ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಕಿಯೊದಲ್ಲೂ ಐಸ್‌ಕ್ರೀಂ ತಿನ್ನುವುದಿಲ್ಲವೇ: ಸಿಂಧುಗೆ ಮೋದಿ ಪ್ರಶ್ನೆ

Last Updated 13 ಜುಲೈ 2021, 19:25 IST
ಅಕ್ಷರ ಗಾತ್ರ

ನವದೆಹಲಿ: ‘2016ರ ರಿಯೊ ಒಲಿಂಪಿಕ್ಸ್ ಸಂದರ್ಭದಲ್ಲಿ ನೀವು ಐಸ್‌ಕ್ರೀಂ ತಿನ್ನದಂತೆ ಕೋಚ್ ಗೋಪಿಚಂದ್ ನಿಷೇಧಿಸಿದ್ದರು. ಈ ಬಾರಿಯೂ ಪರಿಸ್ಥಿತಿ ಹಾಗೆಯೇ ಇದೆಯೇ? ಈ ಸಲವೂ ನೀವು ಒಲಿಂಪಿಕ್ಸ್‌ ಮುಗಿಯುವವರೆಗೂ ಫೋನ್ ಬಳಕೆ ಮಾಡುವುದಿಲ್ಲವೇ?‘–

ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಒಲಿಂಪಿಕ್ಸ್‌ಗೆ ಹೊರಟ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರಿಗೆ ಕೇಳಿದ ಪ್ರಶ್ನೆಗಳಿವು. ಟೋಕಿಯೊಗೆ ಹೊರಟಿರುವ ಭಾರತದ ಕ್ರೀಡಾಪಟುಗಳೊಂದಿಗೆ ಇದೇ ರೀತಿಯ ತಿಳಿಹಾಸ್ಯಮಿಶ್ರಿತ ಧಾಟಿಯಲ್ಲಿ ಅವರು ವಿಡಿಯೊ ಸಂವಾದ ನಡೆಸಿದರು.

ಮೋದಿಯವರ ಪ್ರಶ್ನೆಗೆ ಉತ್ತರಿಸಿದ ಸಿಂಧು, ‘ಸರ್, ನನ್ನ ಆಹಾರ ಸೇವನೆಯ ಕುರಿತು ಬಹಳ ಎಚ್ಚರಿಕೆಯಿಂದ ಇರಬೇಕು‘ ಎಂದರು.

ರಿಯೊ ಒಲಿಂಪಿಕ್ಸ್‌ನಲ್ಲಿ ಸಿಂಧು ಬೆ್ಳ್ಳಿ ಪದಕ ಜಯಿಸಿದ್ದರು. ಅವರ ಸಾಧನೆ ಮತ್ತು ಕೋಚ್ ಪಿ. ಗೋಪಿಚಂದ್ ಮಾರ್ಗದರ್ಶನ ಕುರಿತು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಕುಸ್ತಿಪಟು ವಿನೇಶ ಪೋಗಟ್ ಕುಟುಂಬದ ಸದಸ್ಯರೊಂದಿಗೂ ಮಾತನಾಡಿದರು. ‘ನಿಮ್ಮ ಹೆಣ್ಣುಮಕ್ಕಳಿಗೆ ಯಾವ ಬೀಸುಕಲ್ಲಿನಲ್ಲಿ ಸಿದ್ಧವಾದ ಹಿಟ್ಟಿನ ಆಹಾರ ನೀಡುತ್ತೀರಿ‘ ಎಂದು ಕೇಳಿದರು. ಕುಸ್ತಿಕ್ರೀಡೆಗೆ ತಮ್ಮ ಕುಟುಂಬದ ಹುಡುಗಿಯರ ಕೊಡುಗೆ ಅಪಾರ ಎಂದು ಶ್ಲಾಘಿಸಿದರು

‘ನೀವು ಕೋವಿಡ್‌ ಸೋಂಕಿಗೊಳಗಾಗಿದ್ದಿರಿ. ಇದೇ ಹಂತದಲ್ಲಿನಿಮ್ಮ ತಂದೆಯ ನಿಧನದ ದುಃಖವನ್ನೂ ಅನುಭವಿಸಿದಿರಿ. ಅಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿಯೂ ಹೇಗೆ ಸ್ಥಿಮಿತ ಕಾಯ್ದುಕೊಂಡು ಒಲಿಂಪಿಕ್ಸ್‌ ಅರ್ಹತೆ ಪಡೆದಿರಿ‘ ಎಂದು ಬಾಕ್ಸರ್ ಆಶಿಶ್ ಕುಮಾರ್ ಅವರನ್ನು ಮೋದಿ ಪ್ರಶ್ನಿಸಿದರು.

ಅದಕ್ಕುತ್ತರಿಸಿದ ಆಶಿಶ್, ‘ನಾನು ಸ್ಪೇನ್‌ನಲ್ಲಿದ್ದಾಗ ಕೋವಿಡ್‌ ಸೋಂಕು ತಗುಲಿತ್ತು. ಅಲ್ಲಿ ನನಗೆ ವಿಶೇಷ ಚಿಕಿತ್ಸಾ ಸೌಲಭ್ಯಗಳನ್ನು ನೀಡಲಾಗಿತ್ತು. ಆದರೂ ಚೇತರಿಸಿಕೊಳ್ಳಲು ಬಹಳ ಸಮಯ ಬೇಕಾಯಿತು. ಭಾರತಕ್ಕೆ ಮರಳಿದ ನಂತರ ನಮ್ಮ ತಂಡದ ನೆರವು ಸಿಬ್ಬಂದಿಯ ಉತ್ತಮ ಸಹಕಾರ ಮತ್ತು ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಯಿತು‘ ಎಂದರು.

ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪಿತೃವಿಯೋಗದ ದುಃಖದಲ್ಲಿಯೂ ಅಂತರರಾಷ್ಟ್ರೀಯ ಪಂದ್ಯದಲ್ಲಿ ಅಮೋಘವಾಗಿ ಆಡಿ ಭಾರತ ತಂಡಕ್ಕೆ ಆಸರೆಯಾಗಿದ್ದನ್ನು ಮೋದಿ ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

ಗಾಯಗೊಂಡರೂ ನೂತನ ದಾಖಲೆ ನಿರ್ಮಿಸಿದ ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ ಅವರನ್ನುಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT