ಮಂಗಳವಾರ, ಆಗಸ್ಟ್ 4, 2020
22 °C

ರಾಜ್ಯಗಳ ಕ್ರೀಡಾ ಸಚಿವರ ಜೊತೆ ರಿಜಿಜು ಸಭೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಅವರು ಎಲ್ಲಾ ರಾಜ್ಯಗಳ ಕ್ರೀಡಾ ಸಚಿವರುಗಳ ಜೊತೆ ಆನ್‌ಲೈನ್‌ ಸಭೆ ನಡೆಸಲು ತೀರ್ಮಾನಿಸಿದ್ದಾರೆ.

ಇದೇ ತಿಂಗಳ 14 ಮತ್ತು 15ರಂದು ನಡೆಯುವ ಈ ಸಭೆಯಲ್ಲಿ ಕ್ರೀಡಾ ಚಟುವಟಿಕೆಗಳನ್ನು ಪುನರಾರಂಭಿಸಲು ಇರುವ ಸಾಧ್ಯತೆಗಳ ಬಗ್ಗೆ ಚರ್ಚಿಸಲಾಗುತ್ತದೆ.

ಎಲ್ಲರಿಗೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅನುವು ಮಾಡಿಕೊಡುವ ಉದ್ದೇಶದಿಂದ ರಾಜ್ಯಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲು ತೀರ್ಮಾನಿಸಲಾಗಿದೆ.

ಖೇಲೊ ಇಂಡಿಯಾ ಕ್ರೀಡಾಕೂಟ ಹಾಗೂ ಯುವ ಉತ್ಸವವನ್ನು ಈ ವರ್ಷದ ಅಂತ್ಯದಲ್ಲಿ ಇಲ್ಲವೇ ಮುಂದಿನ ವರ್ಷದ ಆರಂಭದಲ್ಲಿ ಆಯೋಜಿಸುವ ಬಗ್ಗೆ ಚಿಂತಿಸಲಾಗಿದೆ. ಈ ವಿಚಾರವಾಗಿ ರಾಜ್ಯಗಳಿಂದಲೂ ಪ್ರತಿಕ್ರಿಯೆ ಪಡೆಯಲು ನಿರ್ಧರಿಸಲಾಗಿದೆ.

ಈಗಾಗಲೇ ಎಲ್ಲಾ ರಾಜ್ಯಗಳಲ್ಲೂ ಖೇಲೊ ಇಂಡಿಯಾ ಶ್ರೇಷ್ಠತಾ ಕೇಂದ್ರಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಲು ತೀರ್ಮಾನಿಸಿರುವ ಸಚಿವಾಲಯವು ಇದಕ್ಕಾಗಿ ದೇಶದಾದ್ಯಂತ ಜಿಲ್ಲಾ ಮಟ್ಟದಲ್ಲಿ 1000 ಖೇಲೊ ಇಂಡಿಯಾ ಕೇಂದ್ರಗಳನ್ನು (ಕೆಐಸಿ) ಆರಂಭಿಸಲು ಮುಂದಾಗಿದೆ. ಜೊತೆಗೆ ಒಂದು ರಾಜ್ಯ ಒಂದು ಕ್ರೀಡೆ ನಿಯಮವನ್ನೂ ಅನುಷ್ಠಾನಗೊಳಿಸಲು ಚಿಂತಿಸಿದೆ. ಇವುಗಳ ಬಗ್ಗೆಯೂ ರಾಜ್ಯಗಳಿಂದ ಅಭಿಪ್ರಾಯ ಸಂಗ್ರಹಿಸುವುದು ಈ ಸಭೆಯ ಉದ್ದೇಶ ಎನ್ನಲಾಗಿದೆ.

ಶಾಲಾ ಪಠ್ಯದಲ್ಲಿ ಕ್ರೀಡೆ ಮತ್ತು ಫಿಟ್‌ನೆಸ್‌ ವಿಷಯಗಳನ್ನು ಸೇರ್ಪಡೆ ಮಾಡುವ ಕುರಿತೂ ಸಭೆಯಲ್ಲಿ ಚರ್ಚೆ ನಡೆಯುವ ನಿರೀಕ್ಷೆ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು