ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದ್ರಿಯ ನಿಗ್ರಹ, ಸ್ಥಿತಪ್ರಜ್ಞೆಗೆ ಕೂರ್ಮಾಸನ

Last Updated 9 ಜೂನ್ 2019, 19:30 IST
ಅಕ್ಷರ ಗಾತ್ರ

ಯೋಗಾ ಯೋಗ
ಕೂರ್ಮ ಎಂದರೆ ಆಮೆ ಎಂದರ್ಥ. ವಿಷ್ಣುವು ಎರಡನೇ ಅವತಾರ ತಾಳಿ 'ಆದಿಕೂರ್ಮ'ನೆನಿಸಿ, ದೇವತೆಗಳು ಅಮೃತ ಪಡೆಯಲು ಸಮುದ್ರ ಮಂಥನ ಮಾಡುವಾಗ ಸಮುದ್ರದ ತಳದಲ್ಲಿದ್ದು, ತನ್ನ(ಆಮೆ) ಬೆನ್ನ ಮೇಲೆ ಮಂದಾರಪರ್ವತವನ್ನಿಟ್ಟು ಕಡೆಯುವಂತೆ ಹೇಳಿದ ಕಥೆಯು ಪುರಾಣದಲ್ಲಿದೆ. ಆದ್ದರಿಂದ, ಯೋಗ ಅಭ್ಯಾಸದಲ್ಲಿ ಆಮೆಯನ್ನು ಹೋಲುವ ಈ ಆಸನವನ್ನು ಆದಿಕೂರ್ಮನಿಗೆ ಮೀಸಲಾಗಿರಿಸಿ ಕೂರ್ಮಾನಸ ಎಂದು ಹೆಸರಿಸಲಾಗಿದೆ.

ಅಭ್ಯಾಸಕ್ರಮ
ಕಾಲುಗಳನ್ನು ಮುಂಚಾಚಿ ನೇರವಾಗಿ ಕುಳಿತುಕೊಳ್ಳಿ. ಪಾದಗಳ ಮಧ್ಯೆ ಒಂದುವರೆ ಅಡಿಯಷ್ಟು ಅಂತರವಿರುವಂತೆ ವಿಸ್ತರಿಸಿ. ಮಂಡಿಗಳನ್ನು ಬಾಗಿಸಿ ಮೇಲೆತ್ತಿ ಮುಂಡದತ್ತ ಸೆಳೆದುಕೊಳ್ಳಿ.

ಉಸಿರನ್ನು ಹೊರಹಾಕಿ ಮುಂಡವನ್ನು ಮುಂದೆ ಬಾಗಿಸಿ ಕೈಗಳನ್ನು ಒಂದೊಂದಾಗಿ ಮಂಡಿಗಳ ಕೆಳಗೆ ತೂರಿಸಿಡಿ. ಒಂದೆರೆಡಸು ಸರಳ ಉಸಿರಾಟ ನಡೆಸಿ. ದೇಹವನ್ನು ಮತ್ತಷ್ಟು ಮುಂದೆ ಬಾಗಿಸುತ್ತಾ ಮೇಲ್ದೋಳುಗಳೂ ಮಂಡಿಯ ಕೆಳಗೆ ಬರುವಂತೆ ಸೇರಿಸಿಡಿ.

ಉಸಿರನ್ನು ಹೊರದೂಡಿ, ಮಂಡಿಗಳ ಹಿಂಬದಿಯಿಂದ ಮೇಲ್ದೋಳುಗಳನ್ನು ಕೆಳಕ್ಕೊತ್ತುತ್ತಾ ಕಾಲುಗಳನ್ನು ನೇರವಾಗಿಸಿ. ದೇಹವನ್ನು ನೆಲದತ್ತ ತಂದು ಹಣೆಯನ್ನು ನೆಲಕ್ಕೆ ತಾಗಿಸಿ. ಬಳಿಕ, ಸೊಂಟ, ಬೆನ್ನನ್ನು ಮುಂದಕ್ಕೆ ಸೆಳೆದಿಡುವ ಮೂಲಕ ಗದ್ದವನ್ನು ನೆಲಕ್ಕೂರಿ, ಕೊನೆಯಲ್ಲಿ ಎದೆಯನ್ನು ನೆಲಕ್ಕೆ ತಾಗಿಸಿ. ಸರಳ ಉಸಿರಾಟ ನಡೆಸುತ್ತಾ ಅಂತಿಮ ಸ್ಥಿತಿಯಲ್ಲಿ 30 ಸೆಕೆಂಡುಗಳಿಂದ ಒಂದು ನಿಮಿಷ ನೆಲೆಸಿ.

ಮುಂದುವರಿದು, ಕೈಗಳನ್ನು ಪಕ್ಕದಿಂದ ಹಿಂಬದಿಗೆ ಸರಿಸಿಟ್ಟು, ಅಂಗೈಗಳನ್ನು ಮೇಲ್ಮೊಗವಾಗಿರಿಸಿ, ಕೆಲವೊತ್ತು ನೆಲೆಸುವ ಮೂಲಕ ಅಭ್ಯಾಸ ನಡೆಸಿ(ಆಸನದ ಅಂತಿಮ ಸ್ಥಿತಿಯಲ್ಲಿ ಕೈಗಳು ಪಕ್ಕಕ್ಕಿದ್ದಾಗ ಆಮೆಯನ್ನು ಮುಂಭಾಗದಿಂದ ನೋಡಿದಂತೆಯು, ಕೈಗಳು ಹಿಂದಕ್ಕಿದ್ದಾಗ ಆಮೆಯನ್ನು ಪಕ್ಕದಿಂದ ನೋಡಿದಂತೆಯು ಕಾಣುತ್ತದೆ).

ಸೂಚನೆ
ಉಸಿರಾಟ ವೇಗ ಮತ್ತು ಶ್ರಮದಿಂದ ಕೂಡಿರುತ್ತದೆ. ಆದ್ದರಿಂದ, ಸರಳ/ದೀರ್ಘ ಉಸಿರಾಟ ಪ್ರಕ್ರಿಯೆ ನಡೆಸುವದನ್ನು ಕರಗತ ಮಾಡಿಕೊಳ್ಳಿ

ಫಲಗಳು
* ಅವಯವಗಳು ಒಳಕ್ಕೆ ಸೆಳೆದಿಟ್ಟು ಅಭ್ಯಾಸ ನಡೆಯುವ ಮೂಲಕ ಇಂದ್ರಿಯಗಳು ನಿಗ್ರಹಿಸಲ್ಪಟ್ಟು, ಸ್ಥಿತಪ್ರಜ್ಞೆಯನ್ನು ಹೊಂದಿ ಮನಸ್ಸು ಶಾಂತವಾಗುತ್ತದೆ.
* ಮನಸ್ಸು ಸುಖ-ದುಃಖಗಳಿಗೆ ಘಾಸಿಗೊಳಗಾಗದೆ ಸಮ ಸ್ಥಿತಿಯನ್ನು ಕಾಯ್ದುಕೊಳ್ಳುವುದನ್ನು ವೃದ್ಧಿಸುತ್ತದೆ.
* ಕೋಪ, ಭಯ, ದುಃಖಗಳನ್ನು ದೂರ ಮಾಡುತ್ತದೆ.
* ಅಷ್ಠಾಗ ಯೋಗದ ಐದನೇ ಹಂತ ಪ್ರತ್ಯಾಹಾರದ(ಇಂದ್ರಿಯ ನಿಗ್ರಹ) ಸಾಧನೆಗೆ ನೆರವಾಗುತ್ತದೆ.
* ಬೆನ್ನಿನ ಸ್ನಾಯುಗಳು, ಬೆನ್ನೆಲುಬು, ಕಿಬ್ಬೊಟ್ಟೆಗೆ ಚಟುವಟಿಕೆಯನ್ನೊದಗಿಸಿ ಉತ್ತಮ ವಿಶ್ರಾಂತಿಯನ್ನೊದಗಿಸುತ್ತದೆ.
* ಈ ಆಸನ ಅಭ್ಯಾದ ಬಳಿಕ (ಸುಖನಿದ್ರೆಯಿಂದ ಎದ್ದ ಬಳಿಕ ಲಭಿಸುವಂಥ) ಶಾಂತಸ್ಥಿತಿಯು ದೊರೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT