ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಸೂರಿನಲ್ಲಿ 15 ಕ್ರೀಡೆಗಳಿಗೆ ತರಬೇತಿ

Last Updated 28 ಜೂನ್ 2020, 20:00 IST
ಅಕ್ಷರ ಗಾತ್ರ
ADVERTISEMENT
""
""
""

‘2002ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಅಫ್ರೋ ಏಷ್ಯನ್‌ ಕ್ರೀಡಾಕೂಟಕ್ಕೆ ಭಾರತ ತಂಡವನ್ನು ಆಯ್ಕೆ ಮಾಡಲು ಪಟಿಯಾಲದಲ್ಲಿ ಶಿಬಿರ ನಡೆದಿತ್ತು. ಅಲ್ಲಿ ಒಂದೇ ಸಂಕೀರ್ಣದಲ್ಲಿ ಒಲಿಂಪಿಕ್ಸ್‌ನ ಪ್ರಮುಖ ಕ್ರೀಡೆಗಳಿಗೆ ತರಬೇತಿ ಪಡೆಯಲು ಸೌಲಭ್ಯಗಳಿದ್ದವು. ಮೊದಲ ಬಾರಿಗೆ ರಾಷ್ಟ್ರೀಯ ತಂಡದ ಶಿಬಿರದಲ್ಲಿದ್ದ ಕಾರಣ ನನಗೆ ಎಲ್ಲವೂ ಹೊಸತು. ಇಂಥ ಸೌಲಭ್ಯಗಳು ನಮ್ಮೂರಿನ ಕ್ರೀಡಾಪಟುಗಳಿಗೂ ಸ್ಥಳೀಯವಾಗಿಯೇ ಸಿಗಬೇಕು ಎಂದು ಆಗಲೇ ಕನಸು ಕಂಡಿದ್ದೆ. ಆ ಕನಸು ಈಗ ನನಸಾಗಿದೆ...’

ಹುಬ್ಬಳ್ಳಿಯಲ್ಲಿ 18 ಕ್ರೀಡೆಗಳಿಗೆ ಒಂದೇ ಸೂರಿನಡಿ ವೃತ್ತಿಪರ ತರಬೇತಿ ಕೊಡಲು ಸೌಲಭ್ಯಗಳನ್ನು ಕಲ್ಪಿಸಿರುವ ಅಂತರರಾಷ್ಟ್ರೀಯ ಮಾಜಿ ಅಥ್ಲೀಟ್‌ ವಿಲಾಸ್‌ ನೀಲಗುಂದ ಹೀಗೆ ಹೇಳಿ ಮೈದಾನದಲ್ಲಿ ತಮ್ಮ ಸುತ್ತಲೂ ತರಬೇತಿಯಲ್ಲಿ ತೊಡಗಿದ್ದ ಯುವ ಕ್ರೀಡಾಪಟುಗಳನ್ನು ನೋಡಿದರು. ಅವರ ಮೊಗದಲ್ಲಿ ಸಾರ್ಥಕ ಭಾವ ಎದ್ದು ಕಾಣುತ್ತಿತ್ತು.

ಅಥ್ಲೆಟಿಕ್‌ ಕೋಚ್‌ ವಿಲಾಸ್, ರಣಜಿ ಟೂರ್ನಿಯಲ್ಲಿ ರೈಲ್ವೆ ತಂಡದಲ್ಲಿ ಆಡಿರುವ ಧಾರವಾಡದ ನಿತಿನ್‌ ಭಿಲ್ಲೆ, ಅನುಭವಿ ಕ್ರಿಕೆಟ್‌ ಕೋಚ್‌ಗಳಾದ ಶಿವಾಜಿ ಒಡ್ಡರ್, ಶಶಿಧರ ಸಿಂಧೆ ತರಬೇತಿಯ ಉಸ್ತುವಾರಿ ನೋಡಿಕೊಳ್ಳುತ್ತಾರೆ. ರಾಕೇಶ ಅಚ್ಚಳ್ಳಿ ಮತ್ತು ವಿವೇಕ ಪರಮಾಧಿ ಸಲಹೆಗಾರರಾಗಿದ್ದಾರೆ. ಇವರೆಲ್ಲರೂ ಸೇರಿ 30 ಗುಂಟೆ ಜಾಗದಲ್ಲಿರುವ ‘ಚೈತನ್ಯ ಸ್ಪೋರ್ಟ್ಸ್ ಫೌಂಡೇಷನ್‌’ ನೋಡಿಕೊಳ್ಳುತ್ತಾರೆ.

ಈ ಕ್ರೀಡಾ ಕೇಂದ್ರದಲ್ಲಿ ರೋಪ್‌ ಕ್ಲೈಂಬಿಂಗ್‌, ಶೂಟಿಂಗ್‌, ಬ್ಯಾಡ್ಮಿಂಟನ್‌, ಕರಾಟೆ, ಜಿಮ್‌, ಟೇಬಲ್‌ ಟೆನಿಸ್‌, ಟೆನಿಸ್‌, ಕ್ರಾಸ್‌ ಫಿಟ್‌ ಟ್ರೈನಿಂಗ್‌, ಕಬಡ್ಡಿ, ಬಾಕ್ಸ್‌ ಕ್ರಿಕೆಟ್‌, ಹ್ಯಾಂಡ್‌ ಕೊಕ್ಕೊ, ಸ್ಯಾಂಡ್‌ ವಾಲಿಬಾಲ್‌, ಅಥ್ಲೆಟಿಕ್ಸ್‌, ಫುಟ್‌ಬಾಲ್‌, ಕ್ರಿಕೆಟ್‌, ವಾಲ್‌ ಕ್ಲೈಂಬಿಂಗ್‌, ವಾಲಿಬಾಲ್‌, ಯೋಗ, ಎರೋಬಿಕ್‌ ಮತ್ತು ಅಟ್ಯಾಪಟ್ಯಾ ಹೀಗೆ ಪ್ರಮುಖ ಕ್ರೀಡೆಗಳಿಗೆ ತರಬೇತಿ ನೀಡಲಾಗುತ್ತದೆ. ಉತ್ತರ ಕರ್ನಾಟಕದಲ್ಲಿ ಕ್ರೀಡಾಪಟುಗಳೇ ಸೇರಿ ವೃತ್ತಿಪರ ತರಬೇತಿಗೆ ಕ್ರೀಡಾ ಸಂಕೀರ್ಣ ಆರಂಭಿಸಿದ್ದು ಇದೇ ಮೊದಲು.

ಫಿಟ್‌ನೆಸ್‌ಗಾಗಿ ವಾಲ್‌ ಬಾರ್‌ ಅಭ್ಯಾಸದಲ್ಲಿ ತೊಡಗಿದ್ದ ಅಥ್ಲೀಟ್‌ಗಳು. ಚಿತ್ರ- ತಾಜುದ್ದೀನ್‌ ಆಜಾದ್‌

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಧಾರವಾಡದ ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣದಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ಹೊಂದಿದೆ. ಇದನ್ನು ಹೊರತು ಪಡಿಸಿದರೆ ಜಿಲ್ಲೆಯಲ್ಲಿ ಒಂದೂ ಸಿಂಥೆಟಿಕ್‌ ಟ್ರ್ಯಾಕ್‌ ಇಲ್ಲ. ಬಹಳಷ್ಟು ಜನರಿಗೆ ಸಿಂಥೆಟಿಕ್‌ನ ಕಲ್ಪನೆಯೂ ಇಲ್ಲ! ಆದ್ದರಿಂದ ವಿಲಾಸ್‌ ತಮ್ಮ ಫೌಂಡೇಷನ್‌ನಲ್ಲಿ 70ರಿಂದ 80 ಮೀಟರ್‌ ದೂರದ ಟ್ರ್ಯಾಕ್ ನಿರ್ಮಿಸಿದ್ದಾರೆ. ಅಥ್ಲೆಟಿಕ್ಸ್‌ ತರಬೇತಿ ಪಡೆಯಲು 80 ಕ್ರೀಡಾಪಟುಗಳು ಬರುತ್ತಾರೆ. ಬ್ಯಾಡ್ಮಿಂಟನ್‌, ಕ್ರಿಕೆಟ್‌, ಶೂಟಿಂಗ್‌ ಕ್ರೀಡಾಪಟುಗಳ ಸಂಖ್ಯೆಯೂ ಹೆಚ್ಚಿದೆ.

ಕ್ರಿಕೆಟಿಗ ನಿತಿನ್‌ ಭಿಲ್ಲೆ ರೈಲ್ವೆ ತಂಡದ ಪರ 42 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿದ್ದಾರೆ. ಯುವ ಕ್ರಿಕೆಟಿಗರಿಗೆ ಅವರು ತರಬೇತಿ ನೀಡುತ್ತಾರೆ. ಕ್ರಿಕೆಟ್‌ಗಾಗಿ ನಾಲ್ಕು ನೆಟ್ಸ್‌ಗಳನ್ನು ಹಾಕಲಾಗಿದೆ. ಫುಟ್‌ಬಾಲ್‌ ಮತ್ತು ಹಾಕಿ ಆಡಲು ಕೃತಕ ಟರ್ಫ್‌ ಸೌಲಭ್ಯವಿದೆ.

ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಬೇಕು ಎನ್ನುವುದು ಪ್ರತಿ ಕ್ರೀಡಾಪಟುವಿನ ಕನಸು. ಆದರೆ ನಮ್ಮ ಭಾಗದಲ್ಲಿ ಪ್ರತಿಭಾನ್ವಿತ ಕ್ರೀಡಾಪಟುಗಳಿದ್ದರೂ ಕುಟುಂಬದ ತೊಂದರೆ, ಹಣಕಾಸಿನ ಸಮಸ್ಯೆಗಳ ಕಾರಣಕ್ಕೆ ಬಹಳಷ್ಟು ಕ್ರೀಡಾಪಟುಗಳಿಗೆ ಊರು ಬಿಟ್ಟು ಹೋಗಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಅವರಿಗೆ ಅಂತರರಾಷ್ಟ್ರೀಯ ಗುಣಮಟ್ಟದ ತರಬೇತಿ ಗಗನ ಕುಸುಮ. ಈ ಕೊರತೆ ನೀಗಿಸುವ ಸಲುವಾಗಿಯೇ ಕ್ರೀಡಾ ಅಕಾಡೆಮಿ ಆರಂಭಿಸಿದ್ದೇನೆ. ಒಲಿಂಪಿಕ್ಸ್‌ ಅರ್ಹತೆಗೆ ಅಗತ್ಯವಾಗಿ ಬೇಕಾದ ತರಬೇತಿ ನೀಡುವ ಗುರಿ ನನ್ನದು. ಈ ಭಾಗದ ಕ್ರೀಡಾಪಟುಗಳ ಒಲಿಂಪಿಕ್ಸ್‌ ಕನಸಿಗೆ ನನ್ನ ಕ್ರೀಡಾ ಕೇಂದ್ರವೇ ಮೊದಲ ಹೆಜ್ಜೆಯಾಗಬೇಕು ಎಂದು ವಿಲಾಸ್‌ ಭವಿಷ್ಯದ ಕನಸುಗಳನ್ನು ಹಂಚಿಕೊಂಡರು.

ತರಬೇತುದಾರ ವಿಲಾಸ್

ವಿಲಾಸ್ ಸಾಧನೆಯ ಹೆಜ್ಜೆ ಗುರುತು

ಮೂಲತಃ ಗದಗ ಜಿಲ್ಲೆಯ ಮುಳುಗುಂದದ ವಿಲಾಸ್‌ ನೀಲಗುಂದ 2004ರಲ್ಲಿ ಪಾಕಿಸ್ತಾನದಲ್ಲಿ ನಡೆದಿದ್ದ ಸ್ಯಾಫ್‌ ಕ್ರೀಡಾಕೂಟದ 100 ಮೀಟರ್‌ ಓಟದಲ್ಲಿ ಬೆಳ್ಳಿ, 4X100 ಮೀ. ರಿಲೆಯಲ್ಲಿ ಚಿನ್ನದ ಪದಕ ಜಯಿಸಿದ್ದರು.

ರೈಲ್ವೆಯಲ್ಲಿ ಉದ್ಯೋಗಕ್ಕೆ ಸೇರಿದ ಅವರು 2009ರಲ್ಲಿ ಪುಣೆಯಲ್ಲಿ ನಡೆದಿದ್ದ ವಿಶ್ವ ರೈಲ್ವೆ ಕ್ರೀಡಾಕೂಟದ 200 ಮೀ. ಓಟದಲ್ಲಿ ಬೆಳ್ಳಿ, 4X100 ಮೀ. ರಿಲೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು. 2002ರಿಂದ 2010ರ ಅವಧಿಯಲ್ಲಿ 15 ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಆರು ಪದಕಗಳನ್ನು ಜಯಿಸಿದ್ದಾರೆ. ರಾಷ್ಟ್ರೀಯ ಟೂರ್ನಿಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ 20ಕ್ಕೂ ಹೆಚ್ಚು ಪದಕಗಳ ಒಡೆಯರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT