ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗ ಸ್ಪರ್ಧೆಯಲ್ಲಿ ಗುರು–ಶಿಷ್ಯರ ಸವಾಲ್

Last Updated 23 ಜೂನ್ 2019, 16:49 IST
ಅಕ್ಷರ ಗಾತ್ರ

ಕಲಿಕೆಗೆ ವಯಸ್ಸಿನ ಮಿತಿಯಿಲ್ಲ. ಹಾಗೆಯೇ ಸಾಧನೆಗೂ ವಯಸ್ಸಿನ ಮಿತಿಯಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಎಂಬಂತೆ 60 ವರ್ಷದ ಪಂಚಲಿಂಗಪ್ಪ ಜೆ ಕವಲೂರ ಹಾಗೂ 43 ವರ್ಷದ ಅವರ ಶಿಷ್ಯ ವಿನಾಯಕ ಕೊಂಗಿ ಅವರು ಸೆಪ್ಟೆಂಬರ್‌ನಲ್ಲಿ ದಕ್ಷಿಣ ಕೋರಿಯಾದಲ್ಲಿ ನಡೆಯುವ ಒಂಬತ್ತನೇ ಏಷ್ಯನ್‌ ಯೋಗ ಸ್ಪೋರ್ಟ್ಸ್ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗಿದ್ದಾರೆ. ಆ ಮೂಲಕ ಭಾರತದ ಯೋಗ ಹಿರಿಮೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿದಿದ್ದಾರೆ.

ಗುರು–ಶಿಷ್ಯರಿಬ್ಬರಿಗೂ ಸದಾ ಯೋಗದ್ದೇ ಧ್ಯಾನ. 2018ರಲ್ಲಿ ನಡೆದ ಕರ್ನಾಟಕ ರಾಜ್ಯ ಅಮೆಚೂರ್‌ ಯೋಗ ಸ್ಪೋರ್ಟ್ಸ್ ಸಂಸ್ಥೆ ಆಯೋಜಿಸಿದ್ದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಇಬ್ಬರೂ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದಾರೆ. 2019ರಲ್ಲಿಯೂ ಆ ಸಾಧನೆಯನ್ನು ಮುಂದುವರಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿಯೂ ಸ್ಥಾನ ಗಳಿಸಿ ಈಗ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಅಣಿಯಾಗುತ್ತಿದ್ದಾರೆ.

ಯೋಗದ ಕಠಿಣ ಆಸನಗಳನ್ನೂ ಗುರು–ಶಿಷ್ಯರು ಹೂವು ಎತ್ತಿದಷ್ಟೇ ಸಲೀಸಾಗಿ ಮಾಡುತ್ತಾರೆ. ಅವರಿಬ್ಬರ ದೇಹ ರಬ್ಬರಿನಂತೆ ಬಾಗುತ್ತದೆ. ನೋಡುಗರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ವಿವಿಧ ಆಸನಗಳನ್ನು ಕ್ಷಣಾರ್ಧದಲ್ಲಿ ಮಾಡಿ ಮುಗಿಸುತ್ತಾರೆ.

ಎಸ್ಸೆಸ್ಸೆಲ್ಸಿ ಓದುವಾಗ ‘ಪ್ರಜಾವಾಣಿ’ ಪತ್ರಿಕೆ ಹಂಚುತ್ತಿದ್ದ ಹುಡುಗ ಈಗ ಅಂತರರಾಷ್ಟ್ರೀಯ ಮಟ್ಟದ ಯೋಗಪಟು ಮಾತ್ರವಲ್ಲ. ‘ಯೋಗ ಫೆಡರೇಷನ್‌ ಆಫ್‌ ಇಂಡಿಯಾ’ ನಡೆಸುವ ಪರೀಕ್ಷೆಯಲ್ಲಿ ಪಾಸಾಗಿ ಅಂತರಾಷ್ಟ್ರೀಯ ಮಟ್ಟದ ನಿರ್ಣಾಯಕರೂ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಕವಲೂರ ಅವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಯೋಗದಲ್ಲಿ ಡಿಪ್ಲೊಮಾ ಮಾಡಿರುವ ಅವರು, ಹಂಪಿಯ ಅಚ್ಯುತ್ಯಾಶ್ರಮದ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿದ್ದಾರೆ. ಯೋಗದಲ್ಲಿ ಬ್ರಹ್ಮವಿದ್ಯೆ ಎನಿಸಿಕೊಂಡಿರುವ ಉಜ್ಜಯಿ ಪ್ರಾಣಾಯಮ ಕರಗತ ಮಾಡಿಕೊಂಡಿದ್ದಾರೆ.

22ನೇ ವರ್ಷದಿಂದಲೇ ಯೋಗಾಭ್ಯಾಸ ಆರಂಭಿಸಿರುವ ಕವಲೂರು ಅವರು, 45 ವರ್ಷವಾದ ಮೇಲೆಯೇ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ. ರಾಜ್ಯ, ರಾಷ್ಟ್ರಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಪ್ರಶಸ್ತಿಗಾಗಿ ಮಾತ್ರ ಯೋಗವನ್ನು ಸೀಮಿತಗೊಳಿಸಿಲ್ಲ. ಅದನ್ನು ಇತರರಿಗೂ ಕಲಿಸುವ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಹುಬ್ಬಳ್ಳಿಯ ಸಿದ್ಧಾರೂಢಮಠದಲ್ಲಿ 15 ವರ್ಷಗಳ ಕಾಲ ಉಚಿತವಾಗಿ ಯೋಗ ಶಿಕ್ಷಣ ನೀಡಿದ್ದಾರೆ. ಈಗ ಅವರೇ ಶ್ರೀ ಆರೂಢ ಯೋಗ ಕೇಂದ್ರ ಆರಂಭಿಸಿದ್ದು, ಅಲ್ಲಿ ನಿತ್ಯ ಯೋಗ ಕಲಿಸುತ್ತಿದ್ದಾರೆ. ಅದರೊಂದಿಗೆ ವಿವೇಕ ಜಾಗೃತ ಬಳಸ ಸೇರಿದಂತೆ ವಿವಿಧ ಕಡೆಗಳಲ್ಲೂ ಯೋಗ ಶಿಬಿರಗಳನ್ನು ನಡೆಸಿಕೊಡುತ್ತಿದ್ದಾರೆ.

ಯೋಗದಿಂದ ರೋಗಮುಕ್ತರಾಗಬಹುದು ಅಷ್ಟೇ ಅಲ್ಲ, ಶಿಸ್ತುಬದ್ಧ ಜೀವನವೂ ನಮ್ಮದಾಗುತ್ತದೆ. ದೇಹದ ಫಿಟ್‌ನೆಸ್‌ ಸಹ ಕಾಪಾಡಿಕೊಳ್ಳಬಹುದು. ಯೋಗ ಮಾಡುತ್ತಿರುವುದರಿಂದ ಈ ವಯಸ್ಸಿನಲ್ಲಿಯೂ ಆರೋಗ್ಯದಿಂದ ಇದ್ದೇನೆ ಎನ್ನುತ್ತಾರೆ ಕವಲೂರ.

ಮಯೂರನಗರದಲ್ಲಿ ಪ್ರಿಂಟಿಂಗ್‌ ಪ್ರೆಸ್‌ ನಡೆಸುತ್ತಿರುವ ವಿನಾಯಕ ಕೊಂಗಿ 39 ವಯಸ್ಸಿನಲ್ಲಿ ಯೋಗ ಕಲಿಯಲು ಆರಂಭಿಸಿದ್ದಾರೆ. ನಾಲ್ಕು ವರ್ಷಗಳಲ್ಲಿ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ. ನಿತ್ಯ ಎರಡು ಗಂಟೆಗೂ ಹೆಚ್ಚು ಕಾಲ ಯೋಗಾಭ್ಯಾಸ ಮಾಡುವ ಇವರು, ಕೆಲಸದ ನಡುವೆಯೂ ಯೋಗದ್ದೇ ಧ್ಯಾನ ಮಾಡುತ್ತಿರುತ್ತಾರೆ. ಹೊಸ, ಹೊಸ ಆಸನಗಳನ್ನು ಕಲಿಯುತ್ತಲೇ ಇದ್ದಾರೆ.

ರಾಜ್ಯ, ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಎಲ್ಲ ಸ್ಪರ್ಧಿಗಳಿಗೂ 10 ಆಸನಗಳನ್ನು ನೀಡಲಾಗುತ್ತದೆ. ಒಂದು ನಿಮಿಷಕ್ಕೆ ಒಂದು ಆಸನ ಪ್ರದರ್ಶಿಸಬೇಕು. ಏಕಕಾಲದಲ್ಲಿ ನಾಲ್ವರು ನಿರ್ಣಾಯಕರು ಅಂಕಗಳನ್ನು ನೀಡುತ್ತಿರುತ್ತಾರೆ. ಇಂಥ ಪೈಪೋಟಿ ನಡುವೆ ಆಯ್ಕೆಯಾಗಬೇಕಿದೆ.

ಅಣ್ಣಾವ್ರ ಅಭಿಮಾನಿ

‘ನಾನು ಡಾ.ರಾಜ್‌ಕುಮಾರ್ ಅವರ ಅಭಿಮಾನಿ. ಅವರು ಯೋಗದಲ್ಲಿ ಮಾಡಿದ್ದ ಸಾಧನೆ ನೋಡಿಯೇ ನಾನೂ ಯೋಗಪಟುವಾದೆ. ಅವರು 54ನೇ ವಯಸ್ಸಿನಲ್ಲಿ ಯೋಗ ಕಲಿತರು. ಅವರಿಂದ ಪ್ರೇರಣೆಗೊಂಡು 39ನೇ ವಯಸ್ಸಿನಲ್ಲಿ ಕಲಿಕೆ ಆರಂಭಿಸಿದ್ದೇನೆ’ ಎನ್ನುತ್ತಾರೆ ಕೊಂಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT