ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಜೂನಿಯರ್‌ ಕುಸ್ತಿ ಚಾಂಪಿಯನ್‌ಷಿಪ್‌: ಕ್ವಾರ್ಟರ್ ಫೈನಲ್‌ಗೆ ಸಂಜು, ಸನೇಹ್‌

ನಿರಾಸೆ ಕಂಡ ಮಾನಸಿ
Last Updated 19 ಆಗಸ್ಟ್ 2021, 12:59 IST
ಅಕ್ಷರ ಗಾತ್ರ

ಯುಫಾ, ರಷ್ಯಾ: ಬಲಿಷ್ಠ ಪಟ್ಟುಗಳನ್ನು ಪ್ರಯೋಗಿಸಿದ ಭಾರತದ ಸಂಜು ದೇವಿ, ಆತ್ಮವಿಶ್ವಾಸದಿಂದ ಆಡಿದ ಸನೇಹ್‌ ಮತ್ತು ಭತೇರಿ ಇಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್‌ ಕುಸ್ತಿ ಚಾಂಪಿಯನ್‌ಷಿಪ್‌ನ ಸೆಮಿಫೈನಲ್ ಪ್ರವೇಶಿಸಿದರು. ಮಾನಸಿ ಸೋತು ಹೊರಬಿದ್ದರು.

62 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಸಂಜು ದೇವಿ ಕ್ವಾರ್ಟರ್ ಫೈನಲ್‌ನಲ್ಲಿ 4–3ರಲ್ಲಿ ಕ್ರೊವೇಷ್ಯಾದ ಇವಾ ಗೆರಿಚ್‌ ವಿರುದ್ಧ ಜಯ ಸಾಧಿಸಿದರು. ಚುರುಕಿನಿಂದ ಕೂಡಿದ ಪಟ್ಟುಗಳ ಮೂಲಕ ಎದುರಾಳಿಗೆ ಕಠಿಣ ಪೈಪೋಟಿ ನೀಡಿದ ಅವರು ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಜರ್ಮನಿಯ ಲೂಸಿಯಾ ಸ್ಕ್ರೆಲ್ ವಿರುದ್ಧ 5–2ರಲ್ಲಿ ಜಯ ಸಾಧಿಸಿದ್ದರು.

ಸನೇಹ್ 72 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. ಮೊದಲ ಸುತ್ತಿನಲ್ಲಿ ಬೆಲಾರಸ್‌ನ ಸೇನಿಯಾ ಪೆಟಪೋವಿಚ್‌ ಅವರನ್ನು 6–2ರಲ್ಲಿ ಮಣಿಸಿದ ಅವರು ಎಂಟರ ಘಟ್ಟದ ಹಣಾಹಣಿಯಲ್ಲಿ ಮಂಗೋಲಿಯಾದ ಸೊಗಸೊಲ್ಮಾ ದೊಜುಸುರೆನ್ ವಿರುದ್ಧ 7–0ಯಿಂದ ಗೆಲುವು ಸಾಧಿಸಿದರು. ಡಬಲ್ ಲೆಗ್ ಅಟ್ಯಾಕ್‌ನಲ್ಲಿ ಗಳಿಸಿದ ನಾಲ್ಕು ಪಾಯಿಂಟ್‌ಗಳು ಅವರಿಗೆ ಅತಿಸುಲಭ ಗೆಲುವು ತಂದುಕೊಟ್ಟಿತು.

53 ಕೆಜಿ ವಿಭಾಗದಲ್ಲಿ ಭಾರತದ ಪಿಂಕಿ ಆರಂಭದಲ್ಲಿ ಅಮೋಘ ಆಟ ಪ್ರದರ್ಶಿಸಿದರು. ಟರ್ಕಿಯ ಎಮೈನ್ ಎದುರಿನ ಸ್ಪರ್ಧೆಯಲ್ಲಿ ನಾಲ್ಕು ಪಾಯಿಂಟ್‌ಗಳ ಥ್ರೋ ಮೂಲಕ ಮಿಂಚಿದ ಅವರು ಮೊದಲು 5–4ರಲ್ಲಿ ಮತ್ತು ನಂತರ 7–ರಲ್ಲಿ ಮುನ್ನಡೆದರು. ಆದರೆ ಛಲ ಬಿಡದ ಎಮೈನ್ ಕೊನೆಯ ಹಂತದಲ್ಲಿ ಸಮಯೋಚಿತ ಆಟವಾಡಿ 12–7ರಲ್ಲಿ ಜಯ ಗಳಿಸಿದರು.

57 ಕೆಜಿ ವಿಭಾಗದ ಸ್ಪರ್ಧೆಯಲ್ಲಿಮಾನಸಿ ಕೂಡ ಉತ್ತಮ ಆರಂಭ ಕಂಡಿದ್ದರು. 16–4ರಲ್ಲಿ ಅಮೆರಿಕದ ಕ್ಲೇರ್ ಮೇರಿ ವಿರುದ್ದ ಗೆದ್ದು ಮುನ್ನಡೆಯಲ್ಲಿದ್ದ ಅವರು ಟರ್ಕಿಯ ಎಲ್ವಿರಾ ಕಮಲೊಗ್ಲು ವಿರುದ್ಧದ ಕ್ವಾರ್ಟರ್ ಫೈನಲ್‌ ಸೆಣಸಾಟದಲ್ಲಿ 1–9ರ ಸೋಲು ಕಂಡರು. ಎಲ್ವಿರಾ ಎರಡು ಬಾರಿ ನಾಲ್ಕು ಪಾಯಿಂಟರ್‌ಗಳ ಮೂಲಕ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT