ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿ: ಮರಿನ್‌ ಎದುರು ಮಂಕಾದ ಸೈನಾ

ಭಾರತದ ಸವಾಲು ಅಂತ್ಯ
Last Updated 19 ಜನವರಿ 2019, 16:00 IST
ಅಕ್ಷರ ಗಾತ್ರ

ಕ್ವಾಲಾಲಂಪುರ: ವಿಶ್ವದ ಬಲಿಷ್ಠ ಆಟಗಾರ್ತಿ ಕ್ಯಾರೋಲಿನ್‌ ಮರಿನ್‌ ಎದುರು ಮಂಕಾದ ಸೈನಾ ನೆಹ್ವಾಲ್‌, ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಸೈನಾ ಸೋಲಿನೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.

ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ ಹಣಾಹಣಿಯಲ್ಲಿ ಸೈನಾ 16–21, 13–21 ನೇರ ಗೇಮ್‌ಗಳಿಂದ ಮಣಿದರು. ಈ ಹೋರಾಟ 40 ನಿಮಿಷ ನಡೆಯಿತು.

ಭಾರತದ ಆಟಗಾರ್ತಿ 2011ರಲ್ಲಿ ರನ್ನರ್‌ ಅಪ್‌ ಸಾಧನೆ ಮಾಡಿದ್ದರು. 2017ರ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದರು.

28 ವರ್ಷ ವಯಸ್ಸಿನ ಸೈನಾ, ಮೊದಲ ಗೇಮ್‌ನಲ್ಲಿ ಉತ್ತಮ ಆರಂಭ ಕಂಡರು. ಚುರುಕಿನ ಸರ್ವ್‌ ಮತ್ತು ಆಕರ್ಷಕ ಡ್ರಾಪ್‌ಗಳ ಮೂಲಕ ಪಾಯಿಂಟ್ಸ್‌ ಗಳಿಸಿ 5–2ರಿಂದ ಮುನ್ನಡೆ ಪಡೆದರು. ಇದರಿಂದ ಎದೆಗುಂದದ ಸ್ಪೇನ್‌ನ ಮರಿನ್‌ ನಂತರ ಮೋಡಿ ಮಾಡಿದರು. ಸತತ ಏಳು ಪಾಯಿಂಟ್ಸ್‌ ಬುಟ್ಟಿಗೆ ಹಾಕಿಕೊಂಡು 9–5ರ ಮುನ್ನಡೆ ತಮ್ಮದಾಗಿಸಿಕೊಂಡರು. ನಂತರ ಅಬ್ಬರಿಸಿದ ಸೈನಾ ತಿರುಗೇಟು ನೀಡುವ ಸೂಚನೆ ನೀಡಿದ್ದರು. ಆದರೆ ಮರಿನ್‌ ಇದಕ್ಕೆ ಅವಕಾಶ ನೀಡಲಿಲ್ಲ. 11–9ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋದ ಅವರು ದ್ವಿತೀಯಾರ್ಧದಲ್ಲೂ ಮಿಂಚಿನ ಆಟ ಆಡಿ ಮುನ್ನಡೆಯನ್ನು 13–9ಕ್ಕೆ ಹೆಚ್ಚಿಸಿಕೊಂಡರು.

ಇದರಿಂದ ವಿಶ್ವಾಸ ಕಳೆದುಕೊಳ್ಳದ ಸೈನಾ, ಪರಿಣಾಮಕಾರಿ ಸಾಮರ್ಥ್ಯ ತೋರಿ 14–14 ಸಮಬಲ ಸಾಧಿಸಿದರು. ಹೀಗಾಗಿ ಆಟದ ರೋಚಕತೆ ಹೆಚ್ಚಿತ್ತು. ಈ ಹಂತದಲ್ಲಿ ಸತತ ಆರು ಪಾಯಿಂಟ್ಸ್‌ ಕಲೆಹಾಕಿದ ಮರಿನ್‌ ಸಂಭ್ರಮಿಸಿದರು.

ಟೂರ್ನಿಯಲ್ಲಿ ನಾಲ್ಕನೇ ಶ್ರೇಯಾಂಕ ಹೊಂದಿರುವ ಮರಿನ್‌, ಎರಡನೇ ಗೇಮ್‌ನಲ್ಲೂ ಆಧಿಪತ್ಯ ಸಾಧಿಸಿದರು. ಶುರುವಿನಿಂದಲೇ ಚುರುಕಿನ ಆಟ ಆಡಿ 6–1ರ ಮುನ್ನಡೆ ಗಳಿಸಿದರು. ವಿರಾಮದ ವೇಳೆಗೆ ಅವರ ಮುನ್ನಡೆ 11–6ಕ್ಕೆ ಹೆಚ್ಚಿತು.

ದ್ವಿತೀಯಾರ್ಧದಲ್ಲೂ ಸ್ಪೇನ್‌ನ ಆಟಗಾರ್ತಿ ಅಬ್ಬರಿಸಿದರು. ಕ್ರಾಸ್‌ಕೋರ್ಟ್‌ ಮತ್ತು ಬ್ಯಾಕ್‌ಹ್ಯಾಂಡ್‌ ಹೊಡೆತಗಳ ಮೂಲಕ ಭಾರತದ ಆಟಗಾರ್ತಿಯನ್ನು ಕಂಗೆಡಿಸಿದರು. ಇದರೊಂದಿಗೆ ನಿರಾಯಾಸವಾಗಿ ಗೆಲುವಿನ ತೋರಣ ಕಟ್ಟಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT