ಬುಧವಾರ, ಫೆಬ್ರವರಿ 8, 2023
18 °C

ಬ್ಯಾಡ್ಮಿಂಟನ್‌ ಟೂರ್ನಿ- ಕ್ವಾರ್ಟರ್‌ಫೈನಲ್‌ಗೆ ಸಿಂಧು; ಸೈನಾಗೆ ಮಾಳವಿಕಾ ಆಘಾತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸುಲಭ ಜಯ ಸಂಪಾದಿಸಿದ ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ, ಭಾರತದ ಪಿ.ವಿ.ಸಿಂಧು ಅವರು ಇಂಡಿಯಾ ಓಪನ್ ಬ್ಯಾಡ್ಮಿಂಟನ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದಾರೆ. ಆದರೆ ಭರವಸೆಯ ಆಟಗಾರ್ತಿ ಮಾಳವಿಕಾ ಬಾನ್ಸೋದ್‌ ಅವರಿಗೆ ಮಣಿದ ಸೈನಾ ನೆಹ್ವಾಲ್‌ ಅಭಿಯಾನ ಟೂರ್ನಿಯಲ್ಲಿ ಗುರುವಾರ ಅಂತ್ಯವಾಯಿತು.

ಅಗ್ರಶ್ರೇಯಾಂಕದ ಸಿಂಧು ಮಹಿಳಾ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನಲ್ಲಿ 21–10, 21–10ರಿಂದ ಭಾರತದವರೇ ಆದ ಇರಾ ಶರ್ಮಾ ಅವರನ್ನು ಮಣಿಸಿದರು.

ಸಿಂಧು ಅವರು ಎಂಟರಘಟ್ಟದ ಪಂದ್ಯದಲ್ಲಿ ಭಾರತದವರೇ ಆದ ಅಸ್ಮಿತಾ ಚಲಿಹಾ ಅವರನ್ನು ಎದುರಿಸುವರು. ಎರಡನೇ ಸುತ್ತಿನ ಇನ್ನೊಂದು ಹಣಾಹಣಿಯಲ್ಲಿ ಅಸ್ಮಿತಾ 21-17, 21-14ರಿಂದ ಫ್ರಾನ್ಸ್‌ನ ಯೆಲ್ಲೆ ಹೊಯಾಕ್ಸ್ ಅವರನ್ನು ಮಣಿಸಿದರು.

ಮಾಜಿ ಚಾಂಪಿಯನ್‌ ಹಾಗೂ 2012ರ ಲಂಡನ್‌ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ 17–21, 9–21ರಿಂದ ಭಾರತದ ಮಾಳವಿಕಾ ಎದುರು ಎಡವಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 111ನೇ ಸ್ಥಾನದಲ್ಲಿರುವ 20 ವರ್ಷದ ಮಾಳವಿಕಾ, ವಿಶ್ವದ ಮಾಜಿ ಅಗ್ರಕ್ರಮಾಂಕದ ಆಟಗಾರ್ತಿಯನ್ನು ಮಣಿಸಲು ಕೇವಲ 34 ನಿಮಿಷ ತೆಗೆದುಕೊಂಡರು.

‘ಸೈನಾ ಎದುರು ಮೊದಲ ಬಾರಿ ಕಣಕ್ಕಿಳಿದಿದ್ದೆ. ಬ್ಯಾಡ್ಮಿಂಟನ್‌ ಆಡಲು ಆರಂಭಿಸಿದಾಗಿನಿಂದ ಅವರು ನನ್ನ ಆದರ್ಶವಾಗಿದ್ದಾರೆ. ಅವರ ಎದುರು ಆಡುವುದು ಜೀವನದ ಬಹುದೊಡ್ಡ ಕನಸಾಗಿತ್ತು. ಇಂಡಿಯಾ ಓಪನ್‌ನಂತಹ ದೊಡ್ಡ ವೇದಿಕೆಯಲ್ಲಿ ಅದು ನನಸಾಯಿತು. ಈ ಗೆಲುವು ನನ್ನ ಬದುಕಿನ ಮಹತ್ವದ ಸಾಧನೆ‘ ಎಂದು ಗೆಲುವಿನ ಬಳಿಕ ಮಾಳವಿಕಾ ನುಡಿದರು.

ಗಾಯಗಳಿಂದ ಚೇತರಿಸಿಕೊಂಡು ಟೂರ್ನಿಯಲ್ಲಿ ಕಣಕ್ಕಿಳಿದಿದ್ದ ಸೈನಾ, ಮಂಗಳವಾರ ಮೊದಲ ಸುತ್ತಿನ ತಡೆ ದಾಟಿದ್ದರು. ಅಂಗಣದಲ್ಲಿ ತೋರಿದ ಸಾಮರ್ಥ್ಯದ ಬಗ್ಗೆ ಅವರಿಗೆ ಸಂತಸವಿದೆ. ಆದರೆ ತಾನು ಇನ್ನಷ್ಟು ಫಿಟ್‌ ಆಗಬೇಕಿತ್ತು ಎಂದು ಅವರು ಹೇಳಿದ್ದಾರೆ.

‘ರ‍್ಯಾಲಿಗಳಲ್ಲಿ ಮಾಳವಿಕಾ ಅದ್ಭುತವಾಗಿ ಆಡಿದರು. ಅವರಿಗೆ ಉತ್ತಮ ಭವಿಷ್ಯವಿದೆ‘ ಎಂದು ಸೈನಾ ಮೆಚ್ಚುಗೆ ವ್ಯಕ್ತಪಡಿಸಿದರು.

ಮಾಳವಿಕಾ ಅವರು ಕ್ವಾರ್ಟರ್‌ಫೈನಲ್‌ನಲ್ಲಿ ಆಕರ್ಷಿ ಕಶ್ಯಪ್ ಅವರಿಗೆ ಮುಖಾಮುಖಿಯಾಗಲಿದ್ದಾರೆ. ಇನ್ನೊಂದು ಪಂದ್ಯದಲ್ಲಿ ಆಕರ್ಷಿ 21-10, 21-10ರಿಂದ ಭಾರತದವರೇ ಆದ ಕೆಯುರಾ ಮೊಪಾತಿನ್‌ ಎದುರು ಜಯಿಸಿದರು.

ಪ್ರಣಯ್‌ಗೆ ವಾಕ್‌ಓವರ್‌: ಪುರುಷರ ಸಿಂಗಲ್ಸ್‌ನಲ್ಲಿ ಎಚ್‌.ಎಸ್‌. ಪ್ರಣಯ್ ಅವರಿಗೆ ವಾಕ್‌ ಓವರ್ ಲಭಿಸಿತು. ಕೊರೊನಾ ಸೋಂಕಿತ ಮಿಥುನ್ ಮಂಜುನಾಥ್ ಹಿಂದೆ ಸರಿದ ಕಾರಣ ಅವರಿಗೆ ಈ ಅವಕಾಶ ಸಿಕ್ಕಿತು. ಸಮೀರ್‌ ವರ್ಮಾ ಅವರ ಅಭಿಯಾನ ಕೊನೆಗೊಂಡಿತು. ಮೊಣಕಾಲು ನೋವಿನಿಂದ ಬಳಲಿದ ಅವರು ಕೆನಡಾದ ಬ್ರೇನ್ ಯಾಂಗ್ ಎದುರಿನ ಎರಡನೇ ಸುತ್ತಿನ ಪಂದ್ಯದ ನಡುವೆಯೇ ಹಿಂದೆ ಸರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು