ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics | ಟೇಬಲ್ ಟೆನಿಸ್: ಮಾ ಲಾಂಗ್‌ಗೆ ಮಣಿದ ಶರತ್‌

Last Updated 27 ಜುಲೈ 2021, 11:50 IST
ಅಕ್ಷರ ಗಾತ್ರ

ಟೋಕಿಯೊ: ಭಾರತದ ಅನುಭವಿ ಟೇಬಲ್ ಟೆನಿಸ್ ಪಟು ಅಚಂತ ಶರತ್ ಕಮಲ್ ಅವರ ಒಲಿಂಪಿಕ್ಸ್ ಅಭಿಯಾನ ಮಂಗಳವಾರ ಕೊನೆಗೊಂಡಿದೆ. ಪುರುಷರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಹಣಾಹಣಿಯಲ್ಲಿ ಅವರು ರಿಯೊ ಒಲಿಂಪಿಕ್ಸ್ ಚಾಂಪಿಯನ್‌ ಮಾ ಲಾಂಗ್ ಎದುರು ಎಡವಿದರು. ಇದರೊಂದಿಗೆ ಕ್ರೀಡಾಕೂಟದ ಟೇಬಲ್ ಟೆನಿಸ್‌ ವಿಭಾಗದಲ್ಲಿ ಭಾರತದ ಸವಾಲೂ ಅಂತ್ಯವಾಯಿತು.

ವಿಶ್ವ ಚಾಂಪಿಯನ್‌ ಲಾಂಗ್‌ 7-11 11-8 11-13 4-11 4-11ರಿಂದ ಗೆಲುವು ಸಾಧಿಸಿದರೂ 39 ವರ್ಷದ ಶರತ್ ಒಡ್ಡಿದ ಪೈಪೋಟಿ ಗಮನ ಸೆಳೆಯಿತು. 46 ನಿಮಿಷಗಳಲ್ಲಿ ಈ ಪಂದ್ಯ ಕೊನೆಗೊಂಡಿತು.

ಮೊದಲ ಗೇಮ್‌ ಕೈಚೆಲ್ಲಿದ ಶರತ್‌, ಎರಡನೇ ಗೇಮ್‌ನ ಆರಂಭದಲ್ಲಿ 7–3ರಿಂದ ಮುನ್ನಡೆ ಗಳಿಸಿದರು. ಸೊಗಸಾದ ಫೋರ್‌ಹ್ಯಾಂಡ್ ಹೊಡೆತಗಳು ಹಾಗೂ ಲಾಂಗ್ ಅವರು ಎಸಗಿದ ಪ್ರಮಾದಗಳು ಈ ಮುನ್ನಡೆಗೆ ನೆರವಾದವು. ಆದರೆ ಸತತ ಐದು ಪಾಯಿಂಟ್ಸ್ ಕಲೆಹಾಕಿದ ಚೀನಾ ಆಟಗಾರ ಹಿನ್ನಡೆಯನ್ನು ತಗ್ಗಿಸಿದರೂ ಗೇಮ್‌ ಶರತ್ ಪಾಲಾಗುವುದನ್ನು ತಪ್ಪಿಸಲಾಗಲಿಲ್ಲ.

ಮೂರನೇ ಗೇಮ್‌ನ ಆರಂಭದಲ್ಲಿ ಭಾರತದ ಆಟಗಾರನಿಗೆ 4–2ರ ಮುನ್ನಡೆ ದೊರೆಯಿತು. ತಿರುಗೇಟು ನೀಡಿದ ಲಾಂಗ್‌, ಗೇಮ್‌ ಅನ್ನು 8–8ರ ಸಮಬಲಕ್ಕೆ ತಂದರು. ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಗೇಮ್ ಗೆದ್ದುಕೊಂಡ ಶರತ್‌ 2–1ರ ಮುನ್ನಡೆ ಗಳಿಸಿದರು.

ನಾಲ್ಕು ಮತ್ತು ಐದನೇ ಗೇಮ್‌ಗಳಲ್ಲಿ ಲಾಂಗ್ ಸಂಪೂರ್ಣ ಪಾರಮ್ಯ ಮೆರೆದರು. ಪಂದ್ಯ ಗೆದ್ದು ಸಂಭ್ರಮಿಸಿದರು.

ಭಾರತದ ಮಣಿಕಾ ಬಾತ್ರಾ, ಸುತೀರ್ಥಾ ಮುಖರ್ಜಿ ಮತ್ತು ಜಿ.ಸತ್ಯನ್ ಅವರು ಸಿಂಗಲ್ಸ್ ವಿಭಾಗದ ಸ್ಪರ್ಧೆಗಳಿಂದ ಹೊರಬಿದ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT