ಮಂಗಳವಾರ, ಸೆಪ್ಟೆಂಬರ್ 21, 2021
27 °C

Tokyo Olympics: ಬ್ಯಾಡ್ಮಿಂಟನ್‌ನಲ್ಲಿ ಚಿನ್ನ ಗೆದ್ದು ದಾಖಲೆ ಬರೆದ ವಿಕ್ಟರ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಡೆನ್ಮಾರ್ಕ್‌ನ ವಿಕ್ಟರ್‌ ಆ್ಯಕ್ಸಲ್‌ಸನ್‌ ಸೋಮವಾರ ಟೋಕಿಯೊ ಅಂಗಳದಲ್ಲಿ ವಿಶಿಷ್ಠ ಸಾಧನೆ ಮಾಡಿದರು.

ಪುರುಷರ ಬ್ಯಾಡ್ಮಿಂಟನ್‌ನ ಸಿಂಗಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಅವರು ಏಷ್ಯಾ ಖಂಡದ ಆಟಗಾರರ ಪ್ರಾಬಲ್ಯಕ್ಕೆ ಕಡಿವಾಣ ಹಾಕಿದರು. 1996ರ ನಂತರ ಒಲಿಂಪಿಕ್ಸ್‌ ಬ್ಯಾಡ್ಮಿಂಟನ್‌ನಲ್ಲಿ ಏಷ್ಯಾ ರಾಷ್ಟ್ರಗಳ ಸ್ಪರ್ಧಿಗಳೇ ಪಾರಮ್ಯ ಮೆರೆದಿದ್ದರು.

ಈ ಸುದ್ದಿ ಗೊತ್ತಾಗುತ್ತಿದ್ದಂತೆ ಡೆನ್ಮಾರ್ಕ್‌ನ ರಾಜಕುಮಾರ ಫ್ರೆಡರಿಕ್‌ ಅವರು ಕರೆ ಮಾಡಿ ಆ್ಯಕ್ಸಲ್‌ಸನ್‌ ಅವರನ್ನು ಅಭಿನಂದಿಸಿದರು. 

ಫೈನಲ್‌ನಲ್ಲಿ ವಿಕ್ಟರ್‌ 21–15, 21–12 ಪಾಯಿಂಟ್ಸ್‌ನಿಂದ ಚೀನಾದ ಚೆನ್‌ ಲಾಂಗ್‌ ಅವರನ್ನು ಸೋಲಿಸಿದರು. ಅಂತಿಮ ಗೇಮ್‌ನ ಕೊನೆಯಲ್ಲಿ ಚೆನ್‌ ಬಾರಿಸಿದ ಷಟಲ್‌ ಅಂಗಳದ ಆಚೆ ಬೀಳುತ್ತಿದ್ದಂತೆ ವಿಕ್ಟರ್‌, ಖುಷಿಯಿಂದ ಕಣ್ಣೀರಿಟ್ಟರು. ಅಂಗಳದಲ್ಲೇ ಅಂಗಾತ ಮಲಗಿ ರೋಧಿಸಿದರು. ಅಂಕಣದ ಮತ್ತೊಂದು ಬದಿಯಲ್ಲಿದ್ದ ಚೆನ್‌ ಅಭಿನಂದಿಸಲು ಬಂದಾಗ ಅವರನ್ನು ಬಿಗಿದಪ್ಪಿದ ವಿಕ್ಟರ್‌ ಬಿಕ್ಕಳಿಸಿದರು. ಬಳಿಕ ಇಬ್ಬರೂ ತಮ್ಮ ಜೆರ್ಸಿಯನ್ನು ಪರಸ್ಪರ ವಿನಿಮಯ ಮಾಡಿಕೊಂಡು ಕ್ರೀಡಾ ಸ್ಫೂರ್ತಿ ಮೆರೆದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನ ಹೊಂದಿರುವ ವಿಕ್ಟರ್‌, ಪಂದ್ಯದ ಉದ್ದಕ್ಕೂ ಅಮೋಘ ಸಾಮರ್ಥ್ಯ ತೋರಿದರು. ಆಕರ್ಷಕ ಸ್ಮ್ಯಾಷ್ ಮತ್ತು ಚುರುಕಿನ ಡ್ರಾಪ್‌ಗಳ ಮೂಲಕ ರ‍್ಯಾಂಕಿಂಗ್‌ನಲ್ಲಿ ಆರನೇ ಸ್ಥಾನದಲ್ಲಿರುವ ಚೆನ್‌ ಅವರನ್ನು ಕಂಗೆಡಿಸಿದರು.

2016ರ ರಿಯೊ ಒಲಿಂಪಿಕ್ಸ್‌ನ ಸೆಮಿಫೈನಲ್‌ನಲ್ಲಿ ವಿಕ್ಟರ್‌ ಅವರು ಚೆನ್‌ ವಿರುದ್ಧ ನಿರಾಸೆ ಕಂಡಿದ್ದರು. ಆ ಸೋಲಿಗೆ ಇಲ್ಲಿ ಮುಯ್ಯಿ ತೀರಿಸಿಕೊಂಡರು.    

ಸಿನಿಸುಕಗೆ ಕಂಚು: ಇಂಡೊನೇಷ್ಯಾದ ಅಂಥೋಣಿ ಸಿನಿಸುಕಾ ಕಂಚಿನ ಪದಕ ಪಡೆದರು. ಮೂರನೇ ಸ್ಥಾನ ನಿರ್ಧರಿಸಲು ನಡೆದ ಹೋರಾಟದಲ್ಲಿ ಸಿನಿಸುಕ 21–11, 21–13ರಿಂದ ಕೆವಿನ್‌ ಕಾರ್ಡನ್‌ ಅವರನ್ನು ಪರಾಭವಗೊಳಿಸಿದರು.

ಪೊಲಿ–ರಹಾಯುಗೆ ಡಬಲ್ಸ್‌ ಗರಿ: ಮಹಿಳಾ ಡಬಲ್ಸ್‌ನಲ್ಲಿ ಇಂಡೊನೇಷ್ಯಾದ ಗ್ರೇಸಿಯಾ ಪೊಲಿ ಮತ್ತು ಅಪ್ರಿಯಾನಿ ರಹಾಯು ಚಾಂಪಿಯನ್‌ ಆದರು. ಇದರೊಂದಿಗೆ ಮಹಿಳಾ ಡಬಲ್ಸ್‌ನಲ್ಲಿ ದೇಶಕ್ಕೆ ಚಿನ್ನ ಗೆದ್ದುಕೊಟ್ಟ ಮೊದಲ ಜೋಡಿ ಎಂಬ ಹಿರಿಮೆಗೆ ಪಾತ್ರರಾದರು.

ಫೈನಲ್‌ನಲ್ಲಿ ಪೊಲಿ ಮತ್ತು ರಹಾಯು 21-19, 21-15ರಿಂದ ಚೀನಾದ ಚೆನ್‌ ಕ್ವಿಂಗ್‌ ಮತ್ತು ಜಿಯಾ ಯಿ ಫಾನ್‌ ಅವರನ್ನು ಮಣಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು