ಮಂಗಳವಾರ, ಜುಲೈ 5, 2022
21 °C
ವಿಶ್ವ ಟೂರ್ ಫೈನಲ್ ಬ್ಯಾಡ್ಮಿಂಟನ್: ಜಪಾನ್‌ನ ಒಕುಹರಾಗೆ ನಿರಾಶೆ

ಸಿಂಧು ಈಗ ’ಚಿನ್ನದ ಹುಡುಗಿ’

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ಗುವಾಂಗ್ಜು: ‘ಹೈದರಾಬಾದ್ ಹುಡುಗಿ’ ಪಿ.ವಿ. ಸಿಂಧು ಅವರು ತಮ್ಮ ಪದಕದ ಬಣ್ಣವನ್ನು ಬದಲಾಯಿಸಿಕೊಳ್ಳುವಲ್ಲಿ  ಸಫಲರಾಗಿದ್ದಾರೆ.

ಮಹತ್ವದ ಟೂರ್ನಿಗಳ ಫೈನಲ್‌ಗಳಲ್ಲಿ ಎಡವುತ್ತಿದ್ದ ಅವರು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದೇ ಹೆಚ್ಚು. ಆದರೆ ಭಾನುವಾರ ಹಾಗಾಗಲಿಲ್ಲ. ವಿಶ್ವ ಟೂರ್ ಫೈನಲ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟರು.  ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆ ಅವರದ್ದಾಯಿತು.

ಬೆಳಿಗ್ಗೆ ನಡೆದ ಪಂದ್ಯದಲ್ಲಿ ಸಿಂಧು 21–19, 21–17ರಿಂದ ಜಪಾನ್‌ನ ನೊಜೊಮಿ ಒಕುಹರಾ ವಿರುದ್ಧ ಗೆದ್ದರು. 2017ರಲ್ಲಿ ಒಕುಹರಾ ಚಾಂಪಿಯನ್ ಆಗಿದ್ದರು.  ಒಂದು ಗಂಟೆ, ಎರಡು ನಿಮಿಷಗಳ ಹೋರಾಟದಲ್ಲಿ ಸಿಂಧು ಪಾರಮ್ಯ ಮೆರೆದರು.

23 ವರ್ಷದ ಸಿಂಧು ಅವರಿಗೆ ಇದು 14ನೇ ಪ್ರಶಸ್ತಿಯಾಗಿದೆ. 2018ರಲ್ಲಿ ಗೆದ್ದ ಮೊದಲ ಚಿನ್ನವಾಗಿದೆ. ವಿಶ್ವ ಚಾಂಪಿಯನ್‌ಷಿಪ್, ಏಷ್ಯನ್ ಗೇಮ್ಸ್‌, ಕಾಮನ್‌ವೆಲ್ತ್‌ ಗೇಮ್ಸ್‌, ಥಾಯ್ಲೆಂಡ್ ಓಪನ್ ಮತ್ತು ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಗಳಲ್ಲಿ ಬೆಳ್ಳಿ ಪದಕ ಗಳಿಸಿದ್ದರು. ಕಾಮನ್‌ವೆಲ್ತ್‌ ಕೂಟಕ್ಕೆ ಹೋಗುವ ಮುನ್ನ ಅವರು ‘ನನ್ನ ಬೆಳ್ಳಿ ಪದಕದ ಬಣ್ಣವನ್ನು ಬಂಗಾರಕ್ಕೆ ಬದಲಿಸುತ್ತೇನೆ’ ಎಂದಿದ್ದರು. ಆ ಮಾತು ಈಗ ನಿಜವಾಗಿದೆ. ಒಕುಹರಾ ವಿರುದ್ಧ ಎರಡನೇ ಗೇಮ್‌ನ ವಿನ್ನಿಂಗ್ ಪಾಯಿಂಟ್ ಪಡೆದಾಗ ಸಿಂಧು ಸಂತಸಕ್ಕೆ ಪಾರವೇ ಇರಲಿಲ್ಲ.  ಅವರ ಕೋಚ್ ಪುಲ್ಲೇಲ ಗೋಪಿಚಂದ್ ಕೂಡ ಅಲ್ಲಿದ್ದರು. ಎರಡೂ ಗೇಮ್‌ಗಳಲ್ಲಿ ಸಿಂಧು ಉತ್ತಮ ಡ್ರಾಪ್ ಮತ್ತು ರಿಟರ್ನ್‌ಗಳನ್ನು ಮಾಡಿದರು. ಆಕರ್ಷಕ ಸ್ಮ್ಯಾಷ್‌ಗಳ ಆಟವೂ ರಂಗೇರಿತು. ಇದರಿಂದಾಗಿ ಎದುರಾಳಿಕ ಒಕುಹರಾ ಕೆಲವು ಲೋಪಗಳನ್ನು ಮಾಡಿದರು. ಆದ್ದರಿಂದ ಸಿಂಧುಗೆ ಜಯ ಸುಲಭವಾಯಿತು. ಈ ಟೂರ್ನಿಗಾಗಿ ಅವರು ಈಚೆಗೆ ನಡೆದಿದ್ದ ಸೈಯದ್ ಮೋದಿ ಟ್ರೋಫಿ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಆಡಿರಲಿಲ್ಲ.

 2011ರಲ್ಲಿ ಸೈನಾ ನೆಹ್ವಾಲ್ ಅವರು ವಿಶ್ವ ಸೂಪರ್‌ ಸರಣಿಯ ಫೈನಲ್‌ ತಲುಪಿದ್ದರು. ಜ್ವಾಲಾಗುಟ್ಟಾ ಮತ್ತು  ವಿ. ದಿಜು ಅವರು 2009ರಲ್ಲಿ ರನ್ನರ್ಸ್ ಅಪ್ ಆಗಿದ್ದರು.

ಆಲ್‌ ಇಂಗ್ಲೆಂಡ್‌ ಪ್ರಶಸ್ತಿ ಜಯದ ಗುರಿ: ಗೋಪಿ
ಮುಂದಿನ ವರ್ಷ ಆಲ್‌ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ ಗೆಲ್ಲುವುದು ನಮ್ಮ ಗುರಿ ಎಂದು ರಾಷ್ಟ್ರೀಯ ಬ್ಯಾಡ್ಮಿಂಟನ್ ತಂಡದ ಮುಖ್ಯ ಕೋಚ್ ಪುಲ್ಲೇಲ ಗೋಪಿಚಂದ್ ಹೇಳಿದರು.

ಭಾನುವಾರ ಸಿಂಧು ಅವರ ಗೆಲುವಿನ ನಂತರ ಗೋಪಿಚಂದ್‌ ಸುದ್ದಿಗಾರರೊಂದಿಗೆ ಮಾತನಾಡಿದರು.

‘2020 ಮತ್ತು 2022 ವರ್ಷಗಳು ನಮಗೆ ಅತ್ಯಂತ ಮಹತ್ವದ್ದಾಗಿವೆ. ಒಲಿಂಪಿಕ್ಸ್‌, ಕಾಮನ್‌ವೆಲ್ತ್‌ ಗೇಮ್ಸ್, ಏಷ್ಯನ್ ಗೇಮ್ಸ್‌ ಕೂಟಗಳಲ್ಲಿ ಉತ್ತಮ ಸಾಧನೆ ಮಾಡುವುದಾಗಿದೆ. ಅದಲ್ಲದೇ ಮುಂದಿನ ವರ್ಷ ನಡೆಯುವ ಆಲ್‌ ಇಂಗ್ಲೆಂಡ್‌ನಲ್ಲಿ ಮೊದಲು ಪ್ರಶಸ್ತಿ ಸಾಧನೆ ಮಾಡುವತ್ತ ಆದ್ಯತೆ’ ಎಂದರು.

2001ರಲ್ಲಿ ಗೋಪಿಚಂದ್ ಅವರು ಆಲ್‌ ಇಂಗ್ಲೆಂಡ್‌ ಪ್ರಶಸ್ತಿ ಗೆದ್ದಿದ್ದರು. ಅದರ ನಂತರ ಭಾರತದ ಆಟಗಾರರಿಂದ ಈ ಸಾಧನೆ ಮೂಡಿಬಂದಿಲ್ಲ. 1980ರಲ್ಲಿ ಮೊದಲ ಬಾರಿಗೆ ಕರ್ನಾಟಕದ ಪ್ರಕಾಶ ಪಡುಕೋಣೆ ಅವರು ಆಲ್‌ ಇಂಗ್ಲೆಂಡ್ ಚಾಂಪಿಯನ್ ಆಗಿದ್ದರು.

‘ಇವತ್ತು ಸಿಂಧು ಆಟವು ಶ್ರೇಷ್ಠವಾಗಿತ್ತು. ಇಡೀ ಟೂರ್ನಿಯಲ್ಲಿಯೇ ಅವರು ಉತ್ತಮವಾಗಿ ಆಡಿದ್ದಾರೆ. ಅಕಾನೆ ಯಮಗುಚಿ, ರಚನಾಕ್ ಇಂಟನಾನ್ ಮತ್ತು ಒಕುಹರಾ ಅವರಂತಹ ಪ್ರಮುಖ ಆಟಗಾರ್ತಿಯರನ್ನು ಸೋಲಿಸಿದ್ದಾರೆ. ಮುಂದಿನ ಗುರಿ ಸಾಧನೆ ಆತ್ಮವಿಶ್ವಾಸ ಹೆಚ್ಚಿಸಿದೆ’ ಎಂದು ಹೇಳಿದರು.

‘ಪುರುಷರ ವಿಭಾಗದಲ್ಲಿ ಸಮೀರ್ ಕೂಡ ಉತ್ತಮವಾಗಿ ಆಡಿದ್ದಾರೆ. ಸೆಮಿಫೈನಲ್‌ ಪ್ರವೇಶಿಸುವ ಹಾದಿಯಲ್ಲಿ ಅಮೋಘ ಆಟವಾಡಿದ್ದರು. ಸೆಮಿಯಲ್ಲಿ ಚೀನಾದ ಆಟಗಾರ ಶಿ ಯೂಕಿ ಬಲಿಷ್ಠವಾಗಿದ್ದರು’ ಎಂದರು.

ಸಿಂಧುಗೆ ₹ 10 ಲಕ್ಷ, ಸಮೀರ್‌ಗೆ ₹ 3 ಲಕ್ಷ
ನವದೆಹಲಿ:
ಪಿ.ವಿ. ಸಿಂಧು ಅವರಿಗೆ ₹ 10 ಲಕ್ಷ ಮತ್ತು ಪುರುಷರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದ ಸಮೀರ್ ಅವರಿಗೆ ಮೂರು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಬಿಎಐನ ಕಾರ್ಯದರ್ಶಿ ಅಜಯ್‌ ಕೆ ಸಿಂಘಾನಿಯಾ ತಿಳಿಸಿದ್ದಾರೆ.

*
ನನ್ನ ಮಗಳು ಸಿಂಧು ಈಗ ‘ಚಿನ್ನದ ಹುಡುಗಿ’. ಸಮಚಿತ್ತ ಮತ್ತು ತಾಳ್ಮೆಯ ಆಟದ ಮೂಲಕ ಅಮೋಘ ಜಯ ಸಾಧಿಸಿದ್ದಾರೆ.
– ಪಿ.ವಿ. ರಮಣ, ಸಿಂಧು ತಂದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು