ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ ಟೆನಿಸ್‌: ಸುಮಿತ್‌ಗೆ ಶರಣಾದ ಕ್ಲಾರ್ಕ್‌

7
ಶುಭಾರಂಭ ಮಾಡಿದ ಭಾರತದ ಆಟಗಾರ

ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ ಟೆನಿಸ್‌: ಸುಮಿತ್‌ಗೆ ಶರಣಾದ ಕ್ಲಾರ್ಕ್‌

Published:
Updated:
Deccan Herald

ಬೆಂಗಳೂರು: ಟೆನಿಸ್‌ ಆಟದ ಸೊಬಗು ಸವಿಯುವ ಆಸೆಯೊಂದಿಗೆ ಸೋಮವಾರ ಸೆಂಟರ್‌ ಕೋರ್ಟ್‌ನಲ್ಲಿ ಸೇರಿದ್ದ ಉದ್ಯಾನನಗರಿಯ ಅಭಿಮಾನಿಗಳಿಗೆ ಭಾರತದ ಸುಮಿತ್‌ ನಗಾಲ್‌ ನಿರಾಸೆ ಮಾಡಲಿಲ್ಲ.

ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ ಟೂರ್ನಿಯಲ್ಲಿ ಸತತ ಎರಡನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಸುಮಿತ್‌ ಈ ಹಾದಿಯಲ್ಲಿ ಗೆಲುವಿನ ಮುನ್ನುಡಿ ಬರೆದಿದ್ದಾರೆ.

ಕಬ್ಬನ್‌ ಪಾರ್ಕ್‌ನಲ್ಲಿರುವ ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಅಂಗಳದಲ್ಲಿ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಪೈಪೋಟಿಯಲ್ಲಿ ಭಾರತದ ಆಟಗಾರ 6–4, 7–5ರಲ್ಲಿ ಬ್ರಿಟನ್‌ನ ಜೇ ಕ್ಲಾರ್ಕ್‌ ಅವರನ್ನು ಪರಾಭವಗೊಳಿಸಿದರು.

ಹೋದ ವರ್ಷ ನಡೆದಿದ್ದ ಫೈನಲ್‌ನಲ್ಲಿ ಕ್ಲಾರ್ಕ್‌ ಅವರನ್ನು ಮಣಿಸಿ ‍ಪ್ರಶಸ್ತಿ ಗೆದ್ದಿದ್ದ ಸುಮಿತ್‌, ಈ ಬಾರಿಯ ಮೊದಲ ಪಂದ್ಯದಲ್ಲೂ ಬ್ರಿಟನ್‌ ಆಟಗಾರನ ಸದ್ದಡಗಿಸಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 309ನೇ ಸ್ಥಾನ ಹೊಂದಿರುವ ಸುಮಿತ್‌ ಮೊದಲ ಸೆಟ್‌ನಲ್ಲಿ ಮೋಡಿ ಮಾಡಿದರು. ಆರಂಭದ ಎರಡು ಗೇಮ್‌ಗಳಲ್ಲಿ ಉಭಯ ಆಟಗಾರರು ಸರ್ವ್‌ ಕಾಪಾಡಿಕೊಂಡರು. ನಂತರದ ಗೇಮ್‌ನಲ್ಲಿ ಎದುರಾಳಿಯ ಸರ್ವ್‌ ಮುರಿದ ಭಾರತದ ಆಟಗಾರ 2–1ರ ಮುನ್ನಡೆ ಗಳಿಸಿದರು. ಮರು ಗೇಮ್‌ನಲ್ಲೂ ಮಿಂಚಿದ ಅವರು ಮುನ್ನಡೆಯನ್ನು 3–1ಕ್ಕೆ ಹೆಚ್ಚಿಸಿಕೊಂಡರು.

ಟೂರ್ನಿಯಲ್ಲಿ ಏಳನೇ ಶ್ರೇಯಾಂಕ ಹೊಂದಿದ್ದ ಕ್ಲಾರ್ಕ್‌ ಇದರಿಂದ ಎದೆಗುಂದಲಿಲ್ಲ. ಕ್ರಾಸ್‌ಕೋರ್ಟ್‌ ಮತ್ತು ಬಲಿಷ್ಠ ಹಿಂಗೈ ಹೊಡೆತಗಳ ಮೂಲಕ ಸತತ ಎರಡು ಗೇಮ್‌ ಜಯಿಸಿ 3–3ರಲ್ಲಿ ಸಮಬಲ ಮಾಡಿಕೊಂಡರು. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 174ನೇ ಸ್ಥಾನದಲ್ಲಿರುವ ಕ್ಲಾರ್ಕ್‌ ಎಂಟನೇ ಗೇಮ್‌ನಲ್ಲಿ ಸರ್ವ್‌ ಉಳಿಸಿಕೊಂಡು 4–3ರ ಮುನ್ನಡೆ ಪಡೆದರು. ಈ ಹಂತದಲ್ಲಿ ಸುಮಿತ್‌ ಗರ್ಜಿಸಿದರು. ಬಿರುಸಿನ ಸರ್ವ್‌ ಮತ್ತು ಆಕರ್ಷಕ ಡ್ರಾಪ್‌ಗಳ ಮೂಲಕ ಗೇಮ್‌ ಗೆದ್ದು ಅಭಿಮಾನಿಗಳ ಮೊಗದಲ್ಲಿ ನಗು ಅರಳುವಂತೆ ಮಾಡಿದರು. 10ನೇ ಗೇಮ್‌ನಲ್ಲಿ ‘ಏಸ್‌’ ಸಿಡಿಸುವ ಮೂಲಕ ಸೆಟ್‌ ಕೈವಶ ಮಾಡಿಕೊಂಡರು.

ಎರಡನೇ ಸೆಟ್‌ನಲ್ಲೂ ತುರುಸಿನ ಹೋರಾಟ ಮುಂದುವರಿಯಿತು. ಒಂಬತ್ತನೇ ಗೇಮ್‌ನ ಆಟ ಮುಗಿದಾಗ ಕ್ಲಾರ್ಕ್‌ 5–4ರಿಂದ ಮುಂದಿದ್ದರು. ಇದರಿಂದ ಸುಮಿತ್‌ ವಿಚಲಿತರಾಗಲಿಲ್ಲ. ಸತತ ಮೂರು ಗೇಮ್‌ಗಳನ್ನು ಗೆದ್ದ ಅವರು ಖುಷಿಯ ಕಡಲಲ್ಲಿ ತೇಲಿದರು.

ಇತರ ಪಂದ್ಯಗಳಲ್ಲಿ ಮಾರ್ಕ್‌ ಪೋಲ್ಸ್‌ಮನ್‌ 1–6, 6–4, 6–2ರಲ್ಲಿ ಮೇವರಿಕ್‌ ಬೇನ್ಸ್‌ ಎದುರೂ, ಅಲೆಕ್ಸಾಂಡರ್‌ ನೆಡೊವ್ಯಸೋವ್‌ 6–3, 6–2ರಲ್ಲಿ ಸ್ಕಾಟ್‌ ಗ್ರೀಕ್‌ಸ್ಪೂರ್‌ ಮೇಲೂ, ಸೆಮ್‌ ಇಕೆಲ್‌ 6–2, 3–6, 7–6ರಲ್ಲಿ ಮಾರ್ಕೊ ಟ್ರಂಗೆಲ್ಲಿಟಿ ವಿರುದ್ಧವೂ ವಿಜಯಿಯಾದರು.

ಡಬಲ್ಸ್‌ ವಿಭಾಗದ ಪಂದ್ಯಗಳಲ್ಲಿ ಪ್ರಜ್ವಲ್‌ ದೇವ್‌ ಮತ್ತು ನಿಕಿ ಪೂಣಚ್ಚ 1–6, 7–6, 10–2ರಲ್ಲಿ ಅಲೆಕ್ಸಾಂಡರ್‌ ಪ್ಯಾವ್ಲಿಚೆಂಕೊವ್‌ ಮತ್ತು ಫಿಲಿಪ್‌ ಪೆಲಿವೊ ಎದುರೂ, ಮ್ಯಾಕ್ಸ್‌ ಪರ್ಸೆಲ್‌ ಮತ್ತು ಲೂಕ್‌ ಸ್ಯಾವಿಲ್‌ 6–2, 6–2ರಲ್ಲಿ ಚಾಂಡ್ರಿಲ್‌ ಸೂದ್‌ ಮತ್ತು ಲಕ್ಷಿತ್‌ ಸೂದ್‌ ವಿರುದ್ಧವೂ, ಅರ್ಜುನ್‌ ಖಾಡೆ ಮತ್ತು ಸಾಕೇತ್‌ ಮೈನೇನಿ 6–3, 3–6, 11–9ರಲ್ಲಿ ಸಂಚಾಯ್‌ ರತಿವತನ ಮತ್ತು ಸೊಂಚಾತ್‌ ರತಿವತನ ಎದುರೂ, ಬ್ಲಾಜ್‌ ಕ್ಯಾವಸಿಕ್‌ ಮತ್ತು ಟ್ರಿಸ್ಟಾನ್‌ ಸಮುಯಿ 6–4, 7–5ರಲ್ಲಿ ರಾಡು ಅಲ್ಬೊಟ್‌ ಮತ್ತು ಮಾರ್ಕ್‌ ಪೋಲ್ಸ್‌ಮನ್‌ ವಿರುದ್ಧವೂ ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !