ಶನಿವಾರ, ಸೆಪ್ಟೆಂಬರ್ 25, 2021
30 °C
ವೇಟ್‌ಲಿಫ್ಟಿಂಗ್‌: 21 ವರ್ಷಗಳ ನಂತರ ಒಲಿದ ಪದಕ; ದಾಖಲೆ ಬರೆದ ಚೀನಾದ ಹೌ ಜಿಹುಯಿ

Tokyo Olympic - Mirabai Chanu| ಮೀರಾಬಾಯಿ ಕೊರಳಿಗೆ ಬೆಳ್ಳಿ ಹಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ : ಒಲಿಂಪಿಕ್ಸ್‌ ವೇಟ್‌ಲಿಫ್ಟಿಂಗ್‌ನಲ್ಲಿ ಪದಕ ಗೆಲ್ಲುವ ಎರಡು ದಶಕಗಳ ಭಾರತದ ಕಾಯುವಿಕೆಗೆ ಮೀರಾಬಾಯಿ ಚಾನು ಶನಿವಾರ ಕೊನೆ ಹಾಡಿದರು. ಮಹಿಳೆಯರ 49 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಅವರು ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಒಲಿಂಪಿಕ್ ದಾಖಲೆಯೊಂದಿಗೆ ಚೀನಾದ ಹೌ ಜಿಹುಯಿ ಚಿನ್ನ ಗೆದ್ದರೆ, ಕಂಚಿನ ಪದಕ ಇಂಡೊನೇಷ್ಯಾದ ಐಸಹಾ ವಿಂಡಿ ಕಾಂಟಿಕಾ ಅವರ ಪಾಲಾಯಿತು.

26 ವರ್ಷದ ಮೀರಾಬಾಯಿ ಒಟ್ಟು 202 ಕೆಜಿ (87 ಕೆಜಿ ಸ್ನ್ಯಾಚ್‌ ಮತ್ತು 115 ಕೆಜಿ ಕ್ಲೀನ್‌ ಆ್ಯಂಡ್‌ ಜರ್ಕ್‌) ಭಾರ ಎತ್ತಿದರು. 2000ನೇ ಇಸವಿಯಲ್ಲಿ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಕರ್ಣಂ ಮಲ್ಲೇಶ್ವರಿ ಕಂಚು ಗೆದ್ದ ನಂತರ ಭಾರತಕ್ಕೆ ಪದಕ ಸಿಗುತ್ತಿರುವುದು ಇದೇ ಮೊದಲು. ಕಳೆದ ಬಾರಿ ರಿಯೊ ಡಿ ಜನೈರೊದಲ್ಲಿ ಮೀರಾಬಾಯಿ ನಿರಾಸೆ ಅನುಭವಿಸಿದ್ದರು. ಹೌ ಜಿಹುಯಿ ಒಟ್ಟು 210 ಕೆಜಿ (94 ಕೆಜಿ ಮತ್ತು 116 ಕೆಜಿ) ಭಾರ ಎತ್ತಿದರು. ಇಂಡೊನೇಷ್ಯಾ ವೇಟ್‌ಲಿಫ್ಟರ್ 194 ಕೆಜಿ (84 ಕೆಜಿ ಮತ್ತು 110 ಕೆಜಿ) ಸಾಧನೆ ಮಾಡಿದರು. ಸ್ನ್ಯಾಚ್‌ನ ಮೊದಲ ಪ್ರಯತ್ನದಲ್ಲಿ 84 ಕೆಜಿ ಎತ್ತಿದ ಮೀರಾಬಾಯಿ ನಂತರ ಅದನ್ನು 87 ಕೆಜಿ ಏರಿಸಿದರು. ಮೂರನೇ ಪ್ರಯತ್ನದಲ್ಲಿ ವೈಫಲ್ಯ ಕಂಡರು. 94 ಕೆಜಿ ಎತ್ತಿದ ಚೀನಾದ ಕ್ರೀಡಾಪಟು ಒಲಿಂಪಿಕ್ಸ್ ದಾಖಲೆ ಬರೆದರು. ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ ವಿಶ್ವ ದಾಖಲೆ ಹೊಂದಿರುವ ಮೀರಾಬಾಯಿ ಮೊದಲ ಎರಡು ಪ್ರಯತ್ನಗಳಲ್ಲಿ ಕ್ರಮವಾಗಿ 110 ಮತ್ತು 115 ಕೆಜಿ ಸಾಧನೆ ಮಾಡಿದರು. ಮೂರನೇ ಸುತ್ತಿನಲ್ಲಿ ವೈಫಲ್ಯ ಕಂಡರು. ಆದರೆ ಅಷ್ಟರಲ್ಲಿ ಬೆಳ್ಳಿ ಪದಕ ಖಚಿತಪಡಿಸಿಕೊಂಡಿದ್ದರು.

ಪದಕ ಘೋಷಣೆ ಆದ ಕೂಡಲೇ ಕುಣಿದಾಡಿದ ಮೀರಾಬಾಯಿ ಕೋಚ್‌ ವಿಜಯ ಶರ್ಮಾ ಅವರನ್ನು ಅಪ್ಪಿಹಿಡಿದುಕೊಂಡು ಸಂಭ್ರಮಿಸಿದರು.

ಮಣಿಪುರದ ಪ್ರತಿಭೆ

l ಜನನ ಆಗಸ್ಟ್ 8, 1994

l ವಯಸ್ಸು 26

l ಜನಿಸಿದ ಸ್ಥಳ ಇಂಫಾಲ

l ಉದ್ಯೋಗ ಈಶಾನ್ಯ ರೈಲ್ವೆಯಲ್ಲಿ ಟಿಕೆಟ್ ಕಂಟ್ರೋಲರ್

l ಮಾದರಿ ಕುಂಜರಾಣಿ ದೇವಿ

l ವೃತ್ತಿಪರ ಕ್ರೀಡಾಪಟು 2008ರಿಂದ

l ವಿಭಾಗ 49 ಕೆಜಿ

l ಕೋಚ್‌ ವಿಜಯ ಶರ್ಮಾ

l ವಿಶ್ವ ದಾಖಲೆ 119 ಕೆಜಿ (ಏಪ್ರಿಲ್‌ 2021, ತಾಷ್ಕಂಟ್‌)

ಪದಕಗಳು

l ವಿಶ್ವ ಚಾಂಪಿಯನ್‌ಷಿಪ್‌ ಚಿನ್ನ (2017, 48 ಕೆಜಿ)

l ಕಾಮನ್ವೆಲ್ತ್ ಗೇಮ್ಸ್‌ ಚಿನ್ನ (2018, 48 ಕೆಜಿ)

l ಕಾಮನ್ವೆಲ್ತ್ ಗೇಮ್ಸ್‌ ಬೆಳ್ಳಿ (2014, 48 ಕೆಜಿ)

l ಏಷ್ಯನ್ ಚಾಂಪಿಯನ್‌ಷಿಪ್‌ ಕಂಚು (2020, 49 ಕೆಜಿ)

l ರಾಷ್ಟ್ರೀಯ ಚಾಂಪಿಯನ್‌ಷಿಪ್ ಚಿನ್ನ (2020, 49 ಕೆಜಿ)

ಅಭಿನಂದನೆಯ ಹೂಮಳೆ

ಮೀರಾಬಾಯಿ ಅವರ ಸಾಧನೆಯ ವಿಷಯ ತಿಳಿಯುತ್ತಿದ್ದಂತೆ ದೇಶದ ಉದ್ದಗಲಕ್ಕೂ ಅಭಿನಂದನೆಯ ಹೊಳೆ ಹರಿದಿದೆ. ಕ್ರೀಡಾ ಸಚಿವರಾದ ಅನುರಾಗ್ ಠಾಕೂರ್‌, ಕಿರಣ್ ರಿಜಿಜು, ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್‌, ವೀರೇಂದ್ರ ಸೆಹ್ವಾಗ್, ವಿವಿಎಸ್‌ ಲಕ್ಷ್ಮಣ್‌, ಗೌತಮ್ ಗಂಭೀರ್, ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವ ಕುಸ್ತಿಪಟು ಸಾಕ್ಷಿ ಮಲಿಕ್, ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಎರಡು ಚಿನ್ನ ಗೆದ್ದಿರುವ ಸತೀಶ್ ಶಿವಲಿಂಗಂ ಮುಂತಾದವರು ಈ ಪೈಕಿ ಪ್ರಮುಖರು.

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರೂ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ.

ನಾನು ಕೇವಲ ಮಣಿಪುರಕ್ಕೆ ಸೀಮಿತವಲ್ಲ. ಭಾರತದ ಪ್ರಜೆ. ಈ ಕೂಟದಲ್ಲಿ ದೇಶಕ್ಕಾಗಿ ಮೊದಲ ಪದಕ ಗೆದ್ದುಕೊಡಲು ಸಾಧ್ಯವಾದದ್ದು ಅತ್ಯಂತ ಖುಷಿ ತಂದಿದೆ. ಈ ಗಳಿಗೆಗಾಗಿ ಐದು ವರ್ಷಗಳಿಂದ ಕಾಯುತ್ತಿದ್ದೆ. ಇದು ಅಭಿಮಾನಪಟ್ಟು ಕೊಳ್ಳುವ ಸಮಯ. ಚಿನ್ನಕ್ಕಾಗಿ ಪ್ರಯತ್ನಿಸಿದ್ದೆ. ಬೆಳ್ಳಿ ಲಭಿಸಿದೆ. ಇದು ಸಣ್ಣ ಸಾಧನೆಯೇನೂ ಅಲ್ಲ ಎಂಬುದರ ಅರಿವಿದೆ.
– ಮೀರಾಬಾಯಿ ಚಾನು

***
ಒಲಿಂಪಿಕ್ಸ್‌ನಲ್ಲಿ ಉತ್ತಮ ಆರಂಭ. ಮೀರಾಬಾಯಿ ಅವರ ಅಮೋಘ ಸಾಧನೆಗೆ ಭಾರತ ಪುಳಕಗೊಂಡಿದೆ. ಅವರು ಗಳಿಸಿಕೊಟ್ಟಿರುವ ಬೆಳ್ಳಿ ಪದಕ ದೇಶದ ಪ್ರತಿಯೊಬ್ಬ ಪ್ರಜೆಗೂ ಪ್ರೇರಕವಾಗಲಿದೆ.
– ನರೇಂದ್ರ ಮೋದಿ, ಪ್ರಧಾನಮಂತ್ರಿ
***
ಮೀರಾಬಾಯಿ ಅವರಿಗೆ ಹಾರ್ದಿಕ ಅಭಿನಂದನೆಗಳು. ಇದು ಅತ್ಯಮೋಘ ಸಾಧನೆ. ಈ ಪದಕದ ಸಿಹಿ ಸಂಭ್ರಮವನ್ನು ದೇಶವು ಅನೇಕ ವರ್ಷಗಳ ನೆನಪಿನಲ್ಲಿಟ್ಟುಕೊಳ್ಳಲಿದೆ
– ಅಭಿನವ್ ಬಿಂದ್ರಾ, ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಶೂಟರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು