಸ್–ತಮಿಳ್‌ ತಲೈವಾಸ್‌ ಹಣಾಹಣಿ: ದಿನದ ಮತ್ತೊಂದು ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ಸ್– ತಮಿಳ್‌ ತಲೈವಾಸ್‌ ಸೆಣಸಲಿವೆ. ಪಾಯಿಂಟ್ಸ್ ಪಟ್ಟಿಯಲ್ಲಿ ಸದ್ಯ 2ನೇ ಸ್ಥಾನದಲ್ಲಿರುವ ಬೆಂಗಾಲ್‌ ಇಲ್ಲಿ ಗೆದ್ದು ಅಗ್ರಸ್ಥಾನಕ್ಕೇರುವ ಆಸೆಯಲ್ಲಿದೆ. ಈ ಋತುವಿನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ತಮಿಳ್‌ ತಲೈವಾಸ್‌ ಲೀಗ್‌ನಲ್ಲಿ ತನ್ನ ಕೊನೆಯ ಪಂದ್ಯವಾಡಲಿದೆ. 

ಎರಡೂ ತಂಡಗಳು 7 ಬಾರಿ ಮುಖಾಮುಖಿಯಾಗಿವೆ. ಬೆಂಗಾಲ್‌ 6ರಲ್ಲಿ ಗೆದ್ದರೆ ಹಾಗೂ ತಲೈವಾಸ್‌ ಒಂದು ಪಂದ್ಯದಲ್ಲಿ ಮಾತ್ರ ಜಯ ಕಂಡಿದೆ. ಬೆಂಗಾಲ್‌ ತಂಡಕ್ಕೆ ನಾಯಕ ಮಣಿಂದರ್‌ ಸಿಂಗ್‌ ಅವರ ರೇಡಿಂಗ್‌ ಬಲವಿದೆ. ಬಲದೇವ್‌ ಸಿಂಗ್‌ ಡಿಫೆನ್ಸ್‌ ವಿಭಾಗದಲ್ಲಿ ಮಿಂಚುತ್ತಿದ್ದಾರೆ.

ಉತ್ತಮ ಆಟಗಾರರ ಪಡೆಯನ್ನೇ ಹೊಂದಿದ್ದರೂ ತಲೈವಾಸ್‌ ತಂಡ ಟೂರ್ನಿಯಾದ್ಯಂತ ಎಡವಿದೆ. ನಾಯಕ ರಾಹುಲ್‌ ಚೌಧರಿ ಹಾಗೂ ಮಂಜೀತ್‌ ಚಿಲ್ಲಾರ್‌ ಅವರನ್ನು ತಂಡ ನಂಬಿಕೊಂಡಿದೆ. 

ಇಂದಿನ ಪಂದ್ಯಗಳು

ಬೆಂಗಾಲ್‌ ವಾರಿಯರ್ಸ್–ತಮಿಳ್‌ ತಲೈವಾಸ್‌

ಆರಂಭ: ರಾತ್ರಿ 7.30

ಯುಪಿ ಯೋಧಾ– ತೆಲುಗು ಟೈಟನ್ಸ್  

ಆರಂಭ: ರಾತ್ರಿ 8.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

Post Comments (+)