ಸೋಮವಾರ, ಮಾರ್ಚ್ 8, 2021
32 °C
ಕೊಲ್ಹಾರದ ಸಂಗಮೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರ ಹಿರಿಮೆ

ಕೊಕ್ಕೊದಲ್ಲಿ ರಾಷ್ಟ್ರಮಟ್ಟದ ಸಾಧನೆ..!

ಪ್ರಕಾಶ ಎನ್‌.ಮಸಬಿನಾಳ Updated:

ಅಕ್ಷರ ಗಾತ್ರ : | |

Deccan Herald

ಕೊಲ್ಹಾರ (ಬಸವನಬಾಗೇವಾಡಿ): ಪಟ್ಟಣದ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಸಂಗಮೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರ ತಂಡ, ಕೊಕ್ಕೊ ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟದ ಸಾಧನೆಗೈದಿದೆ. ಇದು ಈ ಭಾಗದ ಶಾಲೆಗಳ ವಿದ್ಯಾರ್ಥಿ ಸಮೂಹದ ಹುಬ್ಬೇರಿಸಿದೆ.

ಈ ಶಾಲೆಯಲ್ಲಿ ಪಠ್ಯದ ಜತೆಗೆ, ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ತೊಡಗಿಸುವ ಪರಿಣಾಮ ಈ ಸಾಧನೆ ಹೊರಹೊಮ್ಮಿದೆ. ಆಯಾ ವಿದ್ಯಾರ್ಥಿಯ ಆಸಕ್ತಿ, ಪ್ರತಿಭೆಗನುಗುಣವಾಗಿ ಪ್ರೋತ್ಸಾಹ ನೀಡಿದ ಫಲವಿದು ಎಂಬ ಮಾತು ಶಾಲಾ ಅಂಗಳವೂ ಸೇರಿದಂತೆ ಎಲ್ಲೆಡೆ ಅನುರಣಿಸುತ್ತಿದೆ.

2016ರಲ್ಲಿ ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದ ವಿದ್ಯಾಭಾರತಿ ಶಾಲೆಗಳ ರಾಷ್ಟ್ರಮಟ್ಟದ ಕೊಕ್ಕೊ ಪಂದ್ಯಾಟದಲ್ಲಿ ರಾಜಸ್ತಾನ ತಂಡವನ್ನು ಸೋಲಿಸುವ ಮೂಲಕ, ಈ ಶಾಲೆಯ ವಿದ್ಯಾರ್ಥಿನಿಯರು ಉತ್ತಮ ಆಟ ಪ್ರದರ್ಶಿಸಿ ಎಲ್ಲರ ಗಮನ ಸೆಳೆದಿದ್ದರು.

ನಂತರ ಎಸ್‌.ಜಿ.ಎಫ್‌.ಐ (ಸ್ಕೂಲ್‌ ಗೇಮ್ಸ್‌ ಫೆಡರೇಷನ್‌ ಆಫ್‌ ಇಂಡಿಯಾ) ಮಧ್ಯಪ್ರದೇಶದ ಇಂದೋರ್‌ನಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಕೊಕ್ಕೊ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡಿದ್ದೆವು ಎಂಬ ಹೆಮ್ಮೆ ಇಲ್ಲಿನ ಕ್ರೀಡಾಪಟು ವಿದ್ಯಾರ್ಥಿಗಳದ್ದು.

ದೈಹಿಕ ಶಿಕ್ಷಣ ಶಿಕ್ಷಕ ಮಲ್ಲಿಕಾರ್ಜುನ ಕುಬಕಡ್ಡಿ ಮಾರ್ಗದರ್ಶನದಲ್ಲಿ ಶಾಲೆಯ ಕ್ರೀಡಾಪಟುಗಳು ಬೆಳಿಗ್ಗೆ 6ರಿಂದ 8ಗಂಟೆಯವರೆಗೆ ಹಾಗೂ ಸಂಜೆ 5ರಿಂದ 6ಗಂಟೆಯವರೆಗೆ ನಿತ್ಯವೂ ತರಬೇತಿ ಪಡೆಯುತ್ತಿದ್ದಾರೆ. ರಜೆ ದಿನಗಳಲ್ಲಿ ವಿಶೇಷ ತರಬೇತಿ ನೀಡಲಾಗುತ್ತಿದೆ.

ಹೈದರಾಬಾದ್‌ನಲ್ಲಿ ಈಚೆಗೆ ನಡೆದ 2018–19ನೇ ಸಾಲಿನ ವಿದ್ಯಾಭಾರತಿ ಶಾಲೆಗಳ ದಕ್ಷಿಣ ಮಧ್ಯ ಕ್ಷೇತ್ರದ ಬಾಲ ವರ್ಗದ ಬಾಲಕಿಯರ ವಿಭಾಗದ ಕೊಕ್ಕೊ ಸ್ಪರ್ಧೆಯ ಅಂತಿಮ ಪಂದ್ಯದಲ್ಲಿ 7ನೇ ತರಗತಿ ವಿದ್ಯಾರ್ಥಿನಿಯರು ಆತಿಥೇಯ ಹೈದರಾಬಾದ್‌ ತಂಡವನ್ನು ಸೋಲಿಸಿ ರಾಷ್ಟ್ರ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿರುವುದು ಈ ಬಾರಿಯ ಕ್ರೀಡಾ ವಿಶೇಷ.

ಅ.22ರಂದು ರಾಜಸ್ತಾನದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಪಂದ್ಯಾವಳಿಗೆ ಶಾಲೆಯ ಅಂಗಳದಲ್ಲಿ ಬಿರುಸಿನ ತಾಲೀಮು ನಡೆದಿದೆ. ಇದೇ ತಂಡ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಪಂದ್ಯಾವಳಿಯಲ್ಲಿಯೂ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.

‘ಶಿಕ್ಷಕರ ಮಾರ್ಗದರ್ಶನದಲ್ಲಿ ಕೊಕ್ಕೊ ಪಂದ್ಯಾಟದಲ್ಲಿ, ರಾಷ್ಟ್ರ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತಿದೆ’ ಎಂದು ತಂಡದ ನಾಯಕಿ ಸೃಷ್ಟಿ ಕಾಖಂಡಕಿ ತಿಳಿಸಿದರು.

‘ಶಾಲಾ ಆಡಳಿತ ಮಂಡಳಿ, ಪಾಲಕರ ಸಹಕಾರದೊಂದಿಗೆ ಮುಖ್ಯ ಶಿಕ್ಷಕ ರಾಜಶೇಖರ ಉಮರಾಣಿ, ಶಿಕ್ಷಕರಾದ ಮಂಜುನಾಥ ಮುಳವಾಡ, ಯಲ್ಲಪ್ಪ ಶಿರೋಳ, ಗಿರೀಶ ಕುಲಕರ್ಣಿ, ಬಸವರಾಜ ತುಪ್ಪದ, ಬಲವಂತ ಹಿಕ್ಕನಗುತ್ತಿ ಸೇರಿದಂತೆ ಇತರರ ಮಾರ್ಗದರ್ಶನದಲ್ಲಿ ಮಕ್ಕಳ ಕ್ರೀಡಾಸಕ್ತಿ ಹೆಚ್ಚಿಸುವಂತಹ ಕಾರ್ಯ ನಡೆಯುತ್ತಿದೆ’ ಎಂದು ಸಂಸ್ಥೆಯ ಅಧ್ಯಕ್ಷ ಬಸಪ್ಪ ಗಿಡ್ಡಪ್ಪಗೋಳ, ಕಾರ್ಯದರ್ಶಿ ಶ್ರೀಶೈಲ ಪತಂಗಿ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು