ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌: ಪ್ರಜ್ಞೇಶ್‌ ಮುಡಿಗೆ ಸಿಂಗಲ್ಸ್‌ ಕಿರೀಟ

7
ಫೈನಲ್‌ನಲ್ಲಿ ಮುಗ್ಗರಿಸಿದ ಸಾಕೇತ್‌

ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌: ಪ್ರಜ್ಞೇಶ್‌ ಮುಡಿಗೆ ಸಿಂಗಲ್ಸ್‌ ಕಿರೀಟ

Published:
Updated:
Deccan Herald

ಬೆಂಗಳೂರು: ನಾಲ್ಕನೇ ಶ್ರೇಯಾಂಕದ ಆಟಗಾರ ಪ್ರಜ್ಞೇಶ್‌ ಗುಣೇಶ್ವರನ್‌, ಮನಮೋಹಕ ಆಟದ ಮೂಲಕ ಶನಿವಾರ ಕಬ್ಬನ್‌ ಪಾರ್ಕ್‌ನಲ್ಲಿರುವ ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಅಂಗಳದಲ್ಲಿ ಸೇರಿದ್ದ ಟೆನಿಸ್‌ ಪ್ರಿಯರನ್ನು ರಂಜಿಸಿದರು.

ಬಿರುಗಾಳಿ ವೇಗದ ಸರ್ವ್‌ ಮತ್ತು ಮಿಂಚಿನ ಏಸ್‌ಗಳ ಮೂಲಕ ಅನುಭವಿ ಆಟಗಾರ ಸಾಕೇತ್‌ ಮೈನೇನಿ ಅವರನ್ನು ಕಂಗೆಡಿಸಿದ ಅವರು ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೆನಿಸ್‌ ಟೂರ್ನಿಯಲ್ಲಿ ಚೊಚ್ಚಲ ಕಿರೀಟ
ಮುಡಿಗೇರಿಸಿಕೊಂಡರು.

ಸೆಂಟರ್‌ ಕೋರ್ಟ್‌ನಲ್ಲಿ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಚೆನ್ನೈನ ಎಡಗೈ ಆಟಗಾರ ಪ್ರಜ್ಞೇಶ್‌ 6–2, 6–2 ನೇರ ಸೆಟ್‌ಗಳಿಂದ ಗೆದ್ದರು. 55 ನಿಮಿಷಗಳ ಈ ಹೋರಾಟ ಏಕಪಕ್ಷೀಯವಾಗಿ ಅಂತ್ಯಗೊಂಡಿತು.

ಭಾರತದಲ್ಲಿ ನಡೆದ 150ಕೆ ಚಾಲೆಂಜರ್‌ ಟೂರ್ನಿಯೊಂದರ ಸಿಂಗಲ್ಸ್‌ ಫೈನಲ್‌ನಲ್ಲಿ ಆತಿಥೇಯ ಆಟ ಗಾರರು ಮುಖಾಮುಖಿಯಾಗಿದ್ದು ಇದೇ ಮೊದಲು. ಹೀಗಾಗಿ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಗರಿಗೆದರಿತ್ತು.

ಚಾಂಪಿಯನ್‌ ಪಟ್ಟದ ಹೋರಾಟದಲ್ಲಿ ಪ್ರಜ್ಞೇಶ್‌ ಉತ್ತಮ ಆರಂಭ ಕಂಡರು. ಮೊದಲ ಸೆಟ್‌ನ ಪ್ರಥಮ ಗೇಮ್‌ನಲ್ಲೇ ಸಾಕೇತ್‌
ಸರ್ವ್‌ ಮುರಿದ ಅವರು ಅಭಿಮಾನಿ ಗಳಿಂದ ಚಪ್ಪಾಳೆ ಗಿಟ್ಟಿಸಿದರು. ಮರು ಗೇಮ್‌ನಲ್ಲಿ ಬಿರುಸಿನ ಸರ್ವ್‌ಗಳನ್ನು ಮಾಡಿ 2–0 ಮುನ್ನಡೆ ಪಡೆದರು. ನಂತರದ ನಾಲ್ಕು ಗೇಮ್‌ಗಳಲ್ಲಿ ಇಬ್ಬರೂ ಸರ್ವ್‌ ಕಾಪಾಡಿಕೊಂಡು ಸಾಗಿದರು. ಏಳನೇ ಗೇಮ್‌ನಲ್ಲಿ ‘ಡಬಲ್‌ ಫಾಲ್ಟ್‌’ಮಾಡಿದ ಸಾಕೇತ್‌ ಹಿನ್ನಡೆ ಕಂಡರು. ಮರು ಗೇಮ್‌ನಲ್ಲಿ ಬಲಿಷ್ಠ ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳನ್ನು ಸಿಡಿಸಿದ ಪ್ರಜ್ಞೇಶ್‌ ಸಂಭ್ರಮಿಸಿದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 144ನೇ ಸ್ಥಾನದಲ್ಲಿರುವ ಪ್ರಜ್ಞೇಶ್‌ ಎರಡನೇ ಸೆಟ್‌ನಲ್ಲೂ ಮೋಡಿ ಮಾಡಿದರು.

ಮೊದಲ ಗೇಮ್‌ನಲ್ಲೇ ‘ಬ್ರೇಕ್‌ ಪಾಯಿಂಟ್‌’ ಕಲೆಹಾಕಿದ ಅವರು ಪ್ರಶಸ್ತಿಯ ಹಾದಿ ಸುಗಮ ಮಾಡಿಕೊಂಡರು. ಮರು ಗೇಮ್‌ನಲ್ಲಿ ಚೆನ್ನೈನ ಆಟಗಾರ ಸಿಡಿಸಿದ ಸರ್ವ್‌ಗಳಿಗೆ ಸಾಕೇತ್‌ ನಿರುತ್ತರರಾದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 312ನೇ ಸ್ಥಾನದಲ್ಲಿರುವ ಬಲಗೈ ಆಟಗಾರ ಸಾಕೇತ್‌ ನಂತರವೂ ಹಲವು ತಪ್ಪುಗಳನ್ನು ಮಾಡಿದರು. ನೆಟ್‌ನ ಸಮೀಪದಲ್ಲಿ ಚೆಂಡನ್ನು ಡ್ರಾಪ್‌ ಮಾಡುವ ಅವರ ತಂತ್ರ ಫಲಿಸಲಿಲ್ಲ. ಅವರ ಬ್ಯಾಕ್‌ ಹ್ಯಾಂಡ್‌ ರಿಟರ್ನ್‌ಗಳು ನೆಟ್‌ಗೆ ಬಡಿಯುತ್ತಿದ್ದವು. ನಾಲ್ಕು ಗೇಮ್‌ಗಳ ಆಟ ಮುಗಿದಾಗ 3–1ರಿಂದ ಮುಂದಿದ್ದ ಪ್ರಜ್ಞೇಶ್‌ ನಂತರವೂ ಅಬ್ಬರಿಸಿದರು. ಐದನೇ ಗೇಮ್‌ನಲ್ಲಿ ಮತ್ತೊಮ್ಮೆ ಎದುರಾಳಿಯ ಸರ್ವ್‌ ಮುರಿದ ಅವರು ಮರು ಗೇಮ್‌ನಲ್ಲಿ ಆಕ್ರಮಣಕಾರಿ ಆಟದ ಮೂಲಕ ಸರ್ವ್‌ ಕಾಪಾಡಿಕೊಂಡು ಮುನ್ನಡೆಯನ್ನು 5–1ಕ್ಕೆ ಹೆಚ್ಚಿಸಿಕೊಂಡರು. ನಂತರದ ಎರಡು ಗೇಮ್‌ಗಳಲ್ಲೂ ಪರಿಣಾಮಕಾರಿ ಸಾಮರ್ಥ್ಯ ತೋರಿ ಗೆಲುವಿನ ತೋರಣ ಕಟ್ಟಿದರು.

******

ಪ್ರಜ್ಞೇಶ್‌ ತುಂಬಾ ಚೆನ್ನಾಗಿ ಆಡಿದರು. ನನಗೆ ಯಾವ ಹಂತದಲ್ಲೂ ಪುಟಿದೇಳಲು ಅವಕಾಶ ನೀಡಲಿಲ್ಲ. ಹಲವು ತಪ್ಪುಗಳನ್ನು ಮಾಡಿದ್ದರಿಂದ ಪ್ರಶಸ್ತಿಯ ಕನಸು ಕಮರಿತು.

– ಸಾಕೇತ್ ಮೈನೇನಿ

ಆರಂಭದಲ್ಲೇ ಬ್ರೇಕ್‌ ಪಾಯಿಂಟ್‌ ಗಳಿಸಿದ್ದರಿಂದ ವಿಶ್ವಾಸ ಹೆಚ್ಚಿತು. ಬಳಿಕ ಯೋಜನೆಗಳಿಗೆ ಅನುಗುಣವಾಗಿ ಆಡಿದೆ. ಹೀಗಾಗಿ ಪ್ರಶಸ್ತಿಯ ಹಾದಿ ಸುಗಮವಾಯಿತು.

–ಪ್ರಜ್ಞೇಶ್‌ ಗುಣೇಶ್ವರನ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !