ಭಾನುವಾರ, ಆಗಸ್ಟ್ 25, 2019
21 °C
ವಿಶ್ವದ ಅತೀ ಹೆಚ್ಚು ಸಂಭಾವನೆ ಪಡೆಯುವ ಮಹಿಳಾ ಅಥ್ಲೀಟ್‌ಗಳ ಪಟ್ಟಿ ಪ್ರಕಟಿಸಿದ ಫೋಬ್ಸ್‌

ಸಿಂಧು ಭಾರತದ ಶ್ರೀಮಂತ ಆಟಗಾರ್ತಿ

Published:
Updated:
Prajavani

ನ್ಯೂಯಾರ್ಕ್‌ (ಪಿಟಿಐ): ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು, ವಿಶ್ವದ ಅತೀ ಹೆಚ್ಚು ಸಂಭಾವನೆ ಪಡೆಯುವ ಮಹಿಳಾ ಅಥ್ಲೀಟ್‌ಗಳ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ.

ಫೋಬ್ಸ್‌ ನಿಯತಕಾಲಿಕೆಯು ಮಂಗಳವಾರ 2019ನೇ ಸಾಲಿನ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿರುವ ಭಾರತದ ಏಕೈಕ ಕ್ರೀಡಾಪಟು ಎಂಬ ಹಿರಿಮೆಗೆ ಹೈದರಾಬಾದ್‌ನ ಆಟಗಾರ್ತಿ ಭಾಜನರಾಗಿದ್ದಾರೆ.

ಹಿಂದಿನ 12 ತಿಂಗಳ ಅವಧಿಯಲ್ಲಿ (ಜೂನ್‌ 2018ರಿಂದ ಜೂನ್‌ 2019) ಬಹುಮಾನ ಮೊತ್ತ, ಬೋನಸ್‌, ವೇತನ ಮತ್ತು ಜಾಹೀರಾತು ಮೂಲಗಳಿಂದ ಆಟಗಾರ್ತಿಯರು ಗಳಿಸಿದ ಆದಾಯದ ಆಧಾರದಲ್ಲಿ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

24 ವರ್ಷ ವಯಸ್ಸಿನ ಸಿಂಧು, ಒಂದು ವರ್ಷದಲ್ಲಿ ಒಟ್ಟು ₹39.9 ಕೋಟಿ ಆದಾಯ ಗಳಿಸಿ ಪಟ್ಟಿಯಲ್ಲಿ ಜಂಟಿ 13ನೇ ಸ್ಥಾನ ಪಡೆದಿದ್ದಾರೆ. ಜಾಹೀರಾತು ಮೂಲಗಳಿಂದ ಅವರ ಖಾತೆಗೆ ₹35.5 ಕೋಟಿ ಸೇರ್ಪಡೆಯಾಗಿದೆ. ಅವರು ಗಳಿಸಿದ ಬಹುಮಾನ ಮೊತ್ತ ₹4.4 ಕೋಟಿ.

ಅತೀ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ಭಾರತದ ಮಹಿಳಾ ಅಥ್ಲೀಟ್‌ ಎಂಬ ಹಿರಿಮೆಯನ್ನೂ ಸಿಂಧು ಹೊಂದಿದ್ದಾರೆ. ಅವರು ಬ್ರಿಜ್‌ಸ್ಟೋನ್‌, ಜೆಬಿಎಲ್‌, ಗ್ಯಾಟೊರೇಡ್‌, ಪ್ಯಾನಸೋನಿಕ್‌ ಸೇರಿದಂತೆ ಇತರ ಪ್ರಮುಖ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿಯ ಪದಕ ಗೆದ್ದಿದ್ದ ಸಿಂಧು, ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಫೈನಲ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ ಭಾರತದ ಮೊದಲ ಆಟಗಾರ್ತಿ ಎಂಬ ಗೌರವಕ್ಕೂ ಭಾಜನರಾಗಿದ್ದಾರೆ. ಹೋದ ವರ್ಷದ ಡಿಸೆಂಬರ್‌ನಲ್ಲಿ ಅವರಿಂದ ಈ ಸಾಧನೆ ಮೂಡಿಬಂದಿತ್ತು.

ಅಮೆರಿಕದ ಟೆನಿಸ್‌ ತಾರೆ ಮ್ಯಾಡಿಸನ್‌ ಕೀಸ್‌ ಕೂಡ 13ನೇ ಸ್ಥಾನದಲ್ಲಿದ್ದಾರೆ. ಜಾಹೀರಾತು ಮೂಲಗಳಿಂದ ₹21.32 ಕೋಟಿ ಆದಾಯ ಗಳಿಸಿರುವ ಕೀಸ್‌, ₹17.77 ಕೋಟಿ ಬಹುಮಾನ ಮೊತ್ತ ಪಡೆದಿದ್ದಾರೆ.

ಅಮೆರಿಕದ ಟೆನಿಸ್‌ ಆಟಗಾರ್ತಿ ಸೆರೆನಾ ವಿಲಿಯಮ್ಸ್‌, ಅಗ್ರ 15 ಮಂದಿಯ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

37ರ ಹರೆಯದ ಸೆರೆನಾ ಅವರ ವಾರ್ಷಿಕ ಆದಾಯ ಬರೋಬ್ಬರಿ ₹207.98 ಕೋಟಿ. ಜಾಹೀರಾತು ಮೂಲಗಳಿಂದ ಅವರ ಖಾತೆಗೆ ₹177.63 ಕೋಟಿ ಸೇರಿದೆ.

ಜಪಾನ್‌ನ ಟೆನಿಸ್‌ ಆಟಗಾರ್ತಿ ನವೊಮಿ ಒಸಾಕ, ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅವರ ವಾರ್ಷಿಕ ಗಳಿಕೆ ₹173.6 ಕೋಟಿ.

2018ರ ಅಮೆರಿಕ ಓಪನ್‌ನಲ್ಲಿ ನವೊಮಿ ಚಾಂಪಿಯನ್‌ ಆಗಿದ್ದರು. ಫೈನಲ್‌ನಲ್ಲಿ ನವೊಮಿ, 23 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದಿರುವ ಸೆರೆನಾ ವಿಲಿಯಮ್ಸ್‌ಗೆ ಆಘಾತ ನೀಡಿದ್ದರು.

ಟೆನಿಸ್‌ ಆಟಗಾರ್ತಿಯರಾದ ಏಂಜಲಿಕ್‌ ಕೆರ್ಬರ್‌ (₹83.78 ಕೋಟಿ), ಸಿಮೊನಾ ಹಲೆಪ್‌ (₹72.63 ಕೋಟಿ), ಸ್ಲೋನ್‌ ಸ್ಟೀಫನ್ಸ್‌ (₹68.35 ಕೋಟಿ), ಕ್ಯಾರೋಲಿನ್‌ ವೋಜ್ನಿಯಾಕಿ (₹53.42 ಕೋಟಿ), ಮರಿಯಾ ಶರಪೋವಾ (₹49.86 ಕೋಟಿ), ಕ್ಯಾರೋಲಿನಾ ಪ್ಲಿಸ್ಕೋವಾ (₹ 44.93 ಕೋಟಿ), ಎಲಿನಾ ಸ್ವಿಟೋಲಿನಾ (₹43.50 ಕೋಟಿ) ಮತ್ತು ವೀನಸ್‌ ವಿಲಿಯಮ್ಸ್‌ (₹42.7 ಕೋಟಿ) ಅವರು ಕ್ರಮವಾಗಿ ಮೂರರಿಂದ ಹತ್ತನೇ ಸ್ಥಾನಗಳಲ್ಲಿದ್ದಾರೆ. ಗಾರ್ಬೈನ್‌ ಮುಗುರುಜಾ (₹42.7 ಕೋಟಿ) ಹನ್ನೊಂದನೆ ಸ್ಥಾನ ಹೊಂದಿದ್ದಾರೆ.

ಪಟ್ಟಿಯಲ್ಲಿರುವ ಅಗ್ರ 15 ಮಂದಿಯ ಒಟ್ಟಾರೆ ಆದಾಯ ₹1,038.33 ಕೋಟಿ ಆಗಿದೆ.

Post Comments (+)