ಮಂಗಳವಾರ, ಜೂನ್ 22, 2021
28 °C
ರಾಷ್ಟ್ರೀಯ ಈಜು ಸ್ಪರ್ಧೆ: ಕರ್ನಾಟಕದ ಶಿವ ಅವರಿಗೆ ಬೆಳ್ಳಿ ಪದಕ

ಶ್ರೀಹರಿ ನಟರಾಜ್ ಕೂಟ ದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭೋಪಾಲ್: ಕರ್ನಾಟಕದ ಶ್ರೀಹರಿ ನಟರಾಜ್, ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು. 200 ಮೀಟರ್ಸ್ ಬ್ಯಾಕ್‌ಸ್ಟ್ರೋಕ್‌ನಲ್ಲಿ 2 ನಿಮಿಷ 2:29 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಅವರು ತಮ್ಮದೇ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು.

ತಿರುವನಂತಪುರದಲ್ಲಿ ಕಳೆದ ವರ್ಷ ನಡೆದಿದ್ದ ಚಾಂಪಿಯನ್‌ಷಿಪ್‌ನಲ್ಲಿ ಅವರು 2 ನಿಮಿಷ 2:37 ಸೆಕೆಂಡುಗಳಲ್ಲಿ ಗುರಿ ತಲುಪಿದ್ದರು. ಭಾನುವಾರದ ಸ್ಪರ್ಧೆಯಲ್ಲಿ ಬೆಳ್ಳಿ ಪದಕವೂ ಕರ್ನಾಟಕದ ಪಾಲಾಯಿತು. ಎಸ್‌.ಶಿವ 2 ನಿಮಿಷ 7:11 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಎಸ್‌ಎಸ್‌ಸಿಬಿಯ ಅರವಿಂದ ಮಣಿ ಕಂಚಿನ ಪದಕ ಗಳಿಸಿದರು.

ಪುರುಷರ 4x100 ಮೀಟರ್ಸ್ ಫ್ರೀಸ್ಟೈಲ್‌ನಲ್ಲೂ ಶ್ರೀಹರಿ ಚಿನ್ನ ಗಳಿಸಿದರು. ತನಿಷ್ ಜಾರ್ಜ್ ಮ್ಯಾಥ್ಯೂ, ಪೃಥ್ವಿ ಎಂ, ಶಿವ ಮತ್ತು ಶ್ರೀಹರಿ ಅವರನ್ನು ಒಳಗೊಂಡ ರಾಜ್ಯ ತಂಡ 3 ನಿಮಿಷ 30:45 ಸೆಕೆಂಡುಗಳಲ್ಲಿ ಅಂತಿಮ ಗೆರೆ ತಲುಪಿತು. ಎಸ್‌ಎಸ್‌ಸಿಬಿ ಮತ್ತು ಮಹಾರಾಷ್ಟ್ರ ತಂಡಗಳು ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದವು.

ಮಹಿಳೆಯರ 200 ಮೀಟರ್ಸ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಕರ್ನಾಟಕದ ಸುವನಾ ಭಾಸ್ಕರ್ ಬೆಳ್ಳಿ ಪದಕ ಗೆದ್ದರು. ಗುಜರಾತ್‌ನ ಮಾನಾ ಪಟೇಲ್‌ 2 ನಿಮಿಷ 21:74 ಸೆಕೆಂಡುಗಳಲ್ಲಿ ಗುರಿ ತಲುಪಿದರೆ ಸುವನಾ 2 ನಿಮಿಷ 22:30 ಸೆಕೆಂಡುಗಳನ್ನು ತೆಗೆದುಕೊಂಡರು.

ಪುರುಷರ 50 ಮೀಟರ್ಸ್ ಫ್ರೀಸ್ಟೈಲ್‌ನಲ್ಲಿ ಮಹಾರಾಷ್ಟ್ರದ ವೀರಧವಳ್ ಖಾಡೆ ತಮ್ಮದೇ ಹೆಸರಿನಲ್ಲಿದ್ದ ದಾಖಲೆಯನ್ನು ಉತ್ತಮಪಡಿಸಿಕೊಂಡರು. ಮಹಿಳೆಯರ 4x100 ಮೀಟರ್ಸ್ ಫ್ರೀಸ್ಟೈಲ್‌ನಲ್ಲೂ ಮಹಾರಾಷ್ಟ್ರ ತಂಡ ಕೂಟ ದಾಖಲೆ ಬರೆಯಿತು. ಆದರೆ ಮಹಿಳೆಯರ 400 ಮೀಟರ್ಸ್ ಮಿಡ್ಲೆಯಲ್ಲಿ ಪೊಲೀಸ್‌ ಇಲಾಖೆಯ ರಿಚಾ ಮಿಶ್ರಾ ತಮ್ಮ ಹೆಸರಿನಲ್ಲಿದ್ದ ದಾಖಲೆಯನ್ನು ಮೀರಲು ಸಾಧ್ಯವಾಗದೆ ನಿರಾಸೆ ಅನುಭವಿಸಿದರು.

ಎರಡನೇ ದಿನದ ಫಲಿತಾಂಶಗಳು: ‍ಪುರುಷರ 50 ಮೀಟರ್ಸ್ ಫ್ರೀಸ್ಟೈಲ್‌: ವೀರಧವಳ್ ಖಾಡೆ (ಮಹಾರಾಷ್ಟ್ರ)–1. ಕಾಲ: 22:44 ಸೆಕೆಂಡು (ಕೂಟ ದಾಖಲೆ), ವಿರಾಜ್ ಪ್ರಭು (ಆರ್‌ಎಸ್‌ಪಿಬಿ)–2, ಮಿಹಿರ್ ಆಂಬ್ರೆ (ಮಹಾರಾಷ್ಟ್ರ)–3; 200 ಮೀಟರ್ಸ್ ಬ್ಯಾಕ್‌ಸ್ಟ್ರೋಕ್: ಶ್ರೀಹರಿ ನಟರಾಜ್ (ಕರ್ನಾಟಕ)–1. ಕಾಲ: 2 ನಿಮಿಷ 2:29 ಸೆಕೆಂಡು (ಕೂಟ ದಾಖಲೆ), ಎಸ್‌.ಶಿವ (ಕರ್ನಾಟಕ)–2, ಅರವಿಂದ ಮಣಿ (ಎಸ್‌ಎಸ್‌ಸಿಬಿ)–3; 1500 ಮೀಟರ್ಸ್ ಫ್ರೀಸ್ಟೈಲ್‌: ಕುಶಾಗ್ರ ರಾವತ್ (ದೆಹಲಿ)–1. ಕಾಲ:15 ನಿಮಿಷ 41:45 ಸೆಕೆಂಡು (ಕೂಟ ದಾಖಲೆ), ಸುಶ್ರುತ್ ಎಸ್.ಕಾಪಸೆ (ಆರ್‌ಎಸ್‌ಪಿಬಿ)–2, ಅನೀಶ್‌ ಎಸ್.ಗೌಡ (ಕರ್ನಾಟಕ)–3; 4x100 ಮೀಟರ್ಸ್ ಫ್ರೀಸ್ಟೈಲ್‌: ಕರ್ನಾಟಕ (ತನಿಷ್‌, ಪೃಥ್ವಿ, ಶಿವ, ಶ್ರೀಹರಿ ನಟರಾಜ್)–1. ಕಾಲ: 3 ನಿಮಿಷ 30:45 ಸೆಕೆಂಡು, ಎಸ್‌ಎಸ್‌ಸಿಬಿ–2, ಮಹಾರಾಷ್ಟ್ರ–3.

ಮಹಿಳೆಯರ ವಿಭಾಗ: 200 ಮೀಟರ್ಸ್ ಬ್ಯಾಕ್‌ಸ್ಟ್ರೋಕ್‌: ಮಾನಾ ಪಟೇಲ್‌ (ಗುಜರಾತ್‌)–1. ಕಾಲ: 2 ನಿಮಿಷ 21:74 ಸೆಕೆಂಡು, ಸುವನಾ ಸಿ.ಭಾಸ್ಕರ್ (ಕರ್ನಾಟಕ)–2, ಸೌಬ್ರಿತಿ ಮಂಡಲ್ (ಪಶ್ಚಿಮ ಬಂಗಾಳ)–3; 400 ಮೀಟರ್ಸ್ ಮಿಡ್ಲೆ: ರಿಚಾ ಮಿಶ್ರಾ (ಪೊಲೀಸ್‌)–1. ಕಾಲ:5 ನಿಮಿಷ 5:49 ಸೆಕೆಂಡು, ಅಪೇಕ್ಷಾ ಫರ್ನಾಂಡಿಸ್ (ಮಹಾರಾಷ್ಟ್ರ)–2, ಶಕ್ತಿ (ತಮಿಳುನಾಡು)–3; 4x100 ಮೀಟರ್ಸ್ ಫ್ರೀಸ್ಟೈಲ್‌: ಮಹಾರಾಷ್ಟ್ರ–1. ಕಾಲ: 4 ನಿಮಿಷ 2:90 ಸೆಕೆಂಡು (ಕೂಟ ದಾಖಲೆ), ಕರ್ನಾಟಕ (ಸ್ಮೃತಿ ಮಹಾಲಿಂಗಂ, ಇಂಚರ, ಸುವನಾ ಭಾಸ್ಕರ್‌, ಖುಷಿ ದಿನೇಶ್) –2, ತಮಿಳುನಾಡು–3.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು