ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ‘ಮನ’ಮೋಹಕ ಗೆಲುವು

ಸುಲ್ತಾನ್ ಅಜ್ಲಾನ್ ಷಾ ಕಪ್ ಹಾಕಿ ಟೂರ್ನಿ: ಮನದೀಪ್‌, ವರುಣ್ ಕುಮಾರ್‌ ತಲಾ ಎರಡು ಗೋಲು
Last Updated 29 ಮಾರ್ಚ್ 2019, 18:26 IST
ಅಕ್ಷರ ಗಾತ್ರ

ಇಪೊ, ಮಲೇಷ್ಯಾ: ಮನದೀಪ್ ಸಿಂಗ್ ಮತ್ತೊಮ್ಮೆ ಮಿಂಚಿನ ಆಟವಾಡಿದರು. ಡ್ರ್ಯಾಗ್ ಫ್ಲಿಕ್ಕರ್ ವರುಣ್ ಕುಮಾರ್ ಕೂಡ ಅಮೋಘ ಸಾಮರ್ಥ್ಯ ತೋರಿದರು. ಇವರಿಬ್ಬರ ಅಬ್ಬರದ ಆಟಕ್ಕೆ ಪೋಲೆಂಡ್ ಬೆರಗಾಯಿತು. ಇಲ್ಲಿ ಶುಕ್ರವಾರ ನಡೆದ ಸುಲ್ತಾನ್ ಅಜ್ಲಾನ್ ಷಾ ಕಪ್ ಹಾಕಿ ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ 10–0ಯಿಂದ ಪೋಲೆಂಡ್‌ ಎದುರು ಗೆದ್ದಿತು.

ಮೊದಲ ಮೂರು ಪಂದ್ಯಗಳಲ್ಲಿ ಎರಡು ಜಯ ಮತ್ತು ಒಂದು ಡ್ರಾ ಸಾಧಿಸಿ ಫೈನಲ್‌ಗೇರಿದ್ದ ಭಾರತ ತಂಡ ಶುಕ್ರವಾರ ನಿರಾತಂಕವಾಗಿ ಆಡಿತು. ಪೋಲೆಂಡ್‌ ಎದುರು ಪಂದ್ಯದುದ್ದಕ್ಕೂ ಮೇಲುಗೈ ಸಾಧಿಸಿತು.

ಮೊದಲನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದ ವಿವೇಕ್ ಪ್ರಸಾದ್‌ ಭಾರತಕ್ಕೆ ಮುನ್ನಡೆ ಗಳಿಸಿಕೊಟ್ಟರು. ಏಳನೇ ನಿಮಿಷದಲ್ಲಿ ಸುಮಿತ್ ಕುಮಾರ್ ಮುನ್ನಡೆ ಹೆಚ್ಚಿಸಿದರು. ವರುಣ್ ಕುಮಾರ್‌ ಮತ್ತು ಸುರೇಂದರ್‌ ಕುಮಾರ್‌ ಕ್ರಮವಾಗಿ 18 ಹಾಗೂ 19ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಮುನ್ನಡೆಯನ್ನು ಹೆಚ್ಚಿಸಿದರು. 25ನೇ ನಿಮಿಷದಲ್ಲಿ ವರುಣ್ ಕುಮಾರ್ ಮತ್ತೊಮ್ಮೆ ಚೆಂಡನ್ನು ಗುರಿ ಮುಟ್ಟಿಸಿದರು. 29ನೇ ನಿಮಿಷದಲ್ಲಿ ಸಿಮ್ರನ್‌ಜೀತ್ ಸಿಂಗ್ ಮತ್ತು 36ನೇ ನಿಮಿಷದಲ್ಲಿ ನೀಲಕಂಠ ಶರ್ಮಾ ಗಳಿಸಿದ ಗೋಲುಗಳ ಮೂಲಕ ತಂಡ ಭಾರಿ ಮುನ್ನಡೆಯೊಂದಿಗೆ ವಿರಾಮಕ್ಕೆ ತೆರಳಿತು.

ವಿರಾಮದ ನಂತರ ಭಾರತ ಮತ್ತಷ್ಟು ಪ್ರಬಲ ಆಕ್ರಮಣ ನಡೆಸಿತು. ಮನದೀಪ್‌ ಸಿಂಗ್‌ 50 ಮತ್ತು 51ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದರು. ಅಮಿತ್ ರೋಹಿದಾಸ್‌ 55ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು.

ಶುಕ್ರವಾರ ಗಳಿಸಿದ ಎರಡು ಗೋಲುಗಳೊಂದಿಗೆ ಮನದೀಪ್‌ ಸಿಂಗ್‌ ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎನಿಸಿಕೊಂಡರು. ಅವರು ಒಂದು ಹ್ಯಾಟ್ರಿಕ್ ಒಳಗೊಂಡು ಒಟ್ಟು ಏಳು ಗೋಲು ಗಳಿಸಿದ್ದಾರೆ. ವರುಣ್ ಐದು ಗೋಲುಗಳೊಂದಿಗೆ ಮಿಂಚಿದ್ದಾರೆ.

ಫೈನಲ್‌ನಲ್ಲಿ ಕೊರಿಯ ಎದುರಾಳಿ:ಪ್ರಶಸ್ತಿ ಹಂತದ ಹಣಾಹಣಿ ಶನಿವಾರ ಸಂಜೆ ಆರು ಗಂಟೆಗೆ ನಡೆಯಲಿದ್ದು ಭಾರತ, ದಕ್ಷಿಣ ಕೊರಿಯಾವನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT