ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌: ಗೆದ್ದು ಸೋತ ರವಿಂದರ್‌

ಮಿಂಚದ ಭಾರತದ ಪೈಲ್ವಾನರು
Last Updated 2 ಅಕ್ಟೋಬರ್ 2021, 14:14 IST
ಅಕ್ಷರ ಗಾತ್ರ

ಒಸ್ಲೊ, ನಾರ್ವೆ: ವೀರೋಚಿತ ಸಾಮರ್ಥ್ಯ ತೋರಿದ ಭಾರತದ ರವಿಂದರ್ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಹಾಲಿ ಚಾಂಪಿಯನ್‌, ಜಾರ್ಜಿಯಾದ ಬೆಕಾ ಲೊಮ್‌ತಾಜ್‌ ಅವರನ್ನು ಚಿತ್‌ ಮಾಡಿದರು. ಆದರೆ ಕ್ವಾರ್ಟರ್‌ಫೈನಲ್‌ನಲ್ಲಿ ಸೋತು ನಿರಾಸೆ ಮೂಡಿಸಿದರು. ಶನಿವಾರ ಇಲ್ಲಿ ಆರಂಭವಾದ ಚಾಂಪಿಯನ್‌ಷಿಪ್‌ನ ಮೊದಲ ದಿನ ಭಾರತದ ಪೈಲ್ವಾನರ ಒಟ್ಟಾರೆ ಸಾಮರ್ಥ್ಯ ಕಳಪೆಯಾಗಿತ್ತು.

ಯಶ್‌ ತನೀರ್‌ (74 ಕೆಜಿ ವಿಭಾಗ), ಸಂದೀಪ್ ಮಾನ್‌ (86 ಕೆಜಿ) ಹಾಗೂ ಅನಿರುದ್ಧ್ (125 ಕೆಜಿ) ಅರ್ಹತಾ ಸುತ್ತಿನ ತಡೆ ದಾಟುವಲ್ಲಿ ವಿಫಲರಾದರು.

ಯಶ್‌ 0–7ರಿಂದ ರಷ್ಯಾದ ತಿಮೂರ್‌ ಬಿಜೊಯೆವ್ ಎದುರು, ಸಂದೀಪ್‌ 4–5ರಿಂದ ಕೊರಿಯಾದ ಕಿಮ್‌ ಗ್ವಾನುಕ್ ವಿರುದ್ಧ ಮತ್ತು ಅನಿರುದ್ಧ 3–9ರಿಂದ ಈಜಿಪ್ಟ್‌ನ ಹೆಮಿದಾ ಯೂಸುಫ್ ವಿರುದ್ಧ ಸೋತು ನಿರ್ಗಮಿಸಿದರು.

ಆಗಸ್ಟ್‌ನಲ್ಲಿ ನಡೆದಿದ್ದ ಜೂನಿಯರ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರವಿಂದರ್‌ (61 ಕೆಜಿ), ಕೊರಿಯಾದ ಕಿಮ್‌ ಸುಂಗ್‌ವಾನ್‌ ಅವರನ್ನು ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಮಣಿಸಿ ತಮ್ಮ ಅಭಿಯಾನ ಆರಂಭಿಸಿದರು. ಬಳಿಕ 2019ರ ಚಾಂಪಿಯನ್‌ ಬೆಕಾ ಎದುರು ಕಣಕ್ಕಿಳಿದರು. ಬೌಟ್‌ ಮಧ್ಯದಲ್ಲೇ ಜಾರ್ಜಿಯಾ ಪಟು ನಿರ್ಗಮಿಸಿದರು.

ಬೌಟ್‌ನ ಮೊದಲ ಅವಧಿಯಲ್ಲಿ ರವಿಂದರ್‌ ಎರಡು ಪುಶ್‌ ಪಾಯಿಂಟ್ಸ್ ಗಳಿಸಿ ಮುನ್ನಡೆದರು. ಆದರೆ ಮ್ಯಾಟ್‌ನಿಂದ ಆಚೆ ಬಿದ್ದ ಕಾರಣ ಪಾಯಿಂಟ್‌ವೊಂದನ್ನು ಕಳೆದುಕೊಂಡೂ ಎದುರಾಳಿಯನ್ನು ಮತ್ತೆ ನೆಲಕ್ಕುರುಳಿಸಿ ಮುನ್ನಡೆ ಪಡೆದರು. ಒಂದು ಹಂತದಲ್ಲಿ ಉಸಿರು ತೆಗೆದುಕೊಳ್ಳಲೂ ಲೊಮ್‌ತಾಜ್‌ ಪರದಾಡಬೇಕಾಯಿತು. ಎದುರಾಳಿಯ ದೌರ್ಬಲ್ಯದ ಲಾಭ ಪಡೆದ ಭಾರತದ ಪೈಲ್ವಾನ ಪಾಯಿಂಟ್ಸ್ ಹೆಚ್ಚಿಸಿಕೊಳ್ಳುತ್ತ ಸಾಗಿದರು.

ಹೆಚ್ಚು ವಿರಾಮ ತೆಗೆದುಕೊಳ್ಳುತ್ತಿದ್ದ ಲೊಮ್‌ತಾಜ್ ಅವರಿಗೆ ರೆಫರಿ ಎಚ್ಚರಿಕೆ ನೀಡಿದಾಗ ಮತ್ತೊಂದು ಪಾಯಿಂಟ್‌ ರವಿಂದರ್ ಖಾತೆಗೆ ಬಂತು. ಅಂತಿಮವಾಗಿ ರವಿಂದರ್ ಅವರಿಗೆ 6–2ರಿಂದ ಜಯ ಒಲಿಯಿತು.

ಆದರೆ ಎಂಟರಘಟ್ಟದ ಹಣಾಹಣಿಯಲ್ಲಿ ರವಿಂದರ್ ಅಮೆರಿಕದ ದಾತೊನ್ ಡ್ಯುವನ್ ಫಿಕ್ಸ್ ಎದುರು ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಸೋಲು ಕಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT