ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಥಾಸ್ಥಿತಿ ಕಾಪಾಡಲು ಸೂಚನೆ

ಐಒಎ ಆಡಳಿತವನ್ನು ಸಿಒಎ ಕೈಗೆತ್ತಿಕೊಳ್ಳುವಂತಿಲ್ಲ: ಸುಪ್ರೀಂ ಕೋರ್ಟ್
Last Updated 18 ಆಗಸ್ಟ್ 2022, 15:50 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ದೆಹಲಿ ಹೈಕೋರ್ಟ್‌ ನೇಮಕ ಮಾಡಿರುವ ಆಡಳಿತ ಸಮಿತಿಯು (ಸಿಒಎ) ಭಾರತ ಒಲಿಂಪಿಕ್‌ ಸಂಸ್ಥೆಯ (ಐಒಎ) ದೈನಂದಿನ ವ್ಯವಹಾರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬಾರದು’ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಮಧ್ಯಂತರ ಆದೇಶ ನೀಡಿದೆ.

ಸುಪ್ರೀಂ ಕೋರ್ಟ್‌ನ ಆದೇಶದಿಂದ ಐಒಎ ತಾತ್ಕಾಲಿಕವಾಗಿ ನಿಟ್ಟುಸಿರು ಬಿಡುವಂತಾಗಿದೆ. ರಾಷ್ಟ್ರೀಯ ಕ್ರೀಡಾ ನೀತಿಯನ್ನು ಜಾರಿಗೊಳಿಸದೇ ಇರುವುದಕ್ಕೆ ಐಒಎಯ ಆಡಳಿತವನ್ನು ಸಿಒಎ ಕೈಗಿತ್ತು, ದೆಹಲಿ ಹೈಕೋರ್ಟ್‌ ಮಂಗಳವಾರ ಆದೇಶ ಹೊರಡಿಸಿತ್ತು.

ಐಒಎ ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆಹೋಗಿತ್ತು. ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ಅವರು, ‘ಅಂತರರಾಷ್ಟ್ರೀಯ ಒಲಿಂಪಿಕ್‌ ಸಂಸ್ಥೆಯು (ಐಒಸಿ) ಸಿಒಎಯಂತಹ ಚುನಾಯಿತಗೊಳ್ಳದೇ ನೇಮಕವಾಗಿರುವ ಸಮಿತಿಯನ್ನು ಒಪ್ಪಿಕೊಳ್ಳುವುದಿಲ್ಲ’ ಎಂಬ ವಿಷಯವನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಮತ್ತು ನ್ಯಾಯಮೂರ್ತಿ ಸಿ.ಟಿ.ರವಿಕುಮಾರ್ ಅವರಿದ್ದ ಪೀಠದ ಮುಂದಿಟ್ಟರು.

‘ಐಒಎಯು ಐಒಸಿಯ ಅಂಗ ಸಂಸ್ಥೆಯಾಗಿದ್ದು, ತನ್ನದೇ ಆದ ನಿಯಮಾವಳಿ ಪಾಲಿಸಬೇಕಿದೆ. ಐಒಎಯ ದೈನಂದಿನ ವ್ಯವಹಾರವನ್ನು ಸಿಒಎ ಕೈಗೆತ್ತಿಕೊಂಡರೆ ಅದನ್ನು ಮೂರನೇ ವ್ಯಕ್ತಿಯ ಹಸ್ತಕ್ಷೇಪ ಎಂದು ಐಒಸಿ ಪರಿಗಣಿಸುತ್ತದೆ’ ಎಂದು ತಿಳಿಸಿದರು.

‘ಸಿಒಎ ಅಧಿಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡರೆ, ಐಒಸಿಯು ಐಒಎ ಮೇಲೆ ನಿಷೇಧ ಹೇರುವ ಸಾಧ್ಯತೆಯಿದೆ. ಹಾಗಾದಲ್ಲಿ ಭಾರತವು ಒಲಿಂಪಿಕ್ಸ್‌ ಅಥವಾ ಇತರ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವ ಅವಕಾಶ ಕಳೆದುಕೊಳ್ಳುತ್ತದೆ’ ಎಂಬುದನ್ನು ಗಮನಕ್ಕೆ ತಂದರು. ಈ ಕುರಿತು ಮಧ್ಯಂತರ ಆದೇಶ ಹೊರಡಿಸಬೇಕು ಎಂದು ಕೋರಿಕೊಂಡರು.

ಅದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ಎರಡೂ ಕಡೆಯವರು ಯಥಾಸ್ಥಿತಿ ಕಾಪಾಡಿಕೊಳ್ಳಬೇಕು. ಐಒಎಯ ಆಡಳಿತವನ್ನು ಸಿಒಎಗೆ ಹಸ್ತಾಂತರಿಸಬಾರದು. ಈ ಪ್ರಕರಣದ ವಿಚಾರಣೆಯನ್ನು ಆ.22 ರಂದು ಸೂಕ್ತ ಪೀಠದ ಮುಂದಿಡಲಾಗುವುದು’ ಎಂದು ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT