ಆಡಳಿತ ಸುಧಾರಣೆಯೇ ಮೂಲ ಮಂತ್ರ

7
ಕೆಎಸ್‌ಬಿಎ ಚುನಾವಣೆಯಲ್ಲಿ ಪಂಕಜ್‌ ಅಡ್ವಾಣಿ ಸ್ಪರ್ಧೆ

ಆಡಳಿತ ಸುಧಾರಣೆಯೇ ಮೂಲ ಮಂತ್ರ

Published:
Updated:
Deccan Herald

ಬೆಂಗಳೂರು: ‘ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ ಕ್ರೀಡೆಯ ಅಭಿವೃದ್ಧಿ ಹಾಗೂ ಆಡಳಿತದಲ್ಲಿ ಸುಧಾರಣೆ ತರುವ ಉದ್ದೇಶದಿಂದ ಕರ್ನಾಟಕ ರಾಜ್ಯ ಬಿಲಿಯರ್ಡ್ಸ್‌ ಸಂಸ್ಥೆಯ (ಕೆಎಸ್‌ಬಿಎ) ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ’ ಎಂದು 19 ಬಾರಿಯ ವಿಶ್ವ ಚಾಂಪಿಯನ್‌ ಪಂಕಜ್‌ ಅಡ್ವಾಣಿ ತಿಳಿಸಿದರು.

ಗುರುವಾರ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪಂಕಜ್‌ ‘ಕೆಎಸ್‌ಬಿಎಯ ಸಹಕಾರ ಮತ್ತು ಪ್ರೋತ್ಸಾಹದಿಂದ ಈ ಕ್ರೀಡೆಯಲ್ಲಿ ಎತ್ತರದ ಸಾಧನೆ ಮಾಡಲು ಸಾಧ್ಯವಾಗಿದೆ. ಈಗ ಸಂಸ್ಥೆಯ ಆಡಳಿತ ಹದಗೆಟ್ಟಿದೆ. ಇದಕ್ಕೆ ಚುರುಕು ಮುಟ್ಟಿಸುವ ಕೆಲಸ ಆಗಬೇಕು. ಜೊತೆಗೆ ಯುವ ಆಟಗಾರರಿಗೆ ಅಗತ್ಯ ಪ್ರೋತ್ಸಾಹ ನೀಡಿ ಅವರಲ್ಲಿ ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ ಬಗೆಗೆ ಆಸಕ್ತಿ ಬೆಳೆಸುವಂತೆ ಮಾಡಬೇಕು’ ಎಂದರು.

‘ರಾಜ್ಯದಲ್ಲಿ ಬಿಲಿಯರ್ಡ್ಸ್‌ ಕ್ರೀಡೆಯ ಬೇರುಗಳನ್ನು ಇನ್ನಷ್ಟು ಆಳಕ್ಕಿಳಿಸಬೇಕು. ನನ್ನ ಗುರು ಅರವಿಂದ್‌ ಸವೂರ್‌ ಅವರು ಅಧ್ಯಕ್ಷ ಮತ್ತು ಜಯರಾಜ್‌ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ ಎಂಬ ವಿಷಯ ಕೇಳಿ ಸಂತಸವಾಯಿತು. ಅವರಿಗೆ ಕ್ರೀಡೆಯ ಬಗೆಗೆ ಅಪಾರ ಒಲವು ಮತ್ತು ಆಡಳಿತದ ಕುರಿತು ಅಗಾಧ ಅನುಭವ ಇದೆ. ಅವರಿಂದ ಬದಲಾವಣೆ ನಿರೀಕ್ಷಿಸಬಹುದು. ಅವರೊಂದಿಗೆ ಕೈಜೋಡಿಸಿದರೆ ಕ್ರೀಡೆಯ ವೈಭವವನ್ನು ಮರಳಿ ತರಬಹುದು ಎಂಬ ಆಲೋಚನೆ ಮೂಡಿದ್ದರಿಂದ ಈ ತೀರ್ಮಾನ ಕೈಗೊಂಡಿದ್ದೇನೆ’ ಎಂದು ಹೇಳಿದರು.

ಹಿರಿಯ ಆಟಗಾರ ಅರವಿಂದ್‌ ಸವೂರ್‌ ಮಾತನಾಡಿ ‘ ರಾಜ್ಯದಲ್ಲಿ ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ ಕ್ರೀಡೆಯ ಅಭಿವೃದ್ಧಿ ಕುಂಠಿತಗೊಂಡಿದೆ. ಸರಿಯಾದ ಪ್ರೋತ್ಸಾಹ ಸಿಗದೆ ಸಾಕಷ್ಟು ಮಂದಿ ಕ್ರೀಡೆಯಿಂದ ವಿಮುಖರಾಗಿದ್ದಾರೆ’ ಎಂದು ಆರೋಪಿಸಿದರು.

‘ರಾಜ್ಯದ ಆಟಗಾರರು ನಮ್ಮ ಬಳಿ ಬಂದು ಹಲವು ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ನೀವು ಅಧಿಕಾರಕ್ಕೆ ಬಂದರೆ ಎಲ್ಲರಿಗೂ ಒಳಿತಾಗುತ್ತದೆ ಎಂದು ಮನವಿ ಮಾಡಿದ್ದಾರೆ. ಈ ಕಾರಣದಿಂದಲೇ ನಾನು ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದೇನೆ’ ಎಂದು ತಿಳಿಸಿದರು.

‘ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಕರ್ನಾಟಕದ ಆಟಗಾರರ ಪ್ರಾಬಲ್ಯ ಕ್ಷೀಣಿಸುತ್ತಿದೆ. ಸರಿಯಾದ ಪ್ರೋತ್ಸಾಹ ಸಿಗದಿರುವುದರಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕ್ರೀಡಾಪಟುಗಳ ಸಮಸ್ಯೆಗಳನ್ನು ಆಲಿಸಿ ಅವುಗಳನ್ನು ಪರಿಹರಿಸಲು ನಾವು ಬದ್ಧರಿದ್ದೇವೆ. ಅಧಿಕಾರಕ್ಕೆ ಬಂದ ಕ್ಷಣವೇ ಎಲ್ಲವನ್ನೂ ಸರಿಪಡಿಸಿಬಿಡುತ್ತೇವೆ ಎಂದು ಹೇಳುತ್ತಿಲ್ಲ. ಹಂತ ಹಂತವಾಗಿ ಎಲ್ಲವನ್ನೂ ಬದಲಿಸುತ್ತೇವೆ’ ಎಂದು ನುಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !