ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನ್‌ ಸಿನ್‌ ಬೆಂಗಳೂರು ಓಪನ್‌ ಚಾಂಪಿಯನ್‌

ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೂರ್ನಿ: ಬೋರ್ನ ಗೋಜೊಗೆ ನಿರಾಸೆ
Last Updated 13 ಫೆಬ್ರುವರಿ 2022, 16:16 IST
ಅಕ್ಷರ ಗಾತ್ರ

ಬೆಂಗಳೂರು: ಚುರುಕಿನ ಪಾದಚಲನೆ ಮತ್ತು ನಿಖರ ಶಾಟ್‌ಗಳ ಮೂಲಕ ಮಿಂಚಿದ ಚೀನಾ ತೈಪೆಯ ಚುನ್‌ ಸಿನ್ ಸೆಂಗ್‌, ಉದ್ಯಾನ ನಗರಿಯ ಟೆನಿಸ್ ಪ್ರಿಯರನ್ನು ಮುದಗೊಳಿಸಿದರು. ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ ಟೂರ್ನಿಯ ಚಾಂಪಿಯನ್‌ ಪಟ್ಟ ತಮ್ಮದಾಗಿಸಿಕೊಂಡರು.

ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಆವರಣದಲ್ಲಿ ಭಾನುವಾರ ಒಂದು ತಾಸು 44 ನಿಮಿಷ ನಡೆದ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಚುನ್‌ ಸಿನ್ 6-4, 7-5ರಲ್ಲಿ ಕ್ರೊವೇಷ್ಯಾದ ಬೋರ್ನ ಗೋಜೊ ಅವರನ್ನು ಮಣಿಸಿದರು. 20 ವರ್ಷದ ಚುನ್ ಸಿನ್ ಗೆದ್ದ ಎರಡನೇ ಎಟಿಪಿ ಟ್ರೋಫಿ ಇದು.

ಬ್ಯಾಕ್‌ಹ್ಯಾಂಡ್ ಸ್ಲೈಜ್ ಮತ್ತು ಬಲಶಾಲಿ ಫೋರ್‌ಹ್ಯಾಂಡ್ ಶಾಟ್‌ಗಳ ಮೂಲಕ ಮಿಂಚಿದ ತೈಪೆ ಆಟಗಾರನ ಎದುರು ಕ್ರೊವೇಷ್ಯಾ ಆಟಗಾರ ಸಪ್ಪೆಯಾದರು.ಎಟಿಪಿ ಟೂರ್ನಿಯೊಂದರಲ್ಲಿ ಇದೇ ಮೊದಲ ಬಾರಿ ಫೈನಲ್‌ ಪ್ರವೇಶಿಸಿದ ಗೋಜೊ ಮಿಂಚಿನ ಏಸ್‌ಗಳ ಮೂಲಕ ಕೆಲವು ಪಾಯಿಂಟ್‌ಗಳನ್ನು ಕಲೆಹಾಕಿದರೂ ಸ್ವಯಂ ತಪ್ಪುಗಳಿಂದಾಗಿ ಪಾಯಿಂಟ್‌ಗಳನ್ನು ಕಳೆದುಕೊಂಡರು.

ಚುನ್‌ ಸಿನ್ ಮೊದಲ ಸೆಟ್ ಗೆದ್ದು ಸಂಭ್ರಮಿಸಿದಾಗ ಅಂಗಣದಲ್ಲಿ ಕೃತಕ ಬೆಳಕಿನ ‘ಹೊನಲು’ ಹರಿಯಿತು. ಎರಡನೇ ಸೆಟ್‌ನ ಆರಂಭದಲ್ಲಿ ಚುನ್ ಸಿನ್ ಎರಡು ಗೇಮ್‌ಗಳನ್ನು ಗೆದ್ದು ಸುಲಭ ಜಯದತ್ತ ಹೆಜ್ಜೆ ಹಾಕಿದರು. ಆದರೆ ತಂತ್ರಗಳನ್ನು ಬದಲಿಸಿದ ಗೋಜೊ ತಿರುಗೇಟು ನೀಡಿದರು. ಕ್ರಾಸ್ ಕೋರ್ಟ್ ಡ್ರಾಪ್‌ ಶಾಟ್‌ಗಳ ಮೂಲಕ ಮಿಂಚಿದ ಅವರು ಶರವೇಗದಲ್ಲಿ ಸತತ ಐದು ಗೇಮ್‌ ಗೆದ್ದುಕೊಂಡರು.

ಚುನ್ ಸಿನ್ ಎದೆಗುಂದಲಿಲ್ಲ. ಸತತ ಮೂರ ಗೇಮ್‌ಗಳನ್ನು ಗೆದ್ದು ಪ್ರೇಕ್ಷಕರನ್ನು ಸಂಭ್ರಮದ ಅಲೆಯಲ್ಲಿ ತೇಲಿಸಿದರು. ಡಬಲ್ ಫಾಲ್ಟ್‌ಗಳಿಂದಾಗಿ ಒಂಬತ್ತನೇ ಗೇಮ್‌ನಲ್ಲಿ ಸರ್ವ್ ಕಳೆದುಕೊಂಡ ಗೋಜೊ 11ನೇ ಗೇಮ್‌ನಲ್ಲೂ ಅದೇ ತಪ್ಪು ಮುಂದುವರಿಸಿದರು. ಇದು ಚುನ್ ಸಿನ್ ಅವರ ಗೆಲುವಿನ ಓಟವನ್ನು ಸುಲಭವಾಗಿಸಿತು.

ಎರಡನೇ ಸುತ್ತು ಪ್ರವೇಶಿಸಿದ ನಿತಿನ್‌, ಶ್ರೀರಾಮ್

ನಿತಿನ್ ಕುಮಾರ್ ಸಿನ್ಹಾ ಮತ್ತು ಎನ್‌.ಶ್ರೀರಾಮ್ ಬಾಲಾಜಿ ಅವರು ಬೆಂಗಳೂರು ಓಪನ್–2 ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಜಯ ಗಳಿಸಿ ಎರಡನೇ ಸುತ್ತು ಪ್ರವೇಶಿಸಿದರು. ಕೆಎಸ್‌ಎಲ್‌ಟಿಎ ಅಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ನಿತಿನ್ ಕುಮಾರ್ ಜರ್ಮನಿಯ ಕಾಯ್‌ ವೆರ್ನೆಟ್‌ ವಿರುದ್ಧ 3-6,7-7 (9), 6-3ರಲ್ಲಿ ಗೆದ್ದರು. ಶ್ರೀರಾಮ್ ಬಾಲಾಜಿ ಬ್ರೆಜಿಲ್‌ನ ಗ್ಯಾಬ್ರಿಯಲ್ ಡಿಕಾಮ್ಸ್‌ ಎದುರು 4-6, 6-1, 6-4ರಲ್ಲಿ ಜಯ ಗಳಿಸಿದರು. ಮುಖ್ಯ ಸುತ್ತಿನ ಪಂದ್ಯಗಳು ಸೋಮವಾರದಿಂದ ನಡೆಯಲಿವೆ.

ಅರ್ಹತಾ ಸುತ್ತಿನ ಮೊದಲ ದಿನದ ಫಲಿತಾಂಶಗಳು: ಭಾರತದ ಮುಕುಂದ್ ಶಶಿಕುಮಾರ್‌ಗೆ ಅಭಿನವ್ ಷ‌ಣ್ಮುಖಂ ಎದುರು 6-2, 6-3ರಲ್ಲಿ ಜಯ; ಭಾರತದ ಮನೀಷ್ ಸುರೇಶ್ ಕುಮಾರ್‌ಗೆ ಋಷಿ ರೆಡ್ಡಿ ಎದುರು 6-1, 6-0ಯಿಂದ ಗೆಲುವು; ಆಸ್ಟ್ರೇಲಿಯಾದ ಆ್ಯಂಡ್ರ್ಯೂ ಹ್ಯಾರಿಸ್‌ಗೆ ಭಾರತದ ಪ್ರಜ್ವಲ್ ದೇವ್‌ ವಿರುದ್ಧ 6-2 7-6 (4)ರಲ್ಲಿ, ಭಾರತದ ದಿಗ್ವಿಜಯ್ ಪ್ರತಾಪ್‌ಗೆ ಆಸ್ಟ್ರೇಲಿಯಾದ ಥಾಮಸ್‌ ಫ್ಯನ್‌ಕಟ್‌ ಎದುರು 4-6, 7-5, 6-2ರಲ್ಲಿ, ಜಪಾನ್‌ನ ರಿಯೊ ನೊಗುಚಿಗೆ ಭಾರತದ ಸೂರಜ್ ಪ್ರಬೋಧ್‌ ವಿರುದ್ಧ 6-1, 7-6 (2)ರಲ್ಲಿ, ಭಾರತದ ನಿತಿನ್ ಕುಮಾರ್ ಸಿನ್ಹಾಗೆ ಜರ್ಮನಿಯ ಕಾಯ್‌ ವೆಹ್ನೆಟ್‌ ವಿರುದ್ಧ 3-6,7-7 (9), 6-3ರಲ್ಲಿ, ರಷ್ಯಾದ ಬೋಗ್ದನ್ ಬೊಬ್ರೊವ್‌ಗೆ ಜಪಾನ್‌ನ ತೊಶಿಹಿಡೆ ಮಸುಹಿ ವಿರುದ್ದ 5-0ಯಿಂದ (ನಿವೃತ್ತಿ) ಗೆಲುವು; ಜೆಕ್ ಗಣರಾಜ್ಯದ ಡಾಮಿನಿಕ್ ಪಲನ್‌ಗೆ ಆಸ್ಟ್ರಿಯಾದ ಅಲೆಕ್ಸಾಂಡರ್ ಎರ್ಲರ್‌ ವಿರುದ್ಧ 7-6 (3), 4-6, 6-3ರಲ್ಲಿ, ಭಾರತದ ಶ್ರೀರಾಮ್ ಬಾಲಾಜಿಗೆ ಬ್ರೆಜಿಲ್‌ನ ಗ್ಯಾಬ್ರಿಯೆಲ್ ಡಿಕ್ಯಾಮ್ಸ್‌ ವಿರುದ್ಧ 4-6, 6-1, 6-4ರಲ್ಲಿ, ಗ್ರೀಸ್‌ನ ಮಾರ್ಕೊಸ್‌ ಕಲವೆಲೊನಿಸ್‌ಗೆ ಜೆಕ್ ಗಣರಾಜ್ಯದ ಜರಸ್ಲೊವ್‌ ಪೊಪಿಸಿಲ್ ಎದುರು 6-4, 3-6, 6-3ರಲ್ಲಿ, ಉಕ್ರೇನ್‌ನ ವ್ಲಾಡಿಸ್ಲಾವ್‌ ಒರ್ಲೊವ್‌ಗೆ ಧೀರಜ್ ಶ್ರೀನಿವಾಸನ್ ವಿರುದ್ಧ 6-0, 6-1ರಲ್ಲಿ, ಸ್ವಿಟ್ಜರ್ಲೆಂಡ್‌ನ ಆ್ಯಂಟೊಯ್ನ್‌ ಬೆಲಿಯರ್‌ಗೆ ಭಾರತದ ಕರಣ್ ಸಿಂಗ್ ವಿರುದ್ಧ 7-5, 6-3ರಲ್ಲಿ ಜಯ.‌

ಪ್ರವಾಸೋದ್ಯಮ ಇಲಾಖೆ ಬೆಂಬಲ

ಈ ವರೆಗಿನ ನಾಲ್ಕು ಆವೃತ್ತಿಗಳಿಗೆ ಬೆಂಬಲ ನೀಡಿರುವ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಬೆಂಗಳೂರು ಓಪನ್‌ನ ಮುಂದಿನ ಐದು ಆವೃತ್ತಿಗಳಿಗೂ ಕೈಜೋಡಿಸಲು ಮುಂದಾಗಿರುವುದಾಗಿ ಸಂಘಟಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT