ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಲ್ಫ್‌ ಚಾಂಪಿಯನ್‌ಷಿಪ್‌: ಮತ್ತೆ ಗರ್ಜಿಸಿದ ‘ಟೈಗರ್’!

Last Updated 4 ನವೆಂಬರ್ 2019, 5:31 IST
ಅಕ್ಷರ ಗಾತ್ರ

ಬೆನ್ನು ನೋವಿಗೆ ನಾಲ್ಕು ಬಾರಿ ಶಸ್ತ್ರಚಿಕಿತ್ಸೆಗಳು, ಹಲವು ಬಾರಿ ಮಂಡಿ ಶಸ್ತ್ರಚಿಕಿತ್ಸೆ, ವೈವಾಹಿಕ ಜೀವನದ ಬಿರುಗಾಳಿ, ಕಾನೂನು ಸಮರ ಇವೇ ಮೊದಲಾದ ಹಿನ್ನಡೆಗಳನ್ನು ದಾಟಿರುವ ಟೈಗರ್‌ ವುಡ್ಸ್‌ 2008ರ ನಂತರ ಯಾವುದೇ ‘ಮೇಜರ್‌’ ಟೂರ್ನಿಗಳಲ್ಲಿ ಯಶಸ್ಸು ಕಂಡಿರಲಿಲ್ಲ. 2013ರ ನಂತರ ಪ್ರಶಸ್ತಿಯ ಬರ ಅನುಭವಿಸಿದ್ದರು. ಎರಡು ವರ್ಷ ಆಟದಿಂದಲೇ ಹೊರಗಿದ್ದರು. 2017ರ ಕೊನೆಯಲ್ಲಿ ಅವರು ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಪ್ರಪಾತಕ್ಕೆ (656ನೇ ಸ್ಥಾನ) ಇಳಿದಿದ್ದರು.

ಟೈಗರ್‌ ಜಿಂದಾ ಹೇ... ಇದು ಕೆಲವು ವರ್ಷ ಹಿಂದೆ ಬಿಡುಗಡೆಯಾದ ಹಿಂದಿ ಚಿತ್ರದ ಹೆಸರು. ಗಾಲ್ಫ್‌ನಲ್ಲಿ ಹೆಜ್ಜೆ ಮೂಡಿಸಿದ ಕೆಲವೇ ವರ್ಷಗಳಲ್ಲಿ ಹೆಸರಿಗೆ ತಕ್ಕಂತೆ ಹುಲಿರಾಜನಂತೆ ಮೆರೆದ ಟೈಗರ್‌ ವುಡ್ಸ್‌ ಕಳೆದ ಸುಮಾರು ಹತ್ತು ವರ್ಷಗಳಿಂದ ಅಷ್ಟೊಂದು ಸುದ್ದಿಯಲ್ಲಿರಲಿಲ್ಲ. ಈಗ ಕೋರ್ಸ್‌ನಲ್ಲಿ ಮತ್ತೆ ಗರ್ಜಿಸಿದ್ದಾರೆ. ವಯಸ್ಸು ಹೆಚ್ಚುತ್ತಿದ್ದರೂ ಆಟದ ಕಸುವು ಕಡಿಮೆಯಾಗಿಲ್ಲ ಎಂಬುದನ್ನು ಸಾರಿದ್ದಾರೆ!

43 ವರ್ಷದ ವುಡ್ಸ್‌ ಇತ್ತೀಚೆಗಷ್ಟೇ (ಅಕ್ಟೋಬರ್‌ 28) ಜಪಾನ್‌ನಲ್ಲಿ ನಡೆದ ಝೊಝೊ ಗಾಲ್ಫ್‌ ಚಾಂಪಿಯನ್‌ಷಿಪ್‌ನಲ್ಲಿ ಗೆಲ್ಲುವ ಮೂಲಕ ವೃತ್ತಿ ಜೀವನದ 82ನೇ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಆ ಮೂಲಕ ಗಾಲ್ಫ್‌ ದಂತಕತೆಯಾಗಿದ್ದ ಅಮೆರಿಕದ ಸ್ಯಾಮ್‌ ಸ್ನೀಡ್‌ (ಪೂರ್ಣ ಹೆಸರು ಸ್ಯಾಮುಯೆಲ್‌ ಜಾಕ್ಸನ್‌ ಸ್ನೀಡ್‌) ಅವರ ಸಾರ್ವಕಾಲಿಕ ದಾಖಲೆ ಪ್ರಶಸ್ತಿಗಳ ಸಂಖ್ಯೆಯನ್ನು ಸರಿಗಟ್ಟಿದ್ದಾರೆ. 1965ರಲ್ಲಿ ಕೊನೆಯ ಪ್ರಶಸ್ತಿ ಗೆದ್ದುಕೊಂಡಿದ್ದ ಸ್ಯಾಮ್‌ (1912–2002) ಅವರ ದಾಖಲೆ 54 ವರ್ಷಗಳ ಕಾಲ ಅಬಾಧಿತವಾಗುಳಿದಿತ್ತು!

ವುಡ್ಸ್‌, ಜಪಾನ್‌ನ ಟೂರ್ನಿಯ ಗೆಲುವಿನಿಂದ ವಿಶ್ವ ಕ್ರಮಾಂಕದಲ್ಲಿ ಹತ್ತನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಜಿಗಿದಿದ್ದಾರೆ. ಝೊಝೊ ಟೂರ್ನಿಯಲ್ಲಿ ಸ್ಥಳೀಯ ಫೆವರೀಟ್‌ ಹಿಡೆಕಿ ಮಾತ್ಸುಯಾಮ ಅವರನ್ನು ಎರಡನೇ ಸ್ಥಾನಕ್ಕೆ ತಳ್ಳಿದ್ದಾರೆ.‌ವಿಶ್ವದ ಎರಡನೇ ಕ್ರಮಾಂಕದ ರೋರಿ ಮಕ್‌ಇರ್ಲಾಯ್‌, ದಕ್ಷಿಣ ಕೊರಿಯಾದ ಇಮ್‌ ಸುಂಗ್ ಜೇ ಜೊತೆ ಮೂರನೇ ಸ್ಥಾನ ಹಂಚಿಕೊಳ್ಳಬೇಕಾಯಿತು.

ವುಡ್ಸ್‌ ಗೆದ್ದಿರುವ 82 ಪ್ರಶಸ್ತಿಗಳಲ್ಲಿ 15 ‘ಮೇಜರ್‌’ಗಳೂ ಒಳಗೊಂಡಿವೆ. ಟೆನಿಸ್‌ನಲ್ಲಿ ಆಸ್ಟ್ರೇಲಿಯಾ ಓಪನ್‌, ಫ್ರೆಂಚ್‌ ಓಪನ್‌, ವಿಂಬಲ್ಡನ್‌, ಯು.ಎಸ್‌. ಓಪನ್‌ ಚಾಂಪಿಯನ್‌ಷಿಪ್‌‌ಗಳನ್ನು ‘ಗ್ರ್ಯಾಂಡ್‌ ಸ್ಲ್ಯಾಮ್‌’ ಟೂರ್ನಿಗಳೆಂದು ಕರೆಯಲಾಗುತ್ತಿದೆ. ಅಂತೆಯೇ ವೃತ್ತಿಪರ ಗಾಲ್ಫ್‌ನಲ್ಲಿ ಮಾಸ್ಟರ್ಸ್‌ ಟೂರ್ನಿ, ಯು.ಎಸ್‌.ಓಪನ್‌, ಬ್ರಿಟಿಷ್‌ ಓಪನ್‌ ಮತ್ತು ಪಿಜಿಎ ಚಾಂಪಿಯನ್‌ಷಿಪ್‌ಗಳು ಪ್ರತಿಷ್ಠಿತ (ಮೇಜರ್‌) ಟೂರ್ನಿಗಳು.

ಗಾಲ್ಫ್‌ನಲ್ಲಿ ದೊಡ್ಡ ಹೆಸರಾದ ಜಾಕ್‌ ನಿಕ್ಲೋಸ್‌ (18 ಮೇಜರ್‌ ಟೂರ್ನಿಗಳಲ್ಲಿ ಗೆಲುವು) ಮಾತ್ರ ಪ್ರಮುಖ ಪ್ರಶಸ್ತಿಗಳ ಸಂಖ್ಯೆಯಲ್ಲಿ ಟೈಗರ್‌ಗಿಂತ ಮುಂದಿದ್ದಾರೆ. ವುಡ್ಸ್‌ಗೆವೃತ್ತಿ ಜೀವನದ ಮೊದಲ ಪ್ರಶಸ್ತಿ ಬಂದಿದ್ದು 23 ವರ್ಷಗಳ ಹಿಂದೆ. ಲಾಸ್‌ವೇಗಾಸ್‌ನಲ್ಲಿ 1996ರ ಅಕ್ಟೋಬರ್‌ನಲ್ಲಿ ಆ ಪ್ರಶಸ್ತಿ ಗೆದ್ದುಕೊಂಡಿದ್ದರು. ಆಗ ಅವರ ವಯಸ್ಸು ಕೇವಲ 20.

ಬೆನ್ನು ನೋವಿಗೆ ನಾಲ್ಕು ಬಾರಿ ಶಸ್ತ್ರಚಿಕಿತ್ಸೆಗಳು, ಹಲವು ಬಾರಿ ಮಂಡಿ ಶಸ್ತ್ರಚಿಕಿತ್ಸೆ, ವೈವಾಹಿಕ ಜೀವನದ ಬಿರುಗಾಳಿ, ಕಾನೂನು ಸಮರ ಇವೇ ಮೊದಲಾದ ಹಿನ್ನಡೆಗಳನ್ನು ದಾಟಿರುವ ವುಡ್ಸ್‌ 2008ರ ನಂತರ ಯಾವುದೇ ‘ಮೇಜರ್‌’ ಟೂರ್ನಿಗಳಲ್ಲಿ ಯಶಸ್ಸು ಕಂಡಿರಲಿಲ್ಲ. 2013ರ ನಂತರ ಯಾವುದೇ ಪ್ರಮುಖ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿರಲಿಲ್ಲ. ಎರಡು ವರ್ಷ ಆಟದಿಂದಲೇ ಹೊರಗಿದ್ದರು. 2017ರ ಕೊನೆಯಲ್ಲಿ ಅವರು ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಪ್ರಪಾತಕ್ಕೆ (656ನೇ ಸ್ಥಾನ) ಇಳಿದಿದ್ದರು.2018ರ ಫೆಬ್ರುವರಿಯಲ್ಲಿ ದುಬೈ ಡಸರ್ಟ್‌ ಕ್ಲಾಸಿಕ್‌ ಟೂರ್ನಿಯೊಡನೆ ಪುನರಾಗಮನ ಮಾಡಿದ್ದರು.

ಕಳೆದ ಏಪ್ರಿಲ್‌ನಲ್ಲಿ ಐದನೇ ಬಾರಿ ಆಗಸ್ಟಾ ಮಾಸ್ಟರ್ಸ್‌ ಜಯಿಸಿದ್ದರು. ಅದು 2008ರ ನಂತರ ಅವರ ಮೊದಲ ಪ್ರಮುಖ ಪ್ರಶಸ್ತಿಯಾಗಿತ್ತು. 2005ರಲ್ಲಿ ಕೊನೆಯ ಬಾರಿಗೆ ಈ ಪ್ರಶಸ್ತಿ (ಆಗಸ್ಟಾ ಮಾಸ್ಟರ್ಸ್‌) ಜಯಿಸಿದ್ದರು. ಜಾಕ್‌ ನಿಕ್ಲೋಸ್‌ ನಂತರ ಈ ಪ್ರಶಸ್ತಿ ಗೆದ್ದ ಎರಡನೇ ಅತಿ ಹಿರಿಯ ಆಟಗಾರ ಎನಿಸಿದ್ದರು. 1986ರಲ್ಲಿ ಈ ಪ್ರಶಸ್ತಿ ದ್ದಾಗ ಜಾಕ್‌ ವಯಸ್ಸು 46.

ಮೊಣಕಾಲಿಗೆ ಶಸ್ತ್ರಚಿಕಿತ್ಸೆಯಾಗಿ ಎರಡು ತಿಂಗಳ ನಂತರ ಟೈಗರ್‌ ವುಡ್ಸ್‌ ಝೊಝೊ ಟೂರ್ನಿ ವಿಜೇತರಾಗುವ ಮೂಲಕ ಪುನರಾಗಮನ ಜೋರಾಗುವ ಸೂಚನೆ ನೀಡಿದ್ದಾರೆ. ಪ್ರಶಸ್ತಿ ಗೆದ್ದೊಡನೆ ಅವರ ಮುಖದ ಮೇಲೆ ಗೆಲುವಿನ ನಗು ಅದನ್ನು ಸಾರುವಂತೆ ಇತ್ತು.

‘ಈಗ ಟೈಗರ್‌ ಮೊದಲಿಗಿಂತ ಹೆಚ್ಚು ಬೆರೆಯುತ್ತಿದ್ದಾರೆ. ಹೀಗಾಗಿ ಜನರಿಗೆ ಅವರು ಸವೆಸಿದ ಹಾದಿಯೂ ಗೊತ್ತಾಗಿದೆ. ಈಗ ಮತ್ತೆ ಲಯ ಕಂಡುಕೊಂಡಿದ್ದಾರೆ. ಮತ್ತೊಮ್ಮೆ ಚೆನ್ನಾಗಿ ಆಡುತ್ತಿದ್ದಾರೆ’ ಎನ್ನುತ್ತಾರೆ ರೋರಿ. ಟೈಗರ್‌, ಟೋಕಿಯೊದಲ್ಲಿದ್ದಾಗ ಸಹ ಆಟಗಾರರ ಜೊತೆ ಸಿನಿಮಾಕ್ಕೆ ಹೋಗಿದ್ದರು. ಒಮ್ಮೆ ವಿಪರೀತ ಮಳೆಯಿಂದಾಗಿ ರಸ್ತೆಗಳು ನೀರಿನಿಂದ ಮರೆಯಾದಾಗ, ಪೀಜಾ ಕಾರ್ನರ್‌ ಒಂದರಲ್ಲಿ ಸಿಲುಕಿಕೊಂಡಿದ್ದರು.

ಟೈಗರ್‌ ಗುರಿ ಮತ್ತೆ ಮುಂದಿನ ವರ್ಷ ಟೋಕಿಯೊಗೆ ಬಂದು ಒಲಿಂಪಿಕ್ಸ್‌ನಲ್ಲಿ ಸ್ವರ್ಣ ಗೆಲುವುದು. ‘ನನಗೆ ತಂಡಕ್ಕೆ ಅರ್ಹತೆ ದೊರೆತು, ದೇಶ ಪ್ರತಿನಿಧಿಸುವ ಅವಕಾಶ ಸಿಗಬಹುದೆಂಬ ವಿಶ್ವಾಸವಿದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT