ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿ ಹಿಡಿದ ಕೈ ಪರಿವರ್ತನೆಯ ದೀವಿಗೆ ಹಿಡಿದುದು...

Last Updated 22 ಡಿಸೆಂಬರ್ 2018, 19:46 IST
ಅಕ್ಷರ ಗಾತ್ರ

ಜಾತಿ ಅಟ್ಟಹಾಸ, ರಕ್ತಸಿಕ್ತ ರಾಜಕಾರಣ, ಭೂಮಾಲೀಕತ್ವದ ಪ್ರತಿರೋಧ ಸಂಘರ್ಷ ಅವಿಭಜಿತ ಆಂಧ್ರಪ್ರದೇಶ – ತೆಲಂಗಾಣ ನೆಲದ ವಿಶೇಷ ಗುಣ. ಇಂತಹ ದಿಟ್ಟ ನಾಡಿನಲ್ಲಿ ‘ಶಿಕ್ಷಣ ಕ್ರಾಂತಿ’ಯೂ ಸದ್ದಿಲ್ಲದೆ ಸಾಗಿದೆ. ‘ಅರಳಲಿ ಹೂಗಳು ನೂರಾರು, ನಡೆಯಲಿ ವಿಚಾರ ಸಂಘರ್ಷ ಸಾವಿರಾರು’ ಎನ್ನುವಂತೆ ತೆಲಂಗಾಣ ಸರ್ಕಾರದ ವಸತಿ ಶಾಲೆಗಳು ಬಡ ಮಕ್ಕಳ ಶಿಕ್ಷಣದ ಅಭ್ಯುದಯಕ್ಕೆ ಊರುಗೋಲಾಗಿ ನಿಂತಿವೆ. ಮೇಲಾಗಿ; ಸಾಮಾಜಿಕ ನ್ಯಾಯದ ಕೈದೀವಿಗೆಯಂತೆ ಕೆಲಸ ಮಾಡುತ್ತಿವೆ.

ಹೈದರಾಬಾದ್‌ನ ಹಯಾತ್‌ನಗರದ ವಸತಿ ಶಾಲೆಗೆ ಭೇಟಿ ನೀಡಿದಾಗ ಸೂರ್ಯ ಪಡುವಣ ದಿಕ್ಕಿನತ್ತ ಜಾರುತ್ತಿದ್ದ. ಸಂಜೆಯ ವ್ಯಾಯಾಮ ಮುಗಿಸಿ ಶಾಲೆಯೊಳಗೆ ಬಂದ ವಿದ್ಯಾರ್ಥಿಗಳು ಏಕಸ್ವರದಲ್ಲಿ ‘ಜೈಭೀಮ್ ವಂದನೆ’ ಸಲ್ಲಿಸಿದಾಗ ಈ ಶಾಲೆಗಳದ್ದು ಬೇರೆಯೇ ಸ್ವರೂಪ ಎನ್ನುವುದು ಮನದಟ್ಟಾಯಿತು. ವಿದ್ಯಾರ್ಥಿಗಳ ವೈಚಾರಿಕ ನಿಲುವು, ವಿವೇಚನೆ, ವಿಷಯ ಪರಿಣತಿ ಕಂಡು ಭೇಷ್‌ ಎನಿಸಿತು.

ನಗರದ ಹೊರವಲಯ ಷೇಕ್‌‍‍‍‍ಪೇಟೆ ಶಾಲೆಯಲ್ಲಿ ಪ್ರಾಂಶುಪಾಲ ವೆಂಕಟೇಶ್ವರಾವ್ ಸಹೋದ್ಯೋಗಿ ಶಿಕ್ಷಕರೊಂದಿಗೆ ಮಕ್ಕಳ ನಡುವೆ ಕುಳಿತಿದ್ದರು. 10ನೇ ತರಗತಿ ವಿದ್ಯಾರ್ಥಿ ಕಿರಣ್ ಮತದಾನದ ಪ್ರಾತ್ಯಕ್ಷಿಕೆ ಬಗ್ಗೆ ವಿವರಿಸುತ್ತಿದ್ದ. ಅರಳು ಹುರಿದಂತೆ ಮಾತನಾಡುವ ಇಂಗ್ಲಿಷ್ ಭಾಷೆ ಮೇಲಿನ ಹಿಡಿತ, ವಿಷಯ ಜ್ಞಾನ, ಸಹಪಾಠಿಗಳು ಕೇಳುತ್ತಿದ್ದ ಪ್ರಶ್ನೆ, ಸಂವಾದ ಕಂಡು ಶಿಕ್ಷಕರ ಮೊಗದಲ್ಲಿ ಎಂಥದ್ದೋ ಸಂತಸ ನಲಿದಾಡುತ್ತಿತ್ತು. ‘ಪ್ರಭುತ್ವದ ಈ ವಸತಿ ಶಾಲೆಗಳಿಗೆ ಸೇರಲು ಶಾಸಕರು, ಸಚಿವರು ಶಿಫಾರಸು ಮಾಡುತ್ತಾರೆ. ಪ್ರವೇಶ ಪರೀಕ್ಷೆ ಪಡೆದು ಪಾಸಾದರೂ ಸೀಟ್ ಸಿಗುವುದೇ ಕಷ್ಟ’ ಎಂದ ಪ್ರಾಂಶುಪಾಲರ ಮಾತು ಉತ್ಪ್ರೇಕ್ಷೆ ಎಂದೆನಿಸಲಿಲ್ಲ.

ತೆಲಂಗಾಣ ರಾಜ್ಯದ ಈ ಶಿಕ್ಷಣ ಸಂಸ್ಥೆಗಳಿಗೆ ದಾಖಲಾಗುತ್ತಿರುವ ಮಕ್ಕಳು ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದವರು. ಪರಿಶಿಷ್ಟ ಜಾತಿಗೆ ಸೇರಿದ 268 ವಸತಿ ಶಾಲೆಗಳು ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ 90 ಶಾಲೆಗಳು ಈ ಪ್ರಾಂತ್ಯದ ವ್ಯಾಪ್ತಿಯಲ್ಲಿ ಇವೆ. ಪರಿಶಿಷ್ಟ ಜಾತಿಯವರಿಗೆ ಶೇ 75, ಉಳಿದ ಶೇ 25ರಷ್ಟು ಸ್ಥಾನ ಇತರೆ ಸಮುದಾಯ ವಿದ್ಯಾರ್ಥಿಗಳಿಗೆ ಮೀಸಲು. ಪ್ರವೇಶ ಪರೀಕ್ಷೆ ಬರೆದು 5ನೇ ತಗರತಿಗೆ ಸೇ‍ರ್ಪಡೆಯಾಗುವ ವಿದ್ಯಾರ್ಥಿ/ನಿ ಪಿಯುವರೆಗೂ ಕಲಿಯಬಹುದು. ವಿದ್ಯಾರ್ಥಿನಿಯರಿಗಾಗಿಯೇ ಪ್ರತ್ಯೇಕ ಪದವಿ ಕಾಲೇಜುಗಳನ್ನು ತೆರೆಯಲಾಗಿದೆ.

‘ಆಕಾಶದ ಎತ್ತರಕ್ಕೆ ಕೈ ಚಾಚು ಅದಕ್ಕೆ ಪರಿಮಿತಿಯೇ ಇಲ್ಲ; ಹಾಗೆಯೇ ಜ್ಞಾನ ಸಂಪಾದನೆಗೂ ಪರಿಮಿತಿಯೇ ಇಲ್ಲ’ ಎನ್ನುವ ಧ್ಯೇಯ ವಾಕ್ಯ ಈ ವಸತಿ ಶಾಲೆಗಳದ್ದು. ಆಕಾಶದ ಅನಂತಕ್ಕೆ ಮೇಲ್ಮುಖ ಮಾಡಿದ ಅಂಗೈ ಈ ಶಾಲೆಗಳ ಲಾಂಛನ. ಬುದ್ಧ, ಬಾಬಾಸಾಹೇಬ್ ಅಂಬೇಡ್ಕರ್, ಅಕ್ಷರದವ್ವ ಸಾವಿತ್ರಿ ಬಾ‌ಯಿ ಫುಲೆ ಸ್ಮರಿಸುವ ತೆಲುಗಿನಲ್ಲಿ ರಚಿತ ಸ್ವಾಭಿಮಾನದ ಗೀತೆ ‘ಬುದ್ಧನಿ ಜ್ಞಾನ ಬೋಧನಂ /ಬಾಬಾ ಸಾಹೇಬಲ ಬಿಡ್ಡಲುಮು’ ಎಂದು ಸಾಗುವ ಆತ್ಮಗೌರವದ ಹಾಡು ಪ್ರತಿದಿನದ ಶಾಲೆ ಆರಂಭದ ಪ್ರಾರ್ಥನೆ ಗೀತೆ.

ಇಲ್ಲಿ ಎಲ್ಲವೂ ಕ್ರಾಂತಿಕಾರಕ ನಿಲುವುಗಳೇ! ಸರ್ಕಾರದ ಎಲ್ಲ ವಸತಿ ಶಾಲೆಗಳನ್ನು ತೆಲುಗು ಮಾಧ್ಯಮದಿಂದ ಇಂಗ್ಲಿಷ್‌ ಮಾಧ್ಯಮವಾಗಿ ಪರಿವರ್ತಿಸಲಾಗಿದೆ. ಭಾಷಾ ಮಾಧ್ಯಮ ವಿಷಯವಾಗಿ ಆರಂಭದಲ್ಲಿ ವಿರೋಧ ವ್ಯಕ್ತವಾದರೂ ನಂತರದ ಬೆಳವಣಿಗೆ ಕಂಡು ಚಳವಳಿಗಾರರು ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ತೆಲುಗು ಮಾಧ್ಯಮದಲ್ಲಿ ಬೋಧಿಸುತ್ತಿದ್ದ ಶಿಕ್ಷಕ ವರ್ಗದಿಂದಲೂ ಆರಂಭದಲ್ಲಿ ಪ್ರತಿರೋಧ ವ್ಯಕ್ತವಾಗುತ್ತದೆ. ನಂತರ ಸರ್ಕಾರ ಶಿಕ್ಷಕರಿಗೆ ಹೊಸದಾಗಿ ತರಬೇತಿ ನೀಡಿ ಇಂಗ್ಲಿಷ್‌ ಮಾಧ್ಯಮದಲ್ಲಿ ಬೋಧಿಸಲು ಸಜ್ಜುಗೊಳಿಸಿದೆ.

ವಿದ್ಯಾರ್ಥಿನಿಯೊಬ್ಬರನ್ನು ಅಭಿನಂದಿಸಿದ ಡಾ.ಆರ್‌.ಎಸ್.ಪ್ರವೀಣ್ ಕುಮಾರ್
ವಿದ್ಯಾರ್ಥಿನಿಯೊಬ್ಬರನ್ನು ಅಭಿನಂದಿಸಿದ ಡಾ.ಆರ್‌.ಎಸ್.ಪ್ರವೀಣ್ ಕುಮಾರ್

ಎಲ್ಲಾ ಶಾಲೆಗಳಲ್ಲೂ ಅಂತರರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಇದೆ. ಪಠ್ಯದ ಜತೆಗೆ ಬದುಕಿಗೆ ಬೇಕಾದ ಕೌಶಲಗಳನ್ನು ಕಲಿಸಲಾಗುತ್ತದೆ. ಜನರ್ಲಿಸ್ಟ್‌ ಆಗುವ ಆಸಕ್ತಿ ಇರುವವರಿಗೆ ‍ಮೊದಲು ಓದುವ ಹವ್ಯಾಸ ಬೆಳೆಸಿಕೊಳ್ಳಲು ಪ್ರೋತ್ಸಾಹ ನೀಡಲಾಗುತ್ತದೆ. ನಾಟಕ, ನೃತ್ಯ, ಸಂಗೀತ, ಈಜು, ಕರಾಟೆ, ಟೇಕ್ವಾಂಡೊ, ಕುದುರೆ ಸವಾರಿ ಹೀಗೆ; ವಿದ್ಯಾರ್ಥಿಯ ಆಸಕ್ತಿಗೆ ತಕ್ಕಂತೆ ತರಬೇತಿಗೆ ಅವಕಾಶವಿದೆ.

ವಿದ್ಯಾರ್ಥಿಗಳ ಆರೋಗ್ಯದ ಮೇಲೆ ನಿಗಾ ಇಡಲು ಪ್ರತಿ ಶಾಲೆಯಲ್ಲೂ ಒಬ್ಬ ನರ್ಸ್ ಇರುತ್ತಾರೆ. ಊಟದ ಮೆನುವಿನಲ್ಲಿ ಮೊಟ್ಟೆ, ಮಾಂಸ, ತರಕಾರಿ ನಿಗದಿತ ಪ್ರಮಾಣದಲ್ಲಿ ನೀಡಿ ಪೌಷ್ಟಿಕತೆ ಕಾಪಾಡುವ ಜವಾಬ್ದಾರಿ ಶಾಲಾ ಶಿಕ್ಷಕರದ್ದು. ವಿದ್ಯಾರ್ಥಿಗಳ ಪೋಷಕರಿಗೆ ಆಗಾಗ ಕಾರ್ಯಾಗಾರಗಳನ್ನು ಹಮ್ಮಿಕೊಂಡು ಮಕ್ಕಳ ಕಲಿಕೆಗೆ ಪೂರಕವಾಗಿ ವರ್ತಿಸುವ ಜವಾಬ್ದಾರಿ ಅರ್ಥ ಮಾಡಿಸಲಾಗುತ್ತದೆ.

ಸಣ್ಣ ಪ್ರಾಯದಲ್ಲೇ ಮೌಂಟ್‌ ಎವರೆಸ್ಟ್‌ ಏರಿ ಸಾಧನೆ ಮಾಡಿರುವ ಪೂರ್ಣಾ ಇಲ್ಲಿನ ವಸತಿ ಶಾಲೆಯೊಂದರ ಬಡ ವಿದ್ಯಾರ್ಥಿನಿ.‌ ಸ್ಕೈ ಡೈವ್‌ನಲ್ಲಿ ಆಸಕ್ತಿ ಹೊಂದಿದ್ದ ವಿದ್ಯಾರ್ಥಿನಿ ಸುಷ್ಮಾ ಅನಾಥ ಕೂಸು. ಅಮೆರಿಕದಲ್ಲಿ ತರಬೇತಿ ಪಡೆದು ಬಂದಿದ್ದಾರೆ. ಹೀಗೆ; ಅದೆಷ್ಟೋ ಬಡ ಕುಸುಮಗಳು ಅರಳಿ ನಿಂತ ಉದಾಹರಣೆಗಳಿವೆ. ದೆಹಲಿ, ಮುಂಬೈ, ಕಾನ್ಪುರ, ಚೆನ್ನೈನಲ್ಲಿರುವ ಐಐಟಿ, ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯ, ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ ಸೇರಿದಂತೆ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು ಸೇರಿದ ಸಾಧಕರಿದ್ದಾರೆ. ಐಎಎಸ್‌, ಐಪಿಎಸ್‌ ಅಧಿಕಾರಿಗಳಾಗಿ ಜನಸೇವೆ ಮಾಡಬೇಕೆಂಬ ತುಡಿತ ಹೊಂದಿರುವ ಕುವರ– ಕುವರಿಯರೂ ಇದ್ದಾರೆ.

ನಕ್ಸಲ್‌ ಉಪಟಳದ ಒಡಿಸ್ಸಾದ ಗಡಿಭಾಗ, ದಟ್ಟ ಕಾನನದ ಅದಿಲಾಬಾದ್‌ ಸೇರಿದಂತೆ ತೆಲಂಗಾಣದ ಅತಿ ಹಿಂದುಳಿದ ಪ್ರದೇಶಗಳಿಗೆ ಸೇರಿದ ಕೂಲಿಕಾರ್ಮಿಕ‍ ಪರಿಶಿಷ್ಟರು, ಅದಿವಾಸಿ ಜನರ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಈ ಶಾಲೆಗಳಿಗೆ ದಾಖಲಾಗುತ್ತಿದ್ದಾರೆ. ಭೂಮಾಲೀಕರ ದಬ್ಬಾಳಿಕೆ, ಪೊಲೀಸ್‌ ದೌರ್ಜನ್ಯದಿಂದ ನೊಂದಿರುವ ಈ ಭಾಗದ ಜನರು, ತಮ್ಮ ಮಕ್ಕಳು ಶಿಕ್ಷಣದ ಮೂಲಕವಾದರೂ ಹೊಸ ಮನ್ವಂತರಕ್ಕೆ ಒಡ್ಡಿಕೊಳ್ಳಲಿ ಎನ್ನುವ ತವಕ ಅವರದ್ದು.

ವಿದ್ಯಾರ್ಥಿನಿಯಿಂದ ತಮಟೆ ಪ್ರದರ್ಶನ
ವಿದ್ಯಾರ್ಥಿನಿಯಿಂದ ತಮಟೆ ಪ್ರದರ್ಶನ

ಪ್ರೇರಕ ಶಕ್ತಿ

ಸಾಮಾನ್ಯ ಸ್ಥಿತಿಯಲ್ಲಿದ್ದ ಇಲ್ಲಿನ ಸರ್ಕಾರದ ವಸತಿ ಶಾಲೆಗಳನ್ನು ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಮಾದರಿಯಾಗಿ ರೂಪಿಸಿರುವ ಪ್ರೇರಕ ಶಕ್ತಿ ತೆಲಂಗಾಣದ ಐಪಿಎಸ್‌ ಅಧಿಕಾರಿ, ರಾಷ್ಟ್ರಪತಿ ಪದಕ ವಿಜೇತ ಡಾ.ಆರ್.ಎಸ್‌. ಪ್ರವೀಣ್‌ ಕುಮಾರ್. ವೈ.ಎಸ್‌. ರಾಜಶೇಖರ್‌ ರೆಡ್ಡಿ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಖಡಕ್‌ ಪೊಲೀಸ್ ಅಧಿಕಾರಿ ಆಗಿದ್ದ ಅವರು, ನಕ್ಸಲೀಯರನ್ನು ಸದೆಬಡೆಯುವ ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ಎಂದೇ ಹೆಸರಾಗಿದ್ದವರು. ಅವರ ಬಂದೂಕಿನ ಗುಂಡಿಗೆ ಬಲಿಯಾದ ನಕ್ಸಲೀಯರಿಗೆ ಲೆಕ್ಕವೇ ಇಲ್ಲ! ಮೆಹಬೂಬ್‌ನಗರ ಜಿಲ್ಲೆಯ ಕುಗ್ರಾಮವೊಂದರ ತಳಸಮುದಾಯದಿಂದ ಬಂದ ಅವರು, ಕಷ್ಟಕೋಟಲೆ ನಡುವೆ ಓದಿ ಐಪಿಎಸ್‌ ಅಧಿಕಾರಿಯಾದವರು. ವ್ಯವಸ್ಥೆ ಬದಲಾವಣೆಗಾಗಿ ನಕ್ಸಲಿಸಂನತ್ತ ಹೆಜ್ಜೆ ಇಟ್ಟ ತನ್ನದೇ ಸಮುದಾಯದ ಎಷ್ಟೋ ಮಂದಿಯನ್ನು ಎನ್‌ಕೌಂಟರ್ ಮಾಡಿದವರು!

ಪ್ರವೀಣ್‌ ಕುಮಾರ್‌ ಅವರ ತಾಯಿ ಬಾಲ್ಯದಲ್ಲಿ ಜೀತ ಕಾರ್ಮಿಕರು. ಹೇಗೋ ಶಾಲೆ ಕಲಿತು ಶಿಕ್ಷಕಿಯಾದರು. ಮಗನ ಪೊಲೀಸ್‌ ಕರ್ತವ್ಯದ ಹಿಂದಿರುವ ಅಪಾರ ಸಾವು– ನೋವು ಕಂಡು ಮಮ್ಮಲ ಮರುಗುತ್ತಾರೆ. ‘ಶೋಷಿತರು ಅವಮಾನ, ಅಸಹಾಯಕತೆಯಿಂದ ಬಿಡುಗಡೆ ಹೊಂದಲು ಶಿಕ್ಷಣದಿಂದ ಮಾತ್ರ ಸಾಧ್ಯ’ ಎಂದು ಪ್ರತಿಪಾದಿಸಿದ ಬಾಬಾಸಾಹೇಬ್‌ ಅಂಬೇಡ್ಕರ್ ಹಾದಿಯಲ್ಲಿ ಸಾಗಲು ಮಗನಿಗೆ ಪ್ರೇರೇಪಿಸುತ್ತಾರೆ.

‘ಈ ತಲೆಮಾರಿನ ಮಕ್ಕಳಿಗೆ ಸಮರ್ಪಕ ಶಿಕ್ಷಣ ನೀಡಿದರೆ ನಕ್ಸಲೀಯರಾಗಿ ಪ್ರಭುತ್ವದ ವಿರೋಧಿಗಳಾಗುವ ಬದಲು, ಸಮಾಜದ ಆಸ್ತಿಯಾಗುತ್ತಾರೆ’ ಎಂದು ತನ್ನ ತಾಯಿ ಹೇಳಿದ ಹಿತನುಡಿಯಿಂದ ಪ್ರವೀಣ್‌ ಕುಮಾರ್‌ ಮನ ಕಲುಕುತ್ತದೆ. ಐಪಿಎಸ್‌ ಅಧಿಕಾರಿ ಆಗಿದ್ದ ಅವರು, ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ, ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ ಸಂಸ್ಥೆಗೆ ಕಾರ್ಯದರ್ಶಿಯಾಗಿ ನಿಯೋಜನೆಗೊಳ್ಳುತ್ತಾರೆ.

ನಕ್ಸಲ್‌ ಪೀಡಿತ ಹಾಗೂ ಇತರ ಹಿಂದುಳಿದ ಪ್ರದೇಶದಲ್ಲಿದ್ದ ವಸತಿ ಶಾಲೆಗಳು ಈ ಹಿಂದೆ ಕಾನೂನು ಬಾಹಿರ ಚಟುವಟಿಕೆಗಳ ತಾಣಗಳಾಗಿರುತ್ತವೆ. ಪ್ರಭುತ್ವದ ಸಹಕಾರದೊಂದಿಗೆ ಈ ವಸತಿ ಶಾಲೆಗಳಿಗೆ ಮರುಜನ್ಮ ನೀಡುವ ಪಣತೊಟ್ಟು ಹತ್ತೇ ವರ್ಷದಲ್ಲೇ ಇಡೀ ವ್ಯವಸ್ಥೆ ಬದಲಿಸಿ ಹೊಸ ಮುನ್ನುಡಿ ಬರೆದಿದ್ದಾರೆ. ಬಡ ಮಕ್ಕಳು ಸಮಾಜದ ಬದಲಾವಣೆಗೆ ಹರಿಕಾರರಾಗಿ ಬೆಳೆಯಬೇಕೆಂಬ ಅವರ ತುಡಿತಕ್ಕೆ ಸರ್ಕಾರದ ಬೆಂಬಲವೂ ಇದೆ.

ವಿದ್ಯಾರ್ಥಿಗಳ ಪ್ರಶ್ನೋತ್ತರ ಮತ್ತು ಸಂವಾದದಲ್ಲಿ ಡಾ. ಆರ್.ಎಸ್. ಪ್ರವೀಣ್ ಕುಮಾರ್
ವಿದ್ಯಾರ್ಥಿಗಳ ಪ್ರಶ್ನೋತ್ತರ ಮತ್ತು ಸಂವಾದದಲ್ಲಿ ಡಾ. ಆರ್.ಎಸ್. ಪ್ರವೀಣ್ ಕುಮಾರ್

‘ಅಮೆರಿಕದ ಕಪ್ಪು ಮನುಜರ ವಿಮೋಚನೆಯ ಆಧುನಿಕ ಇತಿಹಾಸದಲ್ಲಿ ಬೂಕರ್‌ ಟಿ.ವಾಷಿಂಗ್ಟನ್ ಬದುಕು ವಿಶಿಷ್ಟವಾದದ್ದು. ಅವರು ಇತರ ಹೋರಾಟಗಾರರಂತೆ ಬೀದಿಗಳಿದು, ಭಾಷಣದ ಮೂಲಕ ಪ್ರೇರೇಪಿಸಿ ಜನ ಚಳವಳಿ ಹುಟ್ಟು ಹಾಕಿದವರಲ್ಲ. ಏಕಾಂಗಿಯಾಗಿ ಹೋರಾಡಿ ಸೆರೆವಾಸ ಅನುಭವಿಸಿದವರಲ್ಲ. ಬದಲು; ಕಪ್ಪು ಜನರ ಬದುಕಿನಲ್ಲಿ ರಚನಾತ್ಮಕ ಬದಲಾವಣೆ ತರಲು ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ನಂಬಿಕೆ ಇರಿಸಿ, ಗುರಿ ಸಾಧಿಸಿದ ಸಾಹಸಿ. ಅವರ ಬದುಕೇ ನನಗೆ ಪ್ರೇರಣೆ’ ಎನ್ನುತ್ತಾರೆ ಪ್ರವೀಣ್‌ ಕುಮಾರ್.

‘ಶತಮಾನಗಳ ಕಾಲ ದಲಿತರ ಐಡೆಂಟಿಟಿಯನ್ನು ಅವರ ಹೆಸರಿನಿಂದ ಗುರುತಿಸದೆ ಜಾತಿ ಸೂಚಕ ನಾಮಗಳಿಂದ ಕರೆಯಲಾಗುತ್ತಿತ್ತು. ಕೆಳಜಾತಿ ಜನರ ಹೆಸರಿನ ಹಿಂದೆ ನಾಯಿ, ಹಂದಿ, ಕತ್ತೆ, ಬೆಕ್ಕು ಇತ್ಯಾದಿ ಪ್ರಾಣಿಗಳ ಅಡ್ಡನಾಮದಿಂದ ಹೀಯಾಳಿಸಿ ಮಾತನಾಡುವ ಜನ ಈಗಲೂ ಅಂಧ್ರಪ್ರದೇಶ– ತೆಲಂಗಾಣದ ಪ್ರಾಂತ್ಯದಲ್ಲಿ ಇದ್ದಾರೆ. ಇದು ದೇಶದ ವಿವಿಧ ರಾಜ್ಯಗಳಿಗೂ ಅನ್ವಯಿಸುತ್ತದೆ’ ಎನ್ನುವುದು ಅವರ ಬೇಸರದ ನುಡಿ.

ದಲಿತರ ಬೌದ್ಧಿಕ ಬೆಳವಣಿಗೆಗೆ ‘ಶಿಕ್ಷಣವೇ ಶಕ್ತಿ’ಎಂದು ನಂಬಿದ್ದಾರೆ. ಈ ಹಾದಿಯಲ್ಲಿ ಅವರ ಪಯಣ ಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT